
ಉಡುಪಿ, ಫೆಬ್ರವರಿ 21 : ಆಧುನಿಕ ಯುಗದಲ್ಲಿ ಮನುಷ್ಯ ಒತ್ತಡದ ನಡುವೆ ತಮ್ಮ ದೈನಂದಿನ ಕಾರ್ಯವನ್ನು ನಿರ್ವಹಿಸುತ್ತಾರೆ. ಇದರಿಂದ ಹೊರಬರಲು ಜೀವನಶೈಲಿಯಲ್ಲಿ ಬದಲಾವಣೆ ಕಂಡುಕೊಂಡರೆ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಹಾಯವಾಗುತ್ತದೆ ಎಂದು ಸಿ.ಎಸ್.ಐ. ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಹೇಳಿದರು.

ಅವರು ಇಂದು ನಗರದ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ರಾಜ್ಯ ಮತ್ತು ಉಡುಪಿ ಜಿಲ್ಲಾ ಶಾಖೆ, ಯೆನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರು, ಸಿ.ಎಸ್.ಐ. ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ, ಲಯನ್ಸ್ ಕ್ಲಬ್, ಉಡುಪಿ ಮಿಡ್ ಟೌನ್ ಹಾಗೂ ಹಿರಿಯ ನಾಗರಿಕರ ಸಂಘ ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಹಿಳಾ ಸ್ವಾಸ್ಥ್ಯ ಸಂರಕ್ಷಣಾ ತಪಾಸಣೆ ಮತ್ತು ಆಯ್ದ ಬಡ ಫಲಾನುಭವಿಗಳಿಗೆ ಉಚಿತ ಶ್ರವಣ ಸಾಧನಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮನುಷ್ಯ ಆಧುನಿಕ ಜೀವನಶೈಲಿಗೆ ಮಾರುಹೋಗಿ ಪೌಷ್ಠಿಕ ಆಹಾರಗಳನ್ನು ಬಿಟ್ಟು ಇತರ ಆಹಾರ ಸೇವನೆ ಹಾಗೂ ಒತ್ತಡದ ಕೆಲಸದಿಂದ ರಕ್ತದೊತ್ತಡ, ಮಧುಮೇಹ ಸೇರಿದಂತೆ ಮತ್ತಿತರ ಕಾಯಿಲೆಗಳು ಬರುತ್ತವೆ. ಜನಸಾಮಾನ್ಯರು ಪೌಷ್ಠಿಕ ಆಹಾರಗಳನ್ನು ಸೇವನೆ ಮಾಡುವುದರ ಜೊತೆಗೆ ಪ್ರತಿನಿತ್ಯ ವ್ಯಾಯಾಮ, ವಾಕಿಂಗ್ ಸೇರಿದಂತೆ ಮತ್ತಿತರ ದೈಹಿಕ ಆರೋಗ್ಯ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಈ ಹಿಂದೆ ಸಮುದಾಯದ ರೋಗಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಆದರೆ ಪ್ರಸಕ್ತ ದಿನಗಳಲ್ಲಿ ವೈಯಕ್ತಿಕ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಶೇ. 4 ರಷ್ಟು ಜನರಿಗೆ ರಕ್ತದೊತ್ತಡ, ಶೇ. 5 ರಷ್ಟು ಜನರಿಗೆ ಮಧುಮೇಹ ಕಾಯಿಲೆಗಳು ಕಂಡುಬರುತ್ತಿವೆ. ಕಳೆದ ಎರಡು ಮೂರು ವರ್ಷಗಳಿಂದ ಯುವಜನರು ಹೃದಯಾಘಾತದಿಂದ ಮರಣಹೊಂದುತ್ತಿರುವುದು ಕಂಡುಬರುತ್ತಿದೆ ಎಂದರು.
ಜನಸಾಮಾನ್ಯರಿಗೆ ಹೃದಯಾಘಾತವಾದಾಗ ಆ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡುವ ಸಿ.ಪಿ.ಆರ್ ಬಗ್ಗೆ ಅರಿವು ಮೂಡಿಸುವುದು ಹೆಚ್ಚು ಅವಶ್ಯವಿದೆ. ಎಂದ ಅವರು, ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್ ಅನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ, ಸೂಕ್ತ ಚಿಕಿತ್ಸೆ ಪಡೆದಲ್ಲಿ ರೋಗದಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಕ್ಯಾನ್ಸರ್ ತಜ್ಞೆ ಡಾ. ವಿನುತಾ ಮಾತನಾಡಿ, ಜನಸಾಮಾನ್ಯರಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಕ್ಯಾನ್ಸರ್ ರೋಗಗಳು ಕಂಡುಬರುತ್ತಿವೆ. ಕ್ಯಾನ್ಸರ್ಗೆ ಚಿಕಿತ್ಸೆ ಇದೆ. ಮನುಷ್ಯನ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಕೋಶ ಬೆಳವಣಿಗೆಯಾದಲ್ಲಿ ಆರಂಭಿಕ ಹಂತದಲ್ಲಿಯೇ ಇವುಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಬೇಕು. ಇದು ದೇಹದ ಇತರ ಭಾಗಗಳಿಗೆ ಹರಡಿದಾಗ ಚಿಕಿತ್ಸೆ ನೀಡಲು ಕಷ್ಟಸಾಧ್ಯ ಎಂದರು.
ಕ್ಯಾನ್ಸರ್ನಲ್ಲಿ ಸ್ತನ ಕ್ಯಾನ್ಸರ್, ಬ್ಲಡ್ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಲಂಗ್ಸ್ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ. ತಂಬಾಕು ಉತ್ಪನ್ನಗಳು, ಗುಟ್ಕಾ, ಮದ್ಯಪಾನ, ಅಪೌಷ್ಠಿಕ ಆಹಾರಗಳ ಸೇವನೆ, ದೇಹದ ಜಡತ್ವ ಸೇರಿದಂತೆ ವಂಶವಾಹಿನಿಯಾಗಿ ಈ ರೋಗಗಳು ಬರುತ್ತವೆ. ಮನುಷ್ಯನು ಆರೋಗ್ಯಕರ ಜೀವನ ನಡೆಸಲು ಒತ್ತು ನೀಡಬೇಕು ಎಂದರು.
ರೆಡ್ಕ್ರಾಸ್ ಆಡಳಿತ ಮಂಡಳಿಯ ಸದಸ್ಯ ಲಯನ್ ವಿ.ಜಿ ಶೆಟ್ಟಿ ಮಾತನಾಡಿ, ನಮ್ಮಗಳ ಆರೋಗ್ಯ ಸಮಸ್ಯೆಗೆ ನಾವೇ ಕಾರಣ. ನಮ್ಮ ಆರೋಗ್ಯ ಉತ್ತಮವಾಗಿದ್ದಲ್ಲಿ ಮಾತ್ರ ನಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಲೂಯಿಸ್ ಲೋಬೋ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ ಬದಲಾಗುತ್ತಿದ್ದು, ನಮ್ಮ ದೇಹಕ್ಕೆ ಉಪಯುಕ್ತವಾಗುವ ಆಹಾರಗಳನ್ನು ಸೇವಿಸುತ್ತಾ ಉತ್ತಮ ಆರೋಗ್ಯ ಹೊಂದೋಣ ಎಂದರು.
ಇದೇ ಸಂದರ್ಭದಲ್ಲಿ ಆಯ್ದ 25 ಫಲಾನುಭವಿಗಳಿಗೆ ಶ್ರವಣ ಸಾಧನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಸಂಘದ ಜಿಲ್ಲಾ ಅಧ್ಯಕ್ಷ ಪಿ.ನಾಗರಾಜ್ ರಾವ್, ಮಿಷನ್ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ದೀಪಾ ವೈ. ರಾವ್, ಡಾ. ಪವಿತ್ರ ಹಾಗೂ ಡಾ. ಅಕ್ಷತಾ, ನೇತ್ರ ತಜ್ಞರಾದ ಡಾ. ಅಭಿನಯ್ ಅಶೋಕ್, ಕೀಲು ಮತ್ತು ಎಲುಬು ತಜ್ಞರಾದ ಡಾ. ಅರ್ಜುನ್ ಬಳ್ಳಾಲ್, ಸಾಮಾನ್ಯ ಆರೋಗ್ಯ ತಜ್ಞರಾದ ಡಾ. ಧನಂಜಯ ಭಟ್ ಹಾಗೂ ಡಾ. ಗಣೇಶ್ ಕಾಮತ್ ಮತ್ತು ದಂತ ತಜ್ಞರಾದ ಡಾ. ನಾಗೇಶ್ ನಾಯಕ್ ಹಾಗೂ ಡಾ. ಸಾರಿಕಾ, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ರೆಡ್ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ನಿರೂಪಿಸಿದರೆ, ರೆಡ್ಕ್ರಾಸ್ ಖಜಾಂಜಿ ರಮಾದೇವಿ ವಂದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ಮತ್ತು ಸಾರ್ವಜನಿಕರಿಗೆ ಉಚಿತ ಸ್ತ್ರೀರೋಗ ಮ್ಯಾಮೊಗ್ರಾಫಿ ಪರೀಕ್ಷೆ, ಪ್ಯಾಪ್ ಸ್ಮೀಯರ್ ಪರೀಕ್ಷೆ (ಗರ್ಭ ಕೋಶ ಕಂಠ ಪರೀಕ್ಷೆ - ಸುಸಜ್ಜಿತ ಹೈಟೆಕ್ ಮೊಬೈಲ್ ಬಸ್ಸುನಲ್ಲಿ ತಪಾಸಣೆ), ಹೃದಯ ಸಂಬಂಧಿತ ಕಾಯಿಲೆಗಳು, ಮಧುಮೇಹ ತಪಾಸಣೆ - ಖಾಲಿ ಹೊಟ್ಟೆ ಮತ್ತು ಆಹಾರ ಸೇವಿಸಿದ ನಂತರ, ನೇತ್ರ ತಪಾಸಣೆ ಮತ್ತು ಉಚಿತ ಕನ್ನಡಕ ವಿತರಣೆ, ಕೀಲು ಮತ್ತು ಎಲುಬು, ದಂತ ಹಾಗೂ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಯಿತು. 300 ಕ್ಕೂ ಅಧಿಕ ಫಲಾನುಭವಿಗಳ ಶಿಬಿರದ ಸದುಪಯೋಗ ಪಡೆದುಕೊಂಡರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























