
ಉಡುಪಿ: ರಂಗಭೂಮಿ ಕಲಾವಿದರಿಗೆ ಸಮಾಜದಿಂದ ಗೌರವ ಹಾಗೂ ಗುರುತಿಸುವಿಕೆ ಸಿಗಬೇಕು. ನಮ್ಮ ಸಿನೆಮಾ ಕಲಾವಿದರಲ್ಲಿ ಬಹು ಮಂದಿ ರಂಗಭೂಮಿ ಹಿನ್ನಲೆಯಿಂದ ಬಂದವರು. ಹೀಗಾಗಿ ರಂಗಭೂಮಿಗೆ ಪ್ರೋತ್ಸಾಹ ನೀಡಿ, ಅದನ್ನು ಉಳಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಮಾಹೆ ಮಣಿಪಾಲದ ಸಹಕುಲಾಧಿಪತಿ ಹಾಗೂ ರಂಗಭೂಮಿ ಉಡುಪಿಯ ಗೌರವಾಧ್ಯಕ್ಷ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.
ಅವರು ಶನಿವಾರ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ಮೂರು ದಿನಗಳ ಕಾಲ ನಡೆಯುವ “ರಂಗಭೂಮಿ ರಂಗೋತ್ಸವ” ವನ್ನು ಉದ್ಘಾಟಿಸಿ ಮಾತನಾಡಿದರು. ರಂಗಭೂಮಿ ಉಡುಪಿ ಹಮ್ಮಿಕೊಳ್ಳುತ್ತಿರುವ ನಾಟಕ ಸ್ಪರ್ಧೆ, ರಂಗ ಶಿಕ್ಷಣ, ರಂಗೋತ್ಸವ ಮೊದಲಾದ ಕಾರ್ಯಕ್ರಮಗಳಿಗೆ ಸಮಾಜದ, ಸಂಘಸಂಸ್ಥೆಗಳು ಕೈ ಜೋಡಿಸುವ ಅಗತ್ಯವಿದೆ. ರಂಗ ಚಟುವಟಿಕೆಗಳು ಸಾಮಾಜದ ಜೀವಂತಿಕೆಯ ಲಕ್ಷಣ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ರಂಗಭೂಮಿ ಉಡುಪಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ ರಂಗಭೂಮಿ ಕಳೆದ 45 ವರ್ಷದಿಂದ ನಿರಂತರ ನಾಟಕ ಸ್ಪರ್ಧೆ ನಡೆಸುತ್ತಿದ್ದು, ಇದು ರಾಜ್ಯಕ್ಕೆ ಮಾದರಿಯಾಗಿದೆ. ರಂಗಭೂಮಿಗೆ ಭವಿಷ್ಯದ ದಿನಗಳಲ್ಲಿ ಕಲಾವಿದರು, ಪ್ರೇಕ್ಷಕರು ಕೊರತೆ ಯಾಗಬಾರದು ಎಂಬ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ರಂಗಭೂಮಿ ಹಮ್ಮಿಕೊಂಡ ರಂಗ ಶಿಕ್ಷಣ ಕ್ಕೆ ಅಭೂತಪೂರ್ವ ಸ್ಪಂದನೆ ದೊರೆತಿದೆ ಎಂದರು.
ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ ಯಕ್ಷಗಾನ, ನಾಟಕ , ಕಂಬಳ, ಮೊದಲಾದ ವೈವಿಧ್ಯಮಯ ಸಾಂಸ್ಕೃತಿಕತೆಗೆ ನಮ್ಮ ಕರಾವಳಿ ಜಿಲ್ಲೆಗಳು ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಇಲ್ಲಿನ ಸಾಂಸ್ಕೃತಿಕ ಪ್ರಕಾರಗಳಿಗೆ, ಕಲಾವಿದರಿಗೆ ತುಳುನಾಡಿಗೆ ಹೆಚ್ಚಿನ ಗೌರವ, ಮನ್ನಣೆ ಸಿಗಬೇಕಿದೆ. ಈ ನಿಟ್ಟಿನಲ್ಲಿ ಅದಾನಿ ಕಂಪನಿ ನಿರಂತರ ಪ್ರೋತ್ಸಾಹ ನೀಡಲಿದೆ ಎಂದರು.

ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ರಂಗಭೂಮಿ ಉಡುಪಿ ಸಂಸ್ಥೆ ಇಂದು ೬೦ ವರ್ಷಗಳನ್ನು ಪೂರೈಸುತ್ತಿರುವುದು ಅಭಿನಂದನೀಯ. ಯಾಕೆಂದರೆ ಒಂದು ಸಂಸ್ಥೆ ೬೦ ವರ್ಷಗಳನ್ನು ಪೂರೈಸಿದೆ ಅಂದರೆ ಅದು ಯಶಸ್ಸಿನ ಕಾಲಘಟವನ್ನು ತಲುಪಿದೆ ಎಂದರ್ಥ. ಪ್ರಸ್ತುತ ಸಂಸ್ಥೆಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ರಾಗಿ ಜಾನಪದ ಕಲೆಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಕಂಡಿದ್ದೇನೆ. ಅವರ ನೇತೃತ್ವದಲ್ಲಿ ರಂಗಭೂಮಿ ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸಿದರು.
ರಂಗಭೂಮಿ ಪ್ರದಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಡಿ ಪ್ರಾಸ್ತಾವಿಕ ಮಾತನಾಡಿ, ಈ ಸಲದ ನಾಟಕ ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಂದ ೪೦ಕ್ಕೂ ಅಧಿಕ ತಂಡಗಳು ಬಂದಿದ್ದು ಅವುಗಳಲ್ಲಿ ಯೋಗ್ಯವಾದ ೧೨ ತಂಡಗಳಿಗೆ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಕಾರ್ಯಕ್ರಮಕ್ಕೆ ೭ ಲಕ್ಷ ರೂ. ಗೂ ಅಧಿಕ ವೆಚ್ಚವನ್ನು ರಂಗಭೂಮಿ ಭರಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಾಟಕ ಸ್ಪರ್ಧೆಯ ತೀರ್ಪುಗಾರಿಗೆ ಗೌರವಾರ್ಪಣೆ ನಡೆಯಿತು. ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಬಿ. ಆರ್. ವೆಂಕಟರಮಣ ಐತಾಳ್, , ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಶುಭ ಕೋರಿದರು. ರಂಗಭೂಮಿಯ ಉಪಾಧ್ಯಕ್ಷರುಗಳಾದ ಎನ್. ಆರ್.ಬಲ್ಲಾಳ್ ಹಾಗೂ ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು .
ಬಾಕ್ಸ್ _
ಕಾರ್ಯಕ್ರಮದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆದ ಡಾ. ಟಿ.ಎಂ.ಎ. ಪೈ, ಎಸ್.ಎಲ್.ನಾರಾಯಣ ಭಟ್ ಹಾಗೂ ಮಲ್ಪೆ ಮಧ್ವರಾಜ್ ಸ್ಮಾರಕ 45ನೇ ವರ್ಷದ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನ ಪಡೆದ ಬೆಂಗಳೂರಿನ ರಂಗರಥ ಟ್ರಸ್ಟ್ನ ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ ನಿರ್ದೇಶನದಲ್ಲಿ ಪ್ರದರ್ಶಿಸಿದ ‘ಧರ್ಮನಟಿ’ ನಾಟಕ ತಂಡಕ್ಕೆ 35000ರೂ. ನಗದು ಹಾಗೂ ಫಲಕ,
ದ್ವಿತೀಯ ಬಹುಮಾನ ಪಡೆದ ಬೆಂಗಳೂರಿನ ನಮ್ದೆ ನಟನೆ ತಂಡ ರಾಜೇಂದ್ರ ಕಾರಂತ ನಿರ್ದೇಶನದಲ್ಲಿ ಪ್ರದರ್ಶಿಸಿದ ’ನಾಯಿ ಕಳೆದಿದೆ’ ನಾಟಕ ತಂಡಕ್ಕೆ ಮಲ್ಪೆ ಮಧ್ವರಾಜ್ ಸ್ಮಾರಕ 25,000 ರೂ. ನಗದು ಹಾಗೂ ಫಲಕ ನೀಡಲಾಯಿತು.
ಬ್ರಹ್ಮಾವರದ ಭೂಮಿಕಾ ಹಾರಾಡಿ ತಂಡ ಬಿ.ಎಸ್.ರಾಮ್ ಶೆಟ್ಟಿ ನಿರ್ದೇಶನದಲ್ಲಿ ಪ್ರದರ್ಶಿಸಿದ ‘ಬರ್ಬರೀಕ’ ಪೌರಾಣಿಕ ನಾಟಕ ತೃತೀಯ ಬಹುಮಾನ ಪಡೆದಿದ್ದು, ಪ್ರಶಸ್ತಿಯೊಂದಿಗೆ ಪಿ.ವಾಸುದೇವ ರಾವ್ ಸ್ಮಾರಕ 15,000 ರೂ. ನಗದು ಹಾಗೂ ಸಖೂಬಾಯಿ ಶ್ರೀಧರ ನಾಯಕ್ ಕೊಕ್ಕರ್ಣೆ ಸ್ಮಾರಕ ಸ್ಮರಣಿಕೆ ಪಡೆಯಿತು. ಅಲ್ಲದೆ ಉತ್ತಮ ನಟ, ನಟಿ, ಸೇರಿದಂತೆ ವೈಯುಕ್ತಿಕ ಬಹುಮಾನಗಳನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಪ್ರಥಮ ಬಹುಮಾನ ಪಡೆದ ಧರ್ಮ ನಟಿ ನಾಟಕದ ಮರು ಪ್ರದರ್ಶನ ನಡೆಯಿತು.
ರಂಗಭೂಮಿ ಉಡುಪಿ ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿವೇಕಾನಂದ ವಾಚಿಸಿದರು. ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಪಾದ ಹೆಗಡೆ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪ್ರಥಮ ಬಹುಮಾನ ಪಡೆದ ಧರ್ಮ ನಟಿ ನಾಟಕದ ಮರು ಪ್ರದರ್ಶನ ನಡೆಯಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























