
ಶಿರ್ವ:ಆಗಸ್ಟ್ 9 ಶಂಕರಪುರ ಚರ್ಚಿನ ಸಭಾಂಗಣದಲ್ಲಿ ಕಾನೂನು ಮಾಹಿತಿ ಶಿಬಿರವು ನೆರವೇರಿತು. ಶಿರ್ವ ಆರಕ್ಷಕ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಂಜುನಾಥ ಅಡಿಗ ಸಂಪನ್ಮೂಲ ವ್ಯಕ್ತಿಗಳಾಗಿ ಕಾನೂನು ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಚರ್ಚಿನ ಪ್ರಧಾನ ಧರ್ಮ ಗುರುಗಳಾದ ವಂದನೀಯ ಡಾ. ಅನಿಲ್ ಕ್ಯಾಸ್ಟಲಿನೊ ,ಸಹಾಯಕ ಧರ್ಮ ಗುರುಗಳಾದ ವಂದನೀಯ ಜೆಸೆಲ್ ಪ್ರದೀಪ್,ಉಪಾಧ್ಯಕ್ಷರಾದ ಜಾನ್ ಮಾರ್ಟಿಸ್, ಕಾರ್ಯದರ್ಶಿಗಳಾದ ಆನಂದ್ ಡಿಸೋಜಾ ಉಪಸ್ಥಿತರಿದ್ದರು.
POCSO “ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯ್ದೆ, 2012”. ಭಾರತದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಲೈಂಗಿಕ ದೌರ್ಜನ್ಯ, ಕಿರುಕುಳ ಮತ್ತು ಶೋಷಣೆಯಿಂದ ರಕ್ಷಿಸಲು ಈ ಕಾನೂನು ಜಾರಿಯಲ್ಲಿದೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಕಾಯ್ದೆಯಡಿ “ಮಗು” ಎಂದು ಪರಿಗಣಿಸಲಾಗುತ್ತದೆ.

ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಮಕ್ಕಳ ಅಶ್ಲೀಲ ಚಿತ್ರ/ವೀಡಿಯೊಗಳಿಗೆ ಸಂಬಂಧಿಸಿದ ಅಪರಾಧಗಳಿಗೆ ಕಠಿಣ ಶಿಕ್ಷೆ ಇದೆ.
ಪ್ರಕರಣಗಳ ವಿಚಾರಣೆಯಲ್ಲಿ ಮಗುವಿಗೆ ಹೆಚ್ಚುವರಿ ಮಾನಸಿಕ ಒತ್ತಡ ಉಂಟಾಗದಂತೆ ವಿಶೇಷ ಕ್ರಮಗಳನ್ನು ಕಾಯ್ದೆ ಒದಗಿಸುತ್ತದೆ.
ಮಕ್ಕಳ ಸುರಕ್ಷತೆ ಕುಟುಂಬ, ಶಾಲೆ ಮತ್ತು ಸಮಾಜದ ಎಲ್ಲರ ಜವಾಬ್ದಾರಿ. ಮಗುವಿನೊಂದಿಗೆ ಏನಾದರೂ ಅನುಮಾನಾಸ್ಪದ ಘಟನೆ ನಡೆದರೆ ಅದನ್ನು ಮುಚ್ಚಿಡದೆ, ತಕ್ಷಣ ಪೊಲೀಸ್ ಅಥವಾ ಸಂಬಂಧಪಟ್ಟ ಮಕ್ಕಳ ರಕ್ಷಣಾ ಅಧಿಕಾರಿಗಳನ್ನು ಸಂಪರ್ಕಿಸುವುದು ಮುಖ್ಯ.
ಪೊಲೀಸ್ ರಸ್ತೆ ಸುರಕ್ಷತಾ ಮಾಹಿತಿ*
ರಸ್ತೆ ಸುರಕ್ಷತೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಅಪಘಾತಗಳನ್ನು ತಡೆಯಲು ವಾಹನ ಚಾಲಕರು ಹಾಗೂ ಪಾದಚಾರಿಗಳು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.
ಕಾರು ಚಾಲಕರು ಮತ್ತು ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಬೇಕು.
ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸಬಾರದು.
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು
ಮಾದಕ ವಸ್ತುಗಳ ವಿರುದ್ಧ ಜಾಗೃತಿ
“ಮಾದಕ ವಸ್ತುಗಳಿಗೆ ಇಲ್ಲ ಎನ್ನೋಣ – ಆರೋಗ್ಯಕರ ಸಮಾಜ ನಿರ್ಮಿಸೋಣ.”
ಮಾದಕ ವಸ್ತುಗಳ ಸೇವನೆಯು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೆ, ಕುಟುಂಬ ಮತ್ತು ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತದೆ. ವಿಶೇಷವಾಗಿ ಯುವಜನರು ಮಾದಕ ವಸ್ತುಗಳ ಆಮಿಷಕ್ಕೆ ಒಳಗಾಗದಂತೆ ಜಾಗರೂಕರಾಗಿರಬೇಕು.
ಸ್ನೇಹಿತರ ಒತ್ತಾಯ ಅಥವಾ ಕುತೂಹಲದಿಂದಲೂ ಮಾದಕ ವಸ್ತುಗಳನ್ನು ಪ್ರಯತ್ನಿಸಬೇಡಿ.
ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಮತ್ತು ಯುವಕರಿಗೆ ಅರಿವು ಮೂಡಿಸಿ.
“ನಮ್ಮ ಯುವಜನತೆ ನಮ್ಮ ಭವಿಷ್ಯ – ಮಾದಕ ವ್ಯಸನದಿಂದ ಅವರನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ.”
ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ಕೈಜೋಡಿಸೋಣ.

ಸೈಬರ್ ಕ್ರೈಂ ಬಗ್ಗೆ ಜಾಗೃತಿ “ಆನ್‌ಲೈನ್‌ನಲ್ಲಿ ಎಚ್ಚರಿಕೆ – ಸೈಬರ್ ಅಪರಾಧದಿಂದ ರಕ್ಷಣೆ!”
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಇಂಟರ್‌ನೆಟ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಇದರ ಜೊತೆಗೆ ಆನ್‌ಲೈನ್ ವಂಚನೆ, OTP ವಂಚನೆ, ನಕಲಿ ಕರೆಗಳು, ಫಿಷಿಂಗ್ ಲಿಂಕ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಸೈಬರ್ ಅಪರಾಧಗಳೂ ಹೆಚ್ಚುತ್ತಿವೆ.
ಸೈಬರ್ ವಂಚನೆಯಿಂದ ರಕ್ಷಿಸಿಕೊಳ್ಳಲು
ಯಾರೊಂದಿಗೂ OTP, PIN, CVV, ATM ಪಾಸ್‌ವರ್ಡ್ ಅಥವಾ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳಬೇಡಿ.
ಅಪರಿಚಿತ ವ್ಯಕ್ತಿಗಳು ಕಳುಹಿಸುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
ಬ್ಯಾಂಕ್ ಅಥವಾ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿದರೂ ವೈಯಕ್ತಿಕ ಹಾಗೂ ಹಣಕಾಸಿನ ಮಾಹಿತಿಯನ್ನು ನೀಡಬೇಡಿ.
ಆನ್‌ಲೈನ್ ಹಣ ವರ್ಗಾವಣೆ ಮಾಡುವಾಗ ಖಾತೆ ವಿವರಗಳನ್ನು ಪರಿಶೀಲಿಸಿ.
ವಂಚನೆಗೆ ಒಳಗಾದರೆ:
ತಕ್ಷಣವೇ ನಿಮ್ಮ ಬ್ಯಾಂಕ್‌ಗೆ ಸಂಪರ್ಕಿಸಿ ಮತ್ತು ಭಾರತದಲ್ಲಿ 1930 ಸೈಬರ್ ಕ್ರೈಂ ಸಹಾಯವಾಣಿಗೆ ಕರೆ ಮಾಡಿ. ಸೈಬರ್ ಅಪರಾಧವನ್ನು National Cyber Crime Reporting Portal ಮೂಲಕವೂ ವರದಿ ಮಾಡಬಹುದು ಎಂದು ಶಿರ್ವ ಆರಕ್ಷಕ ಠಾಣಾ ಹೆಡ್ ಕಾನ್ಸ್ಟೇಬಲ್ ಮಂಜುನಾಥ ಆಡಿಗ ಸಾರ್ವಜನಿಕರಿಗೆ ಕರೆ ಕೊಟ್ಟರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now