
ಉಡುಪಿ : ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸರಬರಾಜು ಹಾಗೂ ಲೋ ವೋಲ್ಟೇಜ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೆಸ್ಕಾಂ ಸಬ್ ಸ್ಟೇಷನ್ ಗಳನ್ನು ಮೇಲ್ದರ್ಜೆಗೇರಿಸುವಂತೆ ಇಂಧನ ಸಚಿವ ಕೆ. ಜೆ. ಜಾರ್ಜ್ ರವರನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ಮಾಡಿ ಮನವಿ ಮಾಡಿದರು.
ಜಿಲ್ಲಾ ಕೇಂದ್ರವಾದ ಉಡುಪಿ ವಿಧಾನಸಭಾ ಕ್ಷೇತ್ರವು ಶಿಕ್ಷಣ, ವೈದ್ಯಕೀಯ, ಮೀನುಗಾರಿಕೆ, ಕೈಗಾರಿಕೆ, ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ನಗರೀಕರಣ, ಹೊಸ ಬಡಾವಣೆಗಳು ಮತ್ತು ವಸತಿ ಸಮುಚ್ಚಯ ನಿರ್ಮಾಣ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಚಟುವಟಿಕೆಗಳ ವಿಸ್ತರಣೆಯಿಂದ ಕ್ಷೇತ್ರದಲ್ಲಿ ವಿದ್ಯುತ್ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಉಡುಪಿಯ ನಗರ ಹಾಗೂ ಬ್ರಹ್ಮಾವರ ಭಾಗದ ಗ್ರಾಮಾಂತರ ಪ್ರದೇಶಗಳಲ್ಲಿ ಕಡಿಮೆ ವೋಲ್ಟೇಜ್, ವಿದ್ಯುತ್ ವ್ಯತ್ಯಯ ಹಾಗೂ ಟ್ರಾನ್ಸ್ಫಾರ್ಮರ್ಗಳ ಮೇಲಿನ ಹೆಚ್ಚಿನ ಒತ್ತಡದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಮೂಲಸೌಕರ್ಯಗಳನ್ನು ಸಮಗ್ರವಾಗಿ ಬಲಪಡಿಸಲು ಹೊಸ ಟ್ರಾನ್ಸ್ಫಾರ್ಮರ್ಗಳ ಅಳವಡಿಕೆ, ಹೊಸ ಸಬ್ ಸ್ಟೇಷನ್ ಗಳ ನಿರ್ಮಾಣ, ಸಬ್ ಸ್ಟೇಷನ್ ಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಕಾರ್ಯಗಳು ಆಗಬೇಕಾಗಿದೆ.
ಅನುದಾನದ ಮೂಲಕ ಅಗತ್ಯವಿರುವ ಕಡೆ ಹೊಸ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸುವುದು, ಹಾಲಿ ಟ್ರಾನ್ಸ್ಫಾರ್ಮರ್ಗಳ ಸಾಮರ್ಥ್ಯ ಹೆಚ್ಚಿಸುವುದು, ಹಳೆಯ ವಿದ್ಯುತ್ ಮಾರ್ಗಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ಹೊಸ ಕೇಬಲ್ ಮತ್ತು ವಿತರಣಾ ಮಾರ್ಗಗಳನ್ನು ನಿರ್ಮಿಸುವ ಅಗತ್ಯವಿದೆ. ಅದೇ ರೀತಿ ಕಡಿಮೆ ವೋಲ್ಟೇಜ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ಮತ್ತು ವೇಗವಾಗಿ ಬೆಳೆಯುತ್ತಿರುವ ಹೊಸ ಬಡಾವಣೆಗಳಿಗೆ ಅಗತ್ಯ ವಿದ್ಯುತ್ ಮೂಲಸೌಕರ್ಯ ಒದಗಿಸುವುದು ಪ್ರಮುಖ ಆದ್ಯತೆಯಾಗಬೇಕು. ಪ್ರಮುಖ ರಸ್ತೆ ಹಾಗೂ ಜಂಕ್ಷನ್ಗಳಲ್ಲಿ ರಸ್ತೆ ದೀಪ ಮತ್ತು ಹೈಮಾಸ್ಟ್ ದೀಪಗಳ ವ್ಯವಸ್ಥೆಯನ್ನು ಕೂಡ ಬಲಪಡಿಸಬೇಕಾಗಿದೆ.
ಉಡುಪಿ ನಗರವು ಜಿಲ್ಲಾ ಕೇಂದ್ರವಾಗಿರುವುದರಿಂದ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಅತ್ಯಂತ ಅವಶ್ಯಕವಾಗಿದೆ. ಕ್ಷೇತ್ರದ ಪ್ರಸ್ತುತ ಹಾಗೂ ಮುಂದಿನ ಹಲವು ವರ್ಷಗಳ ವಿದ್ಯುತ್ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಮೆಸ್ಕಾಂಗೆ ವಿಶೇಷ ಅನುದಾನವನ್ನು ತುರ್ತಾಗಿ ಮಂಜೂರು ಮಾಡಿ, ಅಗತ್ಯ ಮೂಲಸೌಕರ್ಯ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವಂತೆ ಶಾಸಕ ಯಶ್ ಪಾಲ್ ಸುವರ್ಣ ಅವರು ಇಂಧನ ಸಚಿವರಿಗೆ ಮನವಿ ಮಾಡಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now