ಯಕ್ಷಗಾನ ಕಲಿಸಿ ಮಕ್ಕಳಲ್ಲಿ ಸಂಸ್ಕಾರ ಬೆಳಸಿ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಕರೆ

ಯಕ್ಷಗಾನ ಕಲಿಸಿ ಮಕ್ಕಳಲ್ಲಿ ಸಂಸ್ಕಾರ ಬೆಳಸಿ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಕರೆ

0Shares

ಉಡುಪಿ : ಯಕ್ಷಗಾನವನ್ನು ಮಕ್ಕಳು ಕಲಿತರೆ ಅವರ ಶೈಕ್ಷಣಿಕ ಪ್ರಗತಿಗೆ ತೊಡಕಾಗುತ್ತದೆ ಎಂಬ ಆತಂಕವನ್ನು ಹೆತ್ತವರು ಬಿಡಬೇಕು. ಯಕ್ಷಗಾನವನ್ನು ಕಲಿತ ಮಕ್ಕಳು ಕಲಿಕೆಯಲ್ಲೂ ಅತೀ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದಾರೆ ಎಂಬುದನ್ನು ಮನಗಾಣಬೇಕು. ಯಕ್ಷಗಾನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಶನಿವಾರ ಸಿದ್ಧಾಪುರದ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಇವರ ಆಶ್ರಯದಲ್ಲಿ ಕರ್ನಾಟಕ ಯಕ್ಸಗಾನ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿಕೊಂಡ ಎಂಟನೇ ವರ್ಷದ ಮಕ್ಕಳ ಯಕ್ಷಗಾನ ಪ್ರದರ್ಶನ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನ ದೈವದತ್ತವಾದ ಕಲೆ. ಈ ಕಲೆಯನ್ನು ಅಭ್ಯಾಸಿಸಿದರೆ ಕೇವಲ ಪೌರಾಣಿಕ ಪ್ರಸಂಗಳ ಬಗ್ಗೆ ಮಕ್ಕಳಿಗೆ ಜ್ಞಾನ ಉಂಟಾಗುವುದು ಮಾತ್ರವಲ್ಲದೆ ಜೀವನದಲ್ಲಿ ನೈತಿಕತೆಯ ಪಾಠವೂ ಸಿಗುತ್ತದೆ. ಇದರಿಂದ ಮಕ್ಕಳು ಹೆತ್ತವರನ್ನು, ಗುರುಹಿರಿಯರನ್ನು ಗೌರವಾದಾರಗಳಿಂದ ಕಾಣುತ್ತಾರೆ ಎಂಬುದು ಸತ್ಯ. ಹೀಗಾಗಿ ಭವಿಷ್ಯದಲ್ಲಿ ಹೆತ್ತವರು ವೃದ್ಧಾಪ್ಯದಲ್ಲಿ ಅನಾಥಾಶ್ರಮಗಳನ್ನು ಸೇರುವ ಪ್ರಮೇಯ ತಪ್ಪುತ್ತದೆ.
ಯಕ್ಷಗಾನವನ್ನು ಕಲಿತ ಮಕ್ಕಳು ಕಲಾವಿದರಾಗಬೇಕು ಎಂದು ನಾನು ಹೇಳುವುದಿಲ್ಲ. ಅವರು ನಾಳೆ ಇಂಜಿನಿಯರೋ, ವೈದ್ಯರೋ ಅಥವಾ ಇನ್ನಿತರ ಯಾವುದೇ ರಂಗದಲ್ಲಿ ಮುಂದುವರಿದರೂ, ಯಕ್ಷಗಾನಕ್ಕೆ ತನ್ನದೇ ಆದ ಕೊಡುಗೆಯನ್ನು ಖಂಡಿತಾ ನೀಡುತ್ತಾರೆ. ಇದಕ್ಕೆ ಸಿದ್ಧಾಪುರದಲ್ಲಿ ಯಕ್ಷ ನುಡಿಸಿರಿ ಸಂಸ್ಥೆಯನ್ನು ಹುಟ್ಟುಹಾಕಿ ಯಕ್ಷಗಾನದ ಕಂಪನ್ನು ಹರಡುತ್ತಿರುವ ಡಾ.ಜಗದೀಶ್ ಶೆಟ್ಟಿ ಅವರೇ ಸಾಕ್ಷಿ ಎಂದು ಅವರು ಹೇಳಿದರು. ಇಂದು ಸಮಾಜದ ಹಲವಾರು ಅನಿಷ್ಟಗಳನ್ನು ಗಮನಿಸಿದಾಗ ಅವುಗಳಿಗೆ ಕಾರಣ ನೈತಿಕತೆಯ ಪತನ. ಹೀಗಾಗಿ ಮಕ್ಕಳಲ್ಲಿ ಎಳವೆಯಲ್ಲಿಯೇ ನೈತಿಕಕೆ, ಸಂಸ್ಕಾರವನ್ನು ನೀಡಿದರೆ ಅವರು ಉತ್ತಮ ನಾಗರಿಕರಾಗಬಲ್ಲರು. ಯಕ್ಷಗಾನ ಈ ಕಾರ್ಯ ಮಾಡುವ ಚೈತನ್ಯ ಹೊಂದಿದೆ. ಪ್ರಸ್ತುತ ಪ್ರಾಯೋಗಿಕವಾಗಿ ಪ್ರೌಢಶಾಲೆಗಳಲ್ಲಿ ಪ್ರಾರಂಭವಾದ ಈ ಯಕ್ಷಗಾನ ಕಲಿಕೆ ಇಂದು ಜಿಲ್ಲೆಯ ೯೦ಕ್ಕೂ ಅಧಿಕ ಶಾಲೆಗಳಿಗೆ ಹರಡಿದೆ. ೪,೦೦೦ ಕ್ಕೂ ಆಧಿಕ ಮಕ್ಕಳು ಯಕ್ಷಗಾನವನ್ನು ಕಲಿಯುತ್ತಿದ್ದಾರೆ. ಇದು ಯಕ್ಷಗಾನದ ಶಕ್ತಿ. ತಮ್ಮ ಮಕ್ಕಳು ಯಕ್ಷಗಾನವನ್ನು ಕಲಿಯಲು ಹೆತ್ತವರು ಪ್ರೋತ್ಸಾಹ ನೀಡಬೇಕು. ಪ್ರಸ್ತುತ ಹಲವಾರು ದೇವಾಲಯಗಳಲ್ಲಿ ೭-೮ ಯಕ್ಷಗಾನ ಮೇಳಗಳು ಹುಟ್ಟಿವೆ. ನೂರಾರು ಕಲಾವಿದರಿಗೆ ಜೀವನೋಪಾಯವನ್ನು ಈ ಕಲೆ ಕಲ್ಪಿಸಿದೆ. ಉತ್ತಮ ಸಂಭಾವನೆ, ಗೌರವ ಕೂಡಾ ಕಲಾವಿದರಿಗೆ ಇಂದು ಪ್ರಾಪ್ತಿಯಾಗುತ್ತಿದೆ. ಯಕ್ಷಗಾನ ಅಕಾಡೆಮಿ ಕೂಡಾ ಮಕ್ಕಳ ಯಕ್ಷಗಾನ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ. ಅಕಾಡೆಮಿ ಅಧ್ಯಕ್ಷನಾಗಿಯೂ ನಾನು ಯಕ್ಷಗಾನ ಕಲೆ ಹಾಗೂ ಕಲಾವಿದರಿಗೆ ಹೆಚ್ಚಿನ ಸೇವೆ ಮಾಡಲು ಉತ್ಸುಕನಾಗಿದ್ದೇನೆ ಎಂದು ಅವರು ತಿಳಿಸಿದರು.

ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಳದ ಧರ್ಮದರ್ಶಿ ಸಚ್ಚಿದಾನಂದ ಛಾತ್ರ ಅವರು ಮಾತನಾಡಿ, ಯಕ್ಷಗಾನ ತರಬೇತಿಯನ್ನು ಶಾಲಾ ಹಂತದಲ್ಲಿಯೇ ಮಕ್ಕಳಿಗೆ ನೀಡುವುದರಿಂದ ಮುಂದೆ ಅವರು ಬೆಳೆದು ಪ್ರಬುದ್ಧ ಕಲಾವಿದರಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಡಾ.ತಲ್ಲೂರು, ಡಾ.ಜಗದೀಶ್ ಶೆಟ್ಟಿ ಅವರ ಸೇವೆ ಪ್ರಶಂಸನೀಯ ಎಂದರು.

ಕಾರ್ಯಕ್ರಮದ ರೂವಾರಿ ಯಕ್ಷ ನುಡಿಸಿರಿಯ ಅಧ್ಯಕ್ಷ ಡಾ,ಜಗದೀಶ್ ಶೆಟ್ಟಿ ಅವರು ಮಾತನಾಡಿ, ೨೦೧೨ರಲ್ಲಿ ಈ ಭಾಗದಲ್ಲಿ ಯಕ್ಷಗಾನದ ತಾಳಮದ್ದಲೆ ನಡೆಸಬೇಕು ಈ ಮೂಲಕ ಕನ್ನಡ ನಾಡುನುಡಿಯನ್ನು ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಈ ಯಕ್ಷ ನುಡಿಸಿರಿ ಸಂಘಟನೆಯನ್ನು ಪ್ರಾರಂಭಿಸಲಾಯಿತು. ಕಳೆದ ೧೨ ವರ್ಷಗಳಿಂದ ಯಕ್ಷಗಾನ, ತಾಳಮದ್ದಲೆ ಕಾರ್ಯಕ್ರಮಗಳನ್ನು ನಿರಂತರವಾಗಿ ಕನ್ನಡ ರಾಜ್ಯೋತ್ಸವದಂದು ಸಿದ್ದಾಪುರದಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ. ಇದು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಅಪಾರ ಜನಪ್ರಿಯತೆ ಪಡೆದು ಅಗ್ರಗಣ್ಯ ಸ್ಥಾನವನ್ನು ಪಡೆದುಕೊಂಡಿದೆ. ತೆಂಕು ಬಡಗುತಿಟ್ಟಿನ ಪ್ರಬುದ್ಧ ಕಲಾವಿದರನ್ನು ಕರೆಸಿ ತಾಳಮದ್ದಲೆ ಕಾರ್ಯಕ್ರಮವನ್ನು ಉಣ ಬಡಿಸಿದ್ದೇವೆ. ಈ ಮಧ್ಯೆ ಯಕ್ಷಗಾನದ ಹೆಜ್ಜೆ ಕಲಿಸುವ ತರಗತಿಯನ್ನು ಪ್ರಾರಂಭಿಸುವ ಚಿಂತನೆ ನಡೆಸಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಸಚ್ಚಿದಾನಂದ ಛಾತ್ರ ಸೇರಿದಂತೆ ಯಕ್ಷಾಸಕ್ತರು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರ ಫಲಶ್ರುತಿಯಾಗಿ ಈ ಭಾಗದಲ್ಲಿ ೫೦೦ಕ್ಕೂ ಅಧಿಕ ಮಕ್ಕಳು ಯಕ್ಷಗಾನವನ್ನು ಅಭ್ಯಾಸಿಸಿದ್ದಾರೆ. ಪ್ರತೀ ಕುಟುಂಬದಲ್ಲಿ ಕನಿಷ್ಟ ಒಬ್ಬೊಬ್ಬ ಯಕ್ಷಗಾನವನ್ನು ಕಲಿತ ಮಕ್ಕಳು ಇರುವುದು ನಾವೆಲ್ಲಾ ಖುಷಿ ಪಡುವ ಸಂಗತಿಯಾಗಿದೆ. ಈ ಮಕ್ಕಳಲ್ಲಿ ಕೆಲವರು ವೃತ್ತಿ ಮೇಳಗಳಲ್ಲಿ ಕಲಾವಿದರಾಗಿ ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದಾರೆ. ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಅಕಾಡೆಮಿ ಅಧ್ಯಕ್ಷರಾದ ಮೇಲೆ ನಮ್ಮಂತಹ ಸಂಘಸoಸ್ಥೆಗಳನ್ನು ಕರೆದು ಕಾರ್ಯಕ್ರಮಗಳನ್ನು ನಡೆಸಲು ಪ್ರೋತ್ಸಾಹಿಸುತ್ತಿರುವುದು ನಮಗೆಲ್ಲಾ ಹೆಚ್ಚಿನ ಬಲ ಬಂದಿದೆ ಎಂದರು.

ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಶೆಟ್ಟಿ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರ ಕುಲಾಲ್, ಶಾಲಾಭಿವೃಧ್ಧಿ ಸಮಿತಿ ಸಮಿತಿಯ ಅಧ್ಯಕ್ಷ ವಿಶ್ವನಾಥ ತುಂಬಿಕಲ್ಲಾಯ, ಉದ್ಯಮಿ ಶ್ರೀಕಾಂತ್ ನಾಯಕ್, ನುಡಿಸಿರಿ ಸದಸ್ಯ ಕೃಷ್ಣಮೂರ್ತಿ ಅಡಿಗ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯಕ್ಷಗಾನ ಗುರು ನರಸಿಂಗ ತುಂಗ ಅವರಿಗೆ ಗುರುವಂದನೆ ಹಾಗೂ ಮಕ್ಕಳ ಯಕ್ಷ ಶಿಕ್ಷಣಕ್ಕೆ ಸಹಕರಿಸಿದ ಯಕ್ಷ ನುಡಿಸಿರಿ ಕಾರ್ಯದರ್ಶಿ ಭೋಜರಾಜ ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಿತು.
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಲಂಕಿಣಿ ಮೋಕ್ಷ ಮತ್ತು ಕನಕಾಂಗಿ ಕಲ್ಯಾಣ ಎಂಬ ಎರಡು ಪ್ರಸಂಗಗಳು ಪ್ರದರ್ಶನಗೊಂಡವು. ಇದರಲ್ಲಿ ಸುಮಾರು ೪೫ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now