
ಮುಂಬಯಿ, ಮಾ.18: ‘ಕನ್ನಡಿಗಾಸ್ ಹೆಲ್ಪ್ ಲೈನ್’ನ ಸೇವೆ, ಸಾಂಘಿಕತೆ ಮತ್ತು ಐಕ್ಯತೆಯ ಮನೋಭಾವ ಕೇವಲ ಸಂಕಷ್ಟದ ಸಮಯಕ್ಕೆ ಮಾತ್ರ ಸೀಮಿತವಾಗಿರದೆ, ನಿರಂತರವಾಗಿ ಹಾಗೂ ಉತ್ತಮ ಮಾದರಿಯಾಗಿ ಮುಂದುವರೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು. ಅಲ್ಲದೇ ರಾಷ್ಟ್ರೀಯ ಹಾಗೂ ರಾಜ್ಯೋತ್ಸವ ಸಂಭ್ರಮವನ್ನೂ ಈ ನಾಡಿನಲ್ಲಿ ಎಲ್ಲರೂ ಜೊತೆಯಾಗಿಯೇ ಆಚರಿಸೋಣ ಎಂದು ಅನಿವಾಸಿ ಭಾರತೀಯ ಪ್ರತಿಷ್ಠಿತ ಉದ್ಯಮಿ ಡಾ| ರೊನಾಲ್ಡ್ ಕೊಲಾಸೋ ಕರೆಯಿತ್ತರು.
ಇತ್ತೀಚೆಗೆ ತಮ್ಮ ದುಬಾಯಿಯಲ್ಲಿನ ನಿವಾಸದಲ್ಲಿ ಆಯೋಜಿಸಿದ್ದ ‘ಇಫ್ತಾರ್ ಸೌಹಾರ್ದ ಕೂಟ’ದಲ್ಲಿ ಕುಟುಂಬ ಸಮೇತರಾಗಿ ಬಂದ ಎಲ್ಲಾ ಹೆಲ್ಪ್‌ಲೈನ್ ತಂಡದ ಸದಸ್ಯರಿಗೆ ಅವರ ನಿಸ್ವಾರ್ಥ ಸೇವೆಗೆ ಅಭಿವಂದಿಸಿ ಮಾತನಾಡಿದ ಡಾ| ಕೊಲಾಸೋ, ಈ ಸೇವೆಯು ಸೌಹಾರ್ದತೆಯ ಸಂದೇಶ ಸಾರಿದ ಮಾನವೀಯತಾ ಧರ್ಮಕ್ಕೆ ಪೂರಕವಾದುದು. ನಾವು ಪ್ರಾಂತ್ಯ, ಜಿಲ್ಲೆ, ಭಾಷೆ, ವರ್ಗ, ಹುದ್ದೆ, ಜಾತಿ, ಧರ್ಮ ಅವನ್ನೆಲ್ಲಾ ಮೀರಿ ‘ಕನ್ನಡಿಗಾಸ್ ಹೆಲ್ಪ್ ಲೈನ್’ತಂಡ ಒಗ್ಗೂಡಿ ಸಲ್ಲಿಸಿದ ಸೇವೆಯಿಂದ ಉತ್ತಮ ಕೋಮು ಸೌಹಾರ್ದತೆಯ ಸಂದೇಶವಾಗಿದ್ದು ಇದು ನಮ್ಮೆಲ್ಲರ ತಾಯ್ನಾಡಿಗೂ ಪಸರಿಸಲಿ, ಅಲ್ಲಿಯೂ ಸಾಮರಸ್ಯ, ಸಮಾನತೆಯ ಬಾಳು ಬೆಳಗಿ, ಆಥಿಕ ಹಾಗೂ ಸರ್ವತೋಮುಖ ಅಭಿವೃದ್ಧಿಗೂ ಇದು ಪೂರಕವಾಗಲಿ ಎಂದು ರೊನಾಲ್ಡ್ ಕೊಲಾಸೋ ಆಶಿಸಿದರು.

ಪ್ರತಿಷ್ಠಿತ ಅನಿವಾಸಿ ಉದ್ಯಮಿ ಡಾ| ರೊನಾಲ್ಡ್ ಕೊಲಾಸೋ ನೇತೃತ್ವದಲ್ಲಿ ಹಿದಾಯತ್ ಅಡ್ಡೂರು ಅವರ ಸಂಯೋಜನೆಯಲ್ಲಿ ಯುಎಇ ಅಲ್ಲಿರುವ ಕನ್ನಡಿಗರ ೩೦ಕ್ಕೂ ಹೆಚ್ಚಿನ ಸಂಘಟನೆಗಳನ್ನು ಒಟ್ಟುಗೂಡಿಸಿ ಕೊಂಡು ‘ಕನ್ನಡಿಗಾಸ್ ಹೆಲ್ಪ್ ಲೈನ್’ ತಂಡವು ಸಂಕಷ್ಟಕ್ಕೆ ಸಿಲುಕಿರುವ ಪ್ರವಾಸಿ ಕನ್ನಡಿಗರನ್ನು, ಅನಾರೋಗ್ಯಕ್ಕೀಡಾದ, ಹಾಗೂ ಊಟ, ವಸತಿ ಇಲ್ಲದವರನ್ನು ಭೇಟಿ ಮಾಡಿ, ನೆರವಿನ ಹಸ್ತವನ್ನು ನೀಡುವ ಮೂಲಕ ಇಲ್ಲಿನ ಅನಿವಾಸಿ ಭಾರತೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಕೆಹೆಚ್‌ಎಲ್‌ನ ಹಗಲಿರುಳ ಕಾರ್ಯನಿರ್ವಹಣೆಗೆ ಅನಿವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದರು.
ಹಗಲಿರುಳು ‘ಕನ್ನಡಿಗಾಸ್ ಹೆಲ್ಪ್ ಲೈನ್’ ಸೇವೆ ಸಲ್ಲಿಸಿದೆ: ಹಿದಾಯತ್ ಅಡ್ಡೂರು
ಪ್ರಸಕ್ತ ಸೇವೆಯ ಬಗ್ಗೆ ಮಾಧ್ಯಮದ ಜೊತೆ ‘ಕನ್ನಡಿಗಾಸ್ ಹೆಲ್ಪ್ ಲೈನ್’ ಸಂಯೋಜಕ ಹಿದಾಯತ್ ಅಡ್ಡೂರು, ಯುಎಇಯಲ್ಲಿ ತಾಯ್ನಾಡಿಗೆ ತೆರಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದ ೬೩೦ಕ್ಕೂ ಹೆಚ್ಚು ಜನರಿಗೆ ವಿಮಾನ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಿ, ಸುರಕ್ಷಿತವಾಗಿ ತಾಯ್ನಾಡು ಸೇರುವಂತೆ ಮಾಡಲಾಗಿದೆ ಎಂದಿದ್ದಾರೆ.
ಸಂಕಷ್ಟದ ವೇಳೆ ತುರ್ತು ಸೇವಾ ಅವಶ್ಯಕತೆವಿರುವ ವೃದ್ಧರು, ಗರ್ಭಿಣಿಯರು, ಅನಾರೋಗ್ಯದಿಂದಿರುವವರು, ಇಂತಹ ಇಲ್ಲಿರುವ ಜನರನ್ನು ತಾಯ್ನಾಡಿಗೆ ಕಳುಹಿಸಲು ೧೮೦ ಆಸನಗಳಿರುವ ಚಾರ್ಟರ್ ಫ್ಲೈಟ್ ವ್ಯವಸ್ಥೆ ಮಾಡಲು ಸಂಪೂರ್ಣ ಮೊತ್ತದ ಹಣವನ್ನು ನೀಡುವುದಾಗಿ ಕೂಡ, ಡಾ| ರೊನಾಲ್ಡ್ ಕೊಲಾಸೋ ‘ಕನ್ನಡಿಗಾಸ್ ಹೆಲ್ಪ್ ಲೈನ್’ಗೆ ಭರವಸೆಯನ್ನಿತ್ತರು. ಜೊತೆಗೆ ಇಲ್ಲಿ ಸಿಲುಕಿದ್ದ ಪ್ರವಾಸಿ ಕನ್ನಡಿಗರೊಬ್ಬರಿಗೆ ವೈದ್ಯಕೀಯ ಶಸ್ತ್ರಚಿಕಿತ್ಸೆಗೆ ಹಾಗೂ ಅಗತ್ಯವಿರುವವರಿಗೆ ಊಟ ಉಪಚಾರಕ್ಕೆ ಬೇಕಾದ ಹಣದ ಸಹಾಯವನ್ನು ನೀಡುವುದಾಗಿಯೂ ನಮಗೆ ಭರವಸೆ ನೀಡಿದ್ದರು. ಇಂಡಿಯನ್ ಕೌನ್ಸಿಲೇಟ್ ನಿಂದ ನಮ್ಮ ಬಳಿ ಬಂದಂತ ೨೨ ಮಂದಿ ಅನಾರೋಗ್ಯಪೀಡಿತರಿಗೆ ಔಷಧಿಯನ್ನು ಕೊಲಾಸೋ ಅವರು ನೀಡಿದ ಹಣದಿಂದಲೇ ನೀಡಲಾಗಿದೆ. ಕೊಲಾಸೋ ಅವರು ನಮಗೆ ಬೇಕಾದ ಎಲ್ಲಾ ರೀತಿಯ ಹಣಕಾಸಿನ ನೆರವನ್ನು ನೀಡಿ ನಮಗೆ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಇದೇ ವೇಳೆ ದುಬಾಯಿನಲ್ಲಿ ವಕ್ವಾಡಿ ಪ್ರವೀಣ್‌ಕುಮಾರ್ ಶೆಟ್ಟಿ ಹಾಗೂ ಇಸಾಕ್ ಹಾಜಿ ಅವರ ಹೋಟೆಲ್‌ಗಳಲ್ಲಿ, ಅಜ್ಮಾನ್‌ನಲ್ಲಿ ಧೀರಜ್ ಜೈನ್ ಅವರ ಫಾರ್ಮ್ ಹೌಸ್‌ನಲ್ಲಿ ೨೩೫ಕ್ಕಿಂತಲೂ ಹೆಚ್ಚು ಜನರಿಗೆ ಉಚಿತವಾಗಿ ವಸತಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ೭೧ ಜನರಿಗೆ ದುಬೈಯ ರಾಶಿದ್ ಆಸ್ಪತ್ರೆಯ ನುರಿತ ವೈದ್ಯರಿಂದ ವೈದ್ಯಕೀಯ ತಪಾಸಣೆ, ೩೨ ಮಂದಿಗೆ ಔಷಧಿ ಒದಗಿಸುವ ಮೂಲಕ ವೈದ್ಯಕೀಯ ಸಹಾಯ ಮಾಡಲಾಗಿದೆ.
ಯುದ್ಧದ ಆರಂಭದ ವೇಳೆ ಸಂಕಷ್ಟದಲ್ಲಿದ್ದ ಜನರಿಗೆ ಸುಮಾರು ೧೧೮೦ ಊಟಗಳನ್ನು ವಿತರಿಸಲಾಗಿದೆ. ಜೊತೆಗೆ ೭೦ ಆಹಾರೋತ್ಪನ್ನಗಳ ಕಿಟ್‌ಗಳನ್ನು ನೀಡಲಾಗಿದೆ. ತೊಂದರೆಗೀಡಾದ ಜನರನ್ನು ದುಬಾಯಿ, ಶಾರ್ಜಾ, ರಾಸ್ ಅಲ್ ಖೈಮಾ ಮತ್ತು ಅಬುಧಾಬಿ ವಿಮಾನ ನಿಲ್ದಾಣಗಳಿಗೆ ತೆರಳಲು ಖಾಸಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಹಿದಾಯತ್ ಅಡ್ಡೂರು ತಿಳಿಸಿದರು.
‘ಕನ್ನಡಿಗಾಸ್ ಹೆಲ್ಪ್ ಲೈನ್’ ಜೊತೆ ಕೆಎನ್‌ಆರ್‌ಐ ಫೋರಂ ಯುಎಇ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಏಂಡ್ ಇಂಡಸ್ಟ್ರಿ (ಬಿಸಿಸಿಐ) ಯುಎಇ, ಕರ್ನಾಟಕ ಸಂಘ ದುಬಾಯಿ, ಕನ್ನಡಿಗರ ಕೂಟ ದುಬಾಯಿ, ಅಬುಧಾಬಿ ಕರ್ನಾಟಕ ಸಂಘ, ದುಬಾಯಿ ಅನಿವಾಸಿ ಕನ್ನಡಿಗರು, ಹೆಮ್ಮೆಯ ದುಬಾಯಿ ಕನ್ನಡ ಸಂಘ, ಒಕ್ಕಲಿಗರ ಸಂಘ ದುಬಾಯಿ, ಕನ್ನಡ ಪಾಠ ಶಾಲೆ ದುಬಾಯಿ, ಶಾರ್ಜಾ ಕರ್ನಾಟಕ ಸಂಘ, ದುಬಾಯಿ ಕೊಂಕಣ್ಸ್, ಬಿಸಿಎಫ್, ಕೆಸಿಎಫ್, ಮಂಕಿ ಕಮ್ಯೂನಿಟಿ, ಎಸ್‌ಕೆಎಸ್‌ಎಸ್ ವಿಖಾಯ ಯುಎಇ, ನೂರುಲ್ ಹುದಾ ಯುಎಇ ಕಮಿಟಿ, ದುಬಾಯಿ ಬ್ಯಾರೀಸ್, ಬದ್ರಿಯಾ ಫ್ರೆಂಡ್ಸ್, ಹಿದಾಯ ಫೌಂಡೇಶನ್, ಸಂಶುಲ್ ಉಲಮಾ ತೋಡಾರ್, ರಾಸ್ ಅಲ್ ಖೈಮಃ ಏಂಡ್ ಫುಜೈರಾಹ್ ಕರ್ನಾಟಕ ಸಂಘ, ಏಮ್ ಇಂಡಿಯಾ ಫೌಂಡೇಶನ್, ದಾರುಲ್ ನೂರ್, ಗಲ್ಫ್ ಕರ್ನಾಟಕ ಕುಟುಂಬ ಮತ್ತು ಗಲ್ಫ್ ಗೆಳತಿಯರು, ಮ್ಯಾಂಗ್ಳೂರ್ ಕೊಂಕಣ್ಸ್ ದುಬಾಯಿ, ಅಲ್ ಖಮರ್ ಟ್ರಸ್ಟ್ ಮೂಳೂರು, ಒಕ್ಕಲಿಗರ ಸಂಘ ಯುಎಇ, ರಾಕ್ ಕರ್ನಾಟಕ ಸಂಘ ಯುಎಇ ಸೇರಿದಂತೆ ಹಲವಾರು ಕನ್ನಡಪರ ಸಂಘಟನೆಗಳು ಕೈಜೋಡಿಸಿವೆ ಎಂದು ಹಿದಾಯತ್ ತಿಳಿಸಿದರು.
ಅಮೇರಿಕ-ಇಸ್ರೇಲ್ ಹಾಗೂ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದಿಂದ ಯುಎಇಯಲ್ಲಿ ಸಂಕಷ್ಟಕ್ಕೀಡಾಗಿದ್ದ ಪ್ರವಾಸಿ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸುವ ಜೊತೆಗೆ ವಿಸಿಟ್ ವೀಸಾ ಮೂಲಕ ಉದ್ಯೋಗವನ್ನು ಹರಸಿಬಂದ ಜನರಿಗೆ ವಸತಿ, ಊಟದ ವ್ಯವಸ್ಥೆ ಮಾಡುವ ಮೂಲಕ ‘ಕನ್ನಡಿಗಾಸ್ ಹೆಲ್ಪ್ ಲೈನ್’ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ. ಯುಎಇಯಲ್ಲಿ ಕೊರೋನಾ ಹಾಗೂ ಪ್ರವಾಹದ ವೇಳೆ ಸಂಕಷ್ಟದಕ್ಕಿದ್ದ ಕನ್ನಡಿಗರಿಗೆ ಸಹಾಯಹಸ್ತ ನೀಡುವ ಉದ್ದೇಶದಿಂದ ಹುಟ್ಟಿಕೊಂಡ ‘ಕನ್ನಡಿಗಾಸ್ ಹೆಲ್ಪ್ ಲೈನ್’ ಈ ಬಾರಿಯ ಯುದ್ಧದಿಂದ ಸಂಕಷ್ಟಕ್ಕೀಡಾದ ಕನ್ನಡಿಗರನ್ನು ರಕ್ಷಿಸುವ ಜೊತೆಗೆ ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸಲು ಮತ್ತೆ ತನ್ನ ಕಾರ್ಯಸೇವಾ ಚಟುವಟಿಕೆಯನ್ನು ಪುನರಾರಂಭಿಸಿರುವುದು ಸ್ತುತ್ಯಾರ್ಹ ಎಂದು ಕೆಎನ್‌ಆರ್‌ಐ ಫೋರಂ ಯುಎಇ ಅಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ನ ಸೇವಾ ಕಾರ್ಯಕ್ರಮಗಳಲ್ಲಿ ಆಧಾರ ಸ್ತಂಭಗಳಾಗಿ ಜೊತೆ ನಿಂತ ರೊನಾಲ್ಡ್ ಕೊಲಾಸೊ, ವಕ್ವಾಡಿ ಪ್ರವೀಣ್ ಶೆಟ್ಟಿ, ಇಸಾಕ್ ಹಾಜಿ, ಧೀರಜ್ ಜೈನ್, ಮಾಧವ್ ಕಿರಣ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸರ್ವೋತ್ತಮ ಶೆಟ್ಟಿ ಅಬುಧಾಬಿ, ಶಶಿಧರ್ ನಾಗರಾಜಪ್ಪ, ಜೇಮ್ಸ್ ಮೆಂಡೋನ್ಸಾ, ಆಶ್ರಫ್ ಶ್ಹಾ, ಮಂಟೂರು, ಅರುಣ್ ಕುಮಾರ್, ದಯಾ ಕಿರೋಡಿಯನ್, ಮಲ್ಲಿಕಾರ್ಜುನ ಗೌಡ, ಕಿರಣ್ ಗೌಡ, ಸಮದ್ ಬಿರಾಲಿ, ಇಮ್ರಾನ್ ಎರ್ಮಾಳ್, ಮೂಝಾ, ಸಲೀಮ್ ಮೂಡಬಿದ್ರಿ, ರಫೀಕ್, ಯತೀಶ್ ಗೌಡ, ಕೆ.ಗವಸ್ಕರ್ ಸೇರಿದಂತೆ ಗಣ್ಯರನೇಕರು ಉಪಸ್ಥಿತರಿದ್ದು ಸೇವೆಯನ್ನು ಶ್ಲಾಘಿಸಿದರು.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now