SDPI ಉಡುಪಿ ವತಿಯಿಂದ ಜಿಲ್ಲಾ ಪ್ರತಿನಿಧಿ ಸಭೆ*

SDPI ಉಡುಪಿ ವತಿಯಿಂದ ಜಿಲ್ಲಾ ಪ್ರತಿನಿಧಿ ಸಭೆ*
0Shares

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಮಧ್ಯಂತರ ಜಿಲ್ಲಾ ಪ್ರತಿನಿಧಿ ಸಭೆಯು ಇಂದು ಉಡುಪಿಯ ಪುರಭವನದಲ್ಲಿ ಜಿಲ್ಲಾ ಅಧ್ಯಕ್ಷರಾದ ಆಸಿಫ್ ಕೋಟೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯನ್ನು ಪಕ್ಷದ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ದೇಶದ ಸಮಕಾಲೀನ ರಾಜಕೀಯ ಬೆಳವಣಿಗೆಗಳು, ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ಎಸ್‌ಡಿಪಿಐ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಸಮಿತಿಯ ಕಳೆದ ಒಂದೂವರೆ ವರ್ಷಗಳ ಅವಧಿಯ ಸಂಘಟನಾ ಹಾಗೂ ಆಡಳಿತಾತ್ಮಕ ವರದಿಗಳನ್ನು ಕ್ರಮವಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ವೈ.ಎಸ್. ಮತ್ತು ಕಾರ್ಯದರ್ಶಿ ನಸೀಮಾ ಫಾತಿಮಾ ಮಂಡಿಸಿದರು. ವರದಿಗಳ ಕುರಿತು ಪ್ರತಿನಿಧಿಗಳು ವಿಸ್ತೃತ ಚರ್ಚೆ ನಡೆಸಿ, ಹಲವು ಸಲಹೆ-ಸೂಚನೆಗಳನ್ನು ನೀಡಿದರು. ಬಳಿಕ ವರದಿಗಳನ್ನು ಸಭೆಯು ಸರ್ವಾನುಮತದಿಂದ ಅನುಮೋದಿಸಿತು.

ಮಧ್ಯಂತರ ಅವಧಿಯಲ್ಲಿ ಪಕ್ಷ ನಡೆಸಿದ ವಿವಿಧ ಚಟುವಟಿಕೆಗಳನ್ನು ಒಳಗೊಂಡ ವೀಡಿಯೊ ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು. ಬಳಿಕ ವೀಕ್ಷಕರ ಅಭಿಪ್ರಾಯಗಳನ್ನು ರಾಜ್ಯ ನಾಯಕರು ಹಂಚಿಕೊಂಡರು.

ಅನಂತರ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ಅಶ್ರಫ್ ಅಗ್ನಾಡಿ ಅವರು “ಪರಿಣಾಮಕಾರಿ ಆಡಳಿತಾತ್ಮಕ ನಿರ್ವಹಣೆ” ವಿಷಯದ ಕುರಿತು ವಿಶೇಷ ತರಗತಿ ನಡೆಸಿ, ಸಂಘಟನಾ ನಿರ್ವಹಣೆಯ ವಿವಿಧ ಆಯಾಮಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ ನೂತನ ಜಿಲ್ಲಾ ಕಾರ್ಯಕಾರಿ ಸಮಿತಿ (DWC) ಸದಸ್ಯರು ಹಾಗೂ ರಾಜ್ಯ ಪ್ರತಿನಿಧಿ ಮಂಡಳಿ (SRC) ಕೌನ್ಸಿಲರ್‌ಗಳ ಹೆಸರನ್ನು ಘೋಷಿಸಲಾಯಿತು. ಉಡುಪಿ ಜಿಲ್ಲೆಯ ಸಾಮಾಜಿಕ, ರಾಜಕೀಯ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಹಲವು ಮಹತ್ವದ ನಿರ್ಣಯಗಳನ್ನು ಮಂಡಿಸಿ ಸಭೆಯ ಅನುಮೋದನೆ ಪಡೆಯಲಾಯಿತು.

ಸಮಾರೋಪ ಭಾಷಣ ಮಾಡಿದ ರಾಜ್ಯ ಸಮಿತಿ ಸದಸ್ಯ ಶಾಹಿದ್ ಅಲಿ ಅವರು, ಪಕ್ಷದ ಮುಂದಿನ ಹೋರಾಟಗಳು ಹಾಗೂ ಸಂಘಟನಾ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರು ಇನ್ನಷ್ಟು ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.

ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರ ಸಮಿತಿಗಳ ಪದಾಧಿಕಾರಿಗಳು, ಜಿಲ್ಲಾ ಸಮಿತಿ ಸದಸ್ಯರು ಹಾಗೂ ವಿಶೇಷ ಆಹ್ವಾನಿತರು ಸಭೆಯಲ್ಲಿ ಭಾಗವಹಿಸಿದ್ದರು.

ನಸೀಮಾ ಫಾತಿಮಾ ಅವರು ವಂದನಾರ್ಪಣೆ ಸಲ್ಲಿಸಿದರು. ಶಫೀಕ್ ಉಡುಪಿ ಕಾರ್ಯಕ್ರಮವನ್ನು ನಿರೂಪಿಸಿದರು.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now