ಯಕ್ಷಗಾನ ಕಲಾರಂಗದ 101ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗದ 101ನೆಯ ಮನೆ ಹಸ್ತಾಂತರ
0Shares

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಮೂಲ್ಯ ಖಾರ್ವಿ (ಶ್ರೀಮತಿ ಆಶಾ ಮತ್ತು ಶ್ರೀ ಮೋಹನ್ ಖಾರ್ವಿ ಇವರ ಪುತ್ರಿ) ಇವಳಿಗೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ, ಮಹಾದಾನಿಗಳಾದ ಮಂಗಳೂರಿನ ಪಿ. ಗೋಕುಲನಾಥ ಪ್ರಭು ಅವರು ತಮ್ಮ ಸಹಪಾಠಿ ಹಾಗೂ ಸ್ನೇಹಿತರೂ ಆಗಿದ್ದ ವಿ. ನಂದನ ಕಾಮತ್ ಇವರ ಸ್ಮರಣೆಯಲ್ಲಿ ರೂ.7 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ನಂದನ’ ಇಂದು (31.07.2026) ಉದ್ಘಾಟನೆಗೊಂಡಿತು. ಜ್ಯೋತಿ ಬೆಳಗಿಸಿದ ಗೋಕುಲನಾಥ ಪ್ರಭು ಅವರು ಯಾವ ಆಡಂಬರವಿಲ್ಲದೆ ನಾವು ಕೊಡುವ ಹಣದ ಒಂದು ಪೈಸೆಯೂ ಪೋಲಾಗದಂತೆ ಫಲಾನುಭವಿಗೆ ತಲುಪಿಸುವ ಕಲಾರಂಗದ ಸಾಮಾಜಿಕ ಸೇವೆಗೆ ಮನ ಸೋತಿದ್ದೇನೆ. ನನ್ನ ಆತ್ಮೀಯ ಸ್ನೇಹಿತರಾಗಿದ್ದ ನಂದನ ಕಾಮತರ ಸ್ಮರಣೆಯಲ್ಲಿ ಅರ್ಹ ವಿದ್ಯಾರ್ಥಿನಿಗೆ ಮನೆ ಕಟ್ಟಿಸಿ

ಕೊಡುವ ಅವಕಾಶ ಕಲ್ಪಿಸಿದ ಸಂಸ್ಥೆಗೆ ನಾನು ಕೃತಜ್ಞನಾಗಿದ್ದೇನೆಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆಯವರು ಯಕ್ಷಗಾನ ಕಲಾರಂಗ ಯಾರ ಮುಲಾಜಿಗೂ ಒಳಗಾಗದೆ ವಿದ್ಯಾರ್ಥಿಗಳ ಆಯ್ಕೆಯನ್ನು ಮಾಡುತ್ತದೆ. ಸಮಾಜಪರ ಕೆಲಸ ಮಾಡುತ್ತಿರುವ ಇಂತಹ ಇನ್ನೊಂದು ಸಂಸ್ಥೆಯನ್ನು ನಾನು ಈವರೆಗೆ ಕಂಡಿಲ್ಲ. ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಬಂದಾಗ ಪುಣ್ಯ ಕ್ಷೇತ್ರ ದರ್ಶನಮಾಡಿದ ಅನುಭವಾಗುತ್ತದೆ ಎಂದರು. ನಿವೃತ್ತ ಪ್ರಾಚಾರ್ಯ ನಾರಾಯಣ ಜೋಯಿಸರು ಯಕ್ಷಗಾನ ಕಲಾರಂಗದ ಕಾರ್ಯಕ್ರಮಕ್ಕೆ ಸಂತಸ ವ್ಯಕ್ತಪಡಿಸಿ, ದಾನಿಗಳು ನೀಡಿದ ಈ ಕೊಡುಗೆಗೆ ಕಲಿಕೆಯಲ್ಲಿ ಪ್ರಗತಿ ಸಾಧಿಸುವ ಹೊಣೆಗಾರಿಕೆ ನಿನ್ನ ಮೇಲಿದೆ ಎಂದು ಅಮೂಲ್ಯಳಿಗೆ ಕಿವಿಮಾತು ಹೇಳಿದರು. ಅಭ್ಯಾಗತರಾದ ಮಂಗಳೂರಿನ ಖ್ಯಾತ ವೈದ್ಯ ಡಾ. ಜೆ. ಎನ್. ಭಟ್ ಇದೊಂದು ಅನನ್ಯ ಸಂಸ್ಥೆ. ಸಮರ್ಥ ನಾಯಕತ್ವ, ಅರ್ಪಣಾ ಮನೋಭಾವದ ಕಾರ್ಯಕರ್ತರೆ ಸಂಸ್ಥೆಯ ಆಸ್ತಿ ಎಂದು ಹರ್ಷ ವ್ಯಕ್ತಪಡಿಸಿದರು. ನಂದನ ಕಾಮತರ ಪುತ್ರಿ ಲಕ್ಷೀ ಕಾಮತ್ ತನ್ನ ತಂದೆ ಮತ್ತು ಗೋಕುಲನಾಥ ಪ್ರಭುಗಳ ಅನ್ಯೋನ್ಯ ಸ್ನೇಹ ಸ್ಮರಿಸಿಕೊಂಡು ಪ್ರಭುಗಳ ಉದಾರ ಕೊಡುಗೆಗೆ ಕೃತಜ್ಞತೆ ಸೂಚಿಸಿ ಕಲಾರಂಗದ ಸತ್ಕಾರ್ಯದಲ್ಲಿ ನಾವೂ ಭಾಗಿಯಾಗುತ್ತೇವೆ ಎಂದು ಹೇಳಿದರು. ನಿವೇದಿತಾ ಜಿ.ಪ್ರಭು, ಶೋಭಾ ನಂದನ ಕಾಮತ್,ಗುರುದತ್, ಜನಾರ್ದನ ಭಟ್, ರೇಷ್ಮಾ ಭಟ್, ಶ್ವೇತಾ ಕಾಮತ್ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಉಪಸ್ಥಿತರಿದ್ದರು. ಸಂಸ್ಥೆಯ ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ, ಯು. ಅನಂತರಾಜ ಉಪಾಧ್ಯ, ವಿಷ್ಣುಮೂರ್ತಿ ಭಟ್, ಮರ್ಣೆ ಉಮೇಶ ಭಟ್, ಜಯರಾಮ ಪಡಿಯಾರ್, ಆರ್. ವಸಂತ ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಇದು ಗೋಕುಲನಾಥ ಪ್ರಭುಗಳು ಪ್ರಾಯೋಜಿಸಿದ ಮೂರನೆಯ ಮನೆಯಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now