ಮಕ್ಕಳು ತಮ್ಮನ್ನು ಅನುಸರಿಸುತ್ತಾರೆ ಎಂಬ ಎಚ್ಚರ ಹೆತ್ತವರಿಗೆ ಇರಬೇಕು – ಡಾ. ವಿನ್ಸೆಂಟ್ ಆಳ್ವ

ಮಕ್ಕಳು ತಮ್ಮನ್ನು ಅನುಸರಿಸುತ್ತಾರೆ ಎಂಬ ಎಚ್ಚರ ಹೆತ್ತವರಿಗೆ ಇರಬೇಕು – ಡಾ. ವಿನ್ಸೆಂಟ್ ಆಳ್ವ

0Shares

ಉದ್ಯಾವರ: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಶಿಕ್ಷಕರಿಂದ ಹೆಚ್ಚಾಗಿ ತಮ್ಮ ಹೆತ್ತವರನ್ನು ಅವಲಂಬಿತರಾಗಿರುತ್ತಾರೆ ಮತ್ತು ಅವರನ್ನು ಅನುಸರಿಸುತ್ತಾರೆ. ಹಾಗಾಗಿ ಹೆತ್ತವರ ನಡೆ ಮತ್ತು ನುಡಿಯಲ್ಲಿ ಸಮಾನತೆ ಇರಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಯ ಬದುಕಲ್ಲಿ ಅದು ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಮಕ್ಕಳು ಬಾಲ್ಯದಲ್ಲಿ ಮುಗ್ಧರಾಗಿದ್ದು ಬೆಳೆಯುತ್ತಾ ಹೋದಂತೆ ಕೆಡುಕನ್ನು ತಮ್ಮಲ್ಲಿ ತುಂಬಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಕೆಡುಕುಗಳು ಯಾವುದು ಎಂದು ಮಕ್ಕಳಿಗೆ ತಿಳಿಯಪಡಿಸುವ ಜವಾಬ್ದಾರಿ ಹೆತ್ತವರದ್ದು. ನಮ್ಮೊಳಗೆ ಸತ್ಯವಿರಬೇಕು. ನಾವು ಬೇರೆಯವರ ಬಗ್ಗೆ ಕೆಟ್ಟದು ಮಾತಾಡಿದರೆ ಅದೇ ಸಾಕು ನಮ್ಮ ಮಕ್ಕಳನ್ನು ಕೆಡಿಸಲು. ಬೇರೆ ಯಾವುದರ ಅಗತ್ಯವಿಲ್ಲ. ಮಕ್ಕಳಿಗೆ ಜೀವಂತ ದೇವರು ಹೆತ್ತವರು. ಶಾಲೆಯಲ್ಲಿ ಅಕ್ಷರಗಳನ್ನು ಮಾತ್ರ ಕಲಿಸುತ್ತಾರೆ ಸಂಸ್ಕಾರ, ಸಂಸ್ಕೃತಿ ,ಪ್ರೀತಿ ಕಲಿಸುವ ಹೊಣೆಗಾರಿಕೆ ಹೆತ್ತವರದ್ದು, ಈ ಹೊಣೆಯನ್ನು ಹೊರುವುದನ್ನು ಹೆತ್ತವರು ತಪ್ಪಿಸಬೇಡಿ ಎಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ ಅವರು ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ’ವರ್ಷದ ಹರ್ಷ ನೂರರ್ವತ್ತನಾಲ್ಕು ಸಮಾರಂಭದ ಸಂಜೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು

ಅವರು ಮುಂದುವರೆಯುತ್ತಾ ತಮ್ಮ ಮಕ್ಕಳನ್ನು ಸ್ವಚ್ಛಂದವಾಗಿ ಹಾರಾಡಲು ಬಿಡೋಣ ಆದರೆ ನಮ್ಮ ಕೈಯಲ್ಲಿ ದಾರ ಇರಲಿ. ಮಕ್ಕಳನ್ನು ಗಾಜಿನ ಮನೆಯಲ್ಲಿ ಇಟ್ಟು ಬೆಳೆಸುವುದು ಬೇಡ. ಎಲ್ಲಾ ಕಷ್ಟ ಸುಖಗಳ ಬಗ್ಗೆ ಅವರಿಗೆ ಪರಿಚಯಿಸಿ ಮಕ್ಕಳ ಭವಿಷ್ಯಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದು ಹೆತ್ತವರ ಜವಾಬ್ದಾರಿ ಎಂದರು

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಪು, ಉಳಿಯಾರಗೋಳಿ ದಂಡ ತೀರ್ಥ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಶ್ರೀಮತಿ ಮರೀನಾ ಸರೋಜಾ ಸೋನ್ಸ್ ಅವರು ಮಾತನಾಡುತ್ತಾ ಈ ಶಾಲೆಯಲ್ಲಿ ಮಕ್ಕಳು ಸಾಧನೆಯನ್ನು ಮಾಡಲು ಬೇಕಾದ ವಾತಾವರಣವಿದೆ. ನಿಮ್ಮ ಸಾಧನೆಗೆ ದಾರಿದೀಪವಾಗಿ ದಕ್ಷ ಶಿಕ್ಷಕರು ಇದ್ದಾರೆ. ಅದನ್ನು ಸದುಪಯೋಗಿಸಿಕೊಳ್ಳಿ .ಹೆತ್ತವರು ಮಕ್ಕಳು ನಡೆಯುವ ದಾರಿ ಸರಿ ಇದೆಯೋ ಎನ್ನುವುದರ ಬಗ್ಗೆ ಹದ್ದಿನ ಕಣ್ಣಿನಲ್ಲಿ ವೀಕ್ಷಿಸಿ. ದಾರಿ ತಪ್ಪಿದಾಗ ತಿದ್ದಿ ಬುದ್ದಿ ಹೇಳಿ. ಈ ಶಾಲೆ ಇದನ್ನು ಸತತವಾಗಿ ಮಾಡುತ್ತಾ ಬಂದಿರುತ್ತದೆ ಹೀಗಾಗಿ ಇನ್ನೂ ಕೂಡ ಕನ್ನಡ ಮಾಧ್ಯಮದ ಶಾಲೆ ತಲೆಯೆತ್ತಿ ನಿಂತಿದೆ ಎಂದರು.

ಒಬ್ಬ ವ್ಯಕ್ತಿಯ ಬದುಕಿನಲ್ಲಿ ಪ್ರಾಥಮಿಕ ಶಿಕ್ಷಣವೆನ್ನುವುದು ಒಂದು ಪ್ರಮುಖ ಘಟ್ಟ. ಆತನ ಬದುಕು ತೀರ್ಮಾನವಾಗುವುದೇ ಪ್ರಾಥಮಿಕ ಶಿಕ್ಷಣದಿಂದ. ಶಿಕ್ಷಣ ಕ್ಷೇತ್ರದಲ್ಲಿ ನಾನು ಇಂದು ಸೇವೆಯನ್ನ ಸಲ್ಲಿಸುತ್ತೇನೆ ಅಂದರೆ ಅದಕ್ಕೆ ಮುಖ್ಯ ಕಾರಣ ಈ ಶಾಲೆಯಲ್ಲಿ ನಾನು ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಂಡದ್ದು. ನನ್ನ ಬದುಕು ಬದಲಾದದ್ದು ಈ ಶಾಲೆಯ ಶಿಕ್ಷಕರಿಂದ. ಹೆತ್ತವರೆ ನೀವು ನಿಮ್ಮ ಮಕ್ಕಳನ್ನು ಸರಿಯಾದ ಶಾಲೆಗೆ ಸೇರಿಸಿದ್ದೀರಿ. ಈ ಶಾಲೆ ಶಿಕ್ಷಣದೊಂದಿಗೆ ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿ ಮತ್ತು ಬದುಕುವ ರೀತಿಯನ್ನು ಕಲಿಸುವ ಶಾಲೆಯಾಗಿದೆ. ಈ ಶಾಲೆ ಇನ್ನಷ್ಟು ಬೆಳೆಯಲಿ ಎಂದು ಹಳೆ ವಿದ್ಯಾರ್ಥಿನಿ ಕಿದಿಯೂರು ಶಾಮಿಲಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಶೈಲಜಾ ಶುಭಾಶಂಸನೆಗೈದರು.

ವೇದಿಕೆಯಲ್ಲಿ ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗಣಪತಿಕಾರಂತ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಜಾತ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಉಮೇಶ್ ಕರ್ಕೇರ, ಶಾಲಾ ವಿದ್ಯಾರ್ಥಿ ನಾಯಕ ಮಾ. ರಿಶಾನ್ ಡಿ.ಅಮೀನ್ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಸಂಚಾಲಕರಾದ ಶ್ರೀ ಸುರೇಶ್ ಶೆಣೈ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀಮತಿ ರತಿ ಅವರು ವರದಿಯನ್ನು ವಾಚಿಸಿದರು. ಶಿಕ್ಷಕಿ ಶ್ರೀಮತಿ ಅನುರಾಧ ಶೆಟ್ಟಿ ವಂದಿಸಿದರು. ಶಿಕ್ಷಕ ಶ್ರೀ ವಿಕ್ರಮಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಮತ್ತು ಹೆತ್ತವರಿಂದ ನೃತ್ಯ ವೈವಿಧ್ಯ ಮತ್ತು ಮಕ್ಕಳಿಂದ ’ಹಕ್ಕಿಹಾಡು’( ರಚನೆ: ಕೋಟಿಗಾನಹಳ್ಳಿ ರಾಮಯ್ಯ, ನಿರ್ದೇಶನ: ರಾಜು ಮಣಿಪಾಲ ) ಮಕ್ಕಳ ನಾಟಕ ಪ್ರದರ್ಶನಗೊಂಡಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now