
ಮೂಡಬಿದ್ರೆ: 2026 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 600ರಲ್ಲಿ 600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿಶಾ ಪೂಜಾರಿಯ ಮುಂದಿನ ವಿದ್ಯಾಭ್ಯಾಸಕ್ಕೆ ಮಹತ್ವದ ಬೆಂಬಲ ಲಭಿಸಿದೆ.
ವಿಶ್ವ ಬಂಟರ ಪ್ರತಿಷ್ಠಾನದ ಮಹಾಪೋಷಕರಾದ ಡಾ. ಬಿ.ಆರ್. ಶೆಟ್ಟಿ ಅವರು ದಿಶಾ ಪೂಜಾರಿಯ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ.
ಸೋಮವಾರ ಸಂಜೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಅವರ ಕಚೇರಿಯಲ್ಲಿ ವಿಶ್ವ ಬಂಟರ ಪ್ರತಿಷ್ಠಾನದ ವತಿಯಿಂದ ದಿಶಾ ಅವರನ್ನು ಗೌರವಿಸಲಾಯಿತು.
ಅವಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ. ಬಿ.ಆರ್. ಶೆಟ್ಟಿ ದೂರವಾಣಿ ಮೂಲಕ ದಿಶಾಳೊಂದಿಗೆ ಮಾತನಾಡಿ ಅಭಿನಂದನೆ ಸಲ್ಲಿಸಿದರು. ಜೊತೆಗೆ, ದಿಶಾಳ ಆಯ್ಕೆಯಂತೆ ಆಳ್ವಾಸ್ ಪದವಿ ಕಾಲೇಜಿನಲ್ಲಿ ಬಿ.ಕಾಂ ಶಿಕ್ಷಣ ಹಾಗೂ ನಂತರದ ಕನಸಾದ ಚಾರ್ಟರ್ಡ್ ಅಕೌಂಟೆಂಟ್ ಆಗುವವರೆಗಿನ ಶಿಕ್ಷಣ, ಊಟ ಮತ್ತು ವಸತಿ ಸೇರಿದಂತೆ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದರು.
ಇದೇ ವೇಳೆ, ದಿಶಾ ಪೂಜಾರಿ ಪಿಯುಸಿ ಶಿಕ್ಷಣ ಪಡೆದ ಆಳ್ವಾಸ್ ಆವರಣದಲ್ಲಿ ಡಾ. ಬಿ.ಆರ್. ಶೆಟ್ಟಿ ಅವರ ಹೆಸರಿನ ಬ್ಲಾಕ್ನಲ್ಲಿ ಛಾಯಾಚಿತ್ರಗಳನ್ನು ತೆಗೆಯಲಾಯಿತು.
ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ವಿಶ್ವ ಬಂಟರ ಪ್ರತಿಷ್ಠಾನದ ಪ್ರಾಜೆಕ್ಟ್ ಡೈರೆಕ್ಟರ್ ಡಾ. ಸಂಜೀವ್ ರೈ, ಕಾರ್ಯದರ್ಶಿ ಡಾ. ಬಿ. ಸಚ್ಚಿದಾನಂದ ರೈ, ಉಪಾಧ್ಯಕ್ಷ ಸಿಎ ಸುಧೀರ್ ಕುಮಾರ್ ಶೆಟ್ಟಿ, ಖಜಾಂಚಿ ಸಿಎ ಪ್ರವೀಣ್ ಕುಮಾರ್ ಶೆಟ್ಟಿ, ಟ್ರಸ್ಟಿಗಳಾದ ಡಾ. ಶಶಿಧರ್ ಶೆಟ್ಟಿ, ಪ್ರಕಾಶ್ ಮಣೈ ಹಾಗೂ ಸದಸ್ಯರಾದ ದೀಪಕ್ ಪ್ರಸಾದ್ ಮತ್ತು ಜೀವರಾಜ್ ಶೆಟ್ಟಿ ಉಪಸ್ಥಿತರಿದ್ದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now