
ನಿತ್ಯ ಜೀವನದಲ್ಲಿ ಒಂದಲ್ಲ ಒಂದು ಉತ್ಪನ್ನವನ್ನು ಉಪಯೋಗಿಸುವ ನಾವೆಲ್ಲರೂ ಗ್ರಾಹಕರು. ನಾವು ಉಪಯೋಗಿಸುವ ಉತ್ಪನ್ನಗಳಿಂದ ನಮ್ಮ ಮೇಲಾಗುವ ಪರಿಣಾಮಗಳ ಅರಿವು ಇರಬೇಕು. ನಮ್ಮಲ್ಲಿ ಪ್ರಶ್ನೆ ಮಾಡುವ ಪ್ರವೃತ್ತಿ ಹೆಚ್ಚಿದ್ದಾಗ ಪರಿಹಾರ ದೊರೆಯುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು
ಅವರು ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಬಳಕೆದಾರರ ವೇದಿಕೆ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುಂಜಿಬೆಟ್ಟು ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನರು ಪ್ರಜ್ಞಾವಂತರು. ಜಿಲ್ಲೆಯ ನಾಗರಿಕರು ಆಡಳಿತವನ್ನು ಪ್ರಶ್ನೆ ಮಾಡುತ್ತಾರೆ. ಜನರಲ್ಲಿ ಪ್ರಶ್ನಿಸುವ ಮನೋಭಾವ ಇದ್ದಾಗ ಆಡಳಿತವೂ ಸಕ್ರಿಯವಾಗಿ ಕೆಲಸ ಮಾಡುತ್ತದೆ. ಇಂದು ನಾವು ಜಾಹೀರಾತುಗಳ ಪ್ರಭಾವಕ್ಕೆ ಒಳಗಾಗಿ ಅಗತ್ಯವಿಲ್ಲದ ಉತ್ಪನ್ನಗಳನ್ನು ಖರೀದಿಸುತ್ತೇವೆ. ಸೌಂದರ್ಯ ಪ್ರಸಾದನ ಗಳಿಂದ ಯಾರೂ ಬಿಳಿ ಆಗುವುದಿಲ್ಲ ಎಂದು ಗೊತ್ತಿದ್ದರೂ ಅವುಗಳನ್ನು ಖರೀದಿಸುತ್ತೇವೆ. ವ್ಯಕ್ತಿಯ ವ್ಯಕ್ತಿತ್ವ ಆತನ ಆತ್ಮವಿಶ್ವಾಸ ಮುಖ್ಯ ಹೊರತು ಆತನ ಬಣ್ಣ ಮುಖ್ಯವಲ್ಲ ಎಂದರು.
ಮಧ್ಯಮ ವರ್ಗದ ಜನರು ತಾವು ದುಡಿದ ಹಣದಿಂದ ಉತ್ಪನ್ನಗಳನ್ನು, ವಾಹನಗಳನ್ನು ಖರೀದಿಸಿ ಅವುಗಳು ಹಾಳಾದಾಗ ನಷ್ಟ ಅನುಭವಿಸುತ್ತಾರೆ. ನಮ್ಮಲ್ಲಿ ಚಲನ ಚಿತ್ರ ನಟರು ಕ್ರಿಕೆಟ್ ಆಟಗಾರರನ್ನು ಪೂಜಿಸುವ ಪದ್ಧತಿ ಇದೆ. ಆದರೆ ಇವರೆಲ್ಲಾ ತಂಬಾಕು, ಮದ್ಯ, ತಂಪು ಪಾನೀಯ ಮುಂತಾದ ಜಾಹೀರಾತುಗಳನ್ನು ಪ್ರಚಾರ ಮಾಡುತ್ತಾರೆ. ಇದು ನಮ್ಮೆಲ್ಲರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ದೂರ ಇಡಬೇಕು ಎಂದರು.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸುನೀಲ ತಿ ಮಾಸರೆಡ್ಡಿ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮ ಭವಿಷ್ಯ ಕಂಡುಕೊಳ್ಳಲು ಹೊರಟಿರುವ ಕಾನೂನು ವಿದ್ಯಾರ್ಥಿಗಳಿಗೆ ಗ್ರಾಹಕ ಕಾನೂನುಗಳ ಬಗ್ಗೆ ಅರಿವು ಇರಬೇಕು. ನಮ್ಮಲ್ಲಿ ಜಾಗೃತಿ ಇದ್ದಾಗ ಪ್ರಶ್ನೆ ಮಾಡುವುದು ಮತ್ತು ಪರಿಹಾರ ದೊರಕಿಸಿ ಕೊಡುವುದು ಸಾಧ್ಯ. ನೈಜ ದೂರುಗಳು ಬಂದಾಗ ಖಂಡಿತವಾಗಿಯೂ ಪರಿಹಾರ ದೊರಕುತ್ತದೆ. ನ್ಯಾಯಾಲಯಕ್ಕೆ ಬಂದ ಪ್ರಕರಣಗಳನ್ನು 90 ದಿನಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಕೆಲವು ತಾಂತ್ರಿಕ ತೊಡಕುಗಳು ಇದ್ದಾಗ ಮಾತ್ರ ವಿಳಂಬವಾಗುತ್ತಿದೆ. ಕಾನೂನುಗಳ ತಿದ್ದುಪಡಿಯಿಂದ ಶೀಘ್ರ ನ್ಯಾಯದಾನ ಸಾಧ್ಯವಾಗಿದೆ ಎಂದ ಅವರು ಉತ್ಪನ್ನ ತಯಾರಕರು ತಮ್ಮ ಉತ್ಪನ್ನಗಳಿಗೆ ಜವಾಬ್ದಾರರು. ಕೆಟ್ಟ ಉತ್ಪನ್ನಗಳಿಂದ ವ್ಯಕ್ತಿ ಅಥವಾ ಆಸ್ತಿಗಳಿಗೆ ಹಾನಿ ಆದಾಗ ಪರಿಹಾರ ಕೇಳುವ ಹಕ್ಕಿದೆ ಎಂದರು.
ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ದೇವರಾಜ್ ಟಿ ಎನ್, ಬಳಕೆದಾರರ ವೇದಿಕೆ ಸಂಚಾಲಕ ಯು ಜಿ ಕಾಮತ್, ರಾಜು ಪೂಜಾರಿ, ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಸುರೇಖಾ ಕೆ, ಆಯೋಗದ ಸದಸ್ಯೆ ಸುಜಾತ ಬಸವರಾಜ ಕೋರಳ್ಳಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಹ ಸಂಚಾಲಕ ಪ್ರೊ ನಾರಾಯಣ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ರವೀಂದ್ರ ಸ್ವಾಗತಿಸಿ,
ಬಳಕೆದಾರರ ವೇದಿಕೆ ವಿಶ್ವಸ್ಥ ಹರಿಕೃಷ್ಣ ಶಿವತ್ತಾಯ ನಿರೂಪಿಸಿ, ಬಳಕೆದಾರರ ವೇದಿಕೆ ವಿಶ್ವಸ್ಥ ರಾಮ ಭಟ್ ವಂದಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now