
ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ತಲುಪಿಸಿ : ಡಾ. ಪುಷ್ಪಾ ಅಮರನಾಥ್
ಉಡುಪಿ, ಜನವರಿ 10: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರತಿಶತಃ ನೂರರಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರೊಂದಿಗೆ ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಇದರ ಲಾಭ ಪಡೆಯುವಂತೆ ಮಾಡುವುದು ಸಮಿತಿಯ ಸದಸ್ಯರುಗಳು ಹಾಗೂ ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷತೆ ಡಾ. ಪುಷ್ಪಾ ಅಮರನಾಥ್ ಹೇಳಿದರು.
ಅವರು ಇಂದು ಕಾಪುವಿನಲ್ಲಿ, ಕಾಪು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಕಚೇರಿ ಉದ್ಘಾಟನೆ, ಅಧಿಕಾರ ಸ್ವೀಕಾರ ಹಾಗೂ ಪ್ರಥಮ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಪುರುಷ ಪ್ರಧಾನವಾದ ಸಮಾಜದಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ, ಪುರುಷರಷ್ಟೇ ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆಯನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರವು ಯೋಜನೆಗಳನ್ನು ರೂಪಿಸಿದ್ದು, ಇದು ಇನ್ನಷ್ಟು ಅರ್ಹ ಫಲಾನುಭವಿಗಳನ್ನು ತಲುಪಬೇಕು ಎಂದರು.
ಅಧಿಕಾರಿಗಳು ಜನಪರ ಕಾಳಜಿ ಹಾಗೂ ಇಚ್ಛಾಶಕ್ತಿ ಹೊಂದಿದಾಗ ಮಾತ್ರ ಸರಕಾರದ ಯೋಜನೆಗಳು ಫಲಾನುಭವಿಗಳನ್ನು ತಲುಪಲು ಸಾಧ್ಯವಾಗುತ್ತದೆ. ಪ್ರತೀ ತಿಂಗಳಿಗೊಮ್ಮೆ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನಾ ಸಮಿತಿಯ ಪ್ರಗತಿ ಪರಿಶೀಲನೆ ಸಭೆ ನಡೆಸಿ, ವರದಿಯನ್ನು ಜಿಲ್ಲಾ ಹಾಗು ರಾಜ್ಯ ಮಟ್ಟಕ್ಕೆ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದರು.
ಜನಸಾಮಾನ್ಯರ ಮನೆ ಬಾಗಿಲಿಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಪ್ರತೀ ಮೂರು ತಿಂಗಳಿಗೊಮ್ಮೆ ಇಲಾಖಾ ಅಧಿಕಾರಿಗಳೊಂದಿಗೆ ಸಮಿತಿಯ ಸದಸ್ಯರುಗಳು ಗ್ಯಾರಂಟಿ ಅದಾಲತ್ ಅನ್ನು ಹಮ್ಮಿಕೊಂಡು, ಈ ಯೋಜನೆಯಲ್ಲಿ ಏನಾದರೂ ಲೋಪದೋಷಗಳಿದ್ದಲ್ಲಿ ಸ್ಥಳದಲ್ಲಿಯೇ ಪರಿಹಾರ ಮಾಡಲು ಕ್ರಮಕೈಗೊಳ್ಳಬೇಕು ಎಂದರು.

ಮುಖಂಡರಾದ ವಿನಯ್ ಕುಮಾರ್ ಸೊರಕೆ ಮಾತನಾಡಿ, ಫಲಾನುಭವಿಗಳಿಗೆ ತಮಗೆ ದೊರಕುವ ಸವಲತ್ತುಗಳ ಬಗ್ಗೆ ಅರಿವು ಹೊಂದಿರಬೇಕು. ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಯ ಸಮ್ಮೇಳನವನ್ನು ಆಯೋಜಿಸಿ, ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಲುಪದೇ ಇರುವ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕ್ರಮವಹಿಸಲಾಗುವುದು ಎಂದರು.
ಗ್ಯಾರಂಟಿ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕೊಡವೂರು ಮಾತನಾಡಿ, ಜನಸಾಮಾನ್ಯರ ಸಮಸ್ಯೆಗಳನ್ನು ಅರಿತು, ಅವುಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅದನ್ನು ಯಥಾವತ್ತಾಗಿ ಜಾರಿ ಮಾಡಿದಾಗ ಮಾತ್ರ ಯೋಜನೆಗಳು ಪರಿಣಾಮಕಾರಿಯಾಗಿ ಫಲಾನುಭವಿಗಳನ್ನು ತಲುಪುತ್ತವೆ. ಉತ್ತಮ ಕಾರ್ಯಕ್ರಮಗಳು ಜನರ ಜೀವನವನ್ನು ಕಟ್ಟಿಕೊಡುವ ಕೆಲಸವನ್ನು ಮಾಡುತ್ತವೆ ಎಂದರು.
ಕಾಪು ತಾಲೂಕು ಗ್ಯಾರಂಟಿ ಯೋಜನೆಯ ಸಮಿತಿಯ ಅಧ್ಯಕ್ಷ ನವೀನ್ಚಂದ್ರ ಎಸ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನ ಸೇವೆಯೇ ಜನಾರ್ಧನ ಸೇವೆ ಎಂಬ ನಂಬಿಕೆಯೊಂದಿಗೆ ನಾನು ಕಾರ್ಯ ನಿರ್ವಹಿಸುತ್ತೇನೆ. ಗ್ಯಾರಂಟಿ ಯೋಜನೆಯ ಪ್ರತಿಶತಃ ನೂರರಷ್ಟು ಅನುಷ್ಠಾನಕ್ಕೆ ಅಧಿಕಾರಿಗಳು ಹಾಗೂ ಜನಸಾಮಾನ್ಯರು ಸ್ಪಂದಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಯುವನಿಧಿ ಯೋಜನೆಯ ವಿಶೇಷ ನೋಂದಣಿ ಅಭಿಯಾನ ಆರಂಭ ಕುರಿತ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ತಾಲೂಕು ಸಮಿತಿಯ ಸದಸ್ಯರುಗಳಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು ಹಾಗೂ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕಾಪು ತಾಲೂಕು ತಹಶೀಲ್ದಾರ್ ಪ್ರತಿಭಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಕ್ರಂ, ಸ್ಥಾಯಿ ಸಮಿತಿಯ ಅಧ್ಯಕ್ಷ ಅನಿಲ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನೆ, ಕಾಪು ತಾಲೂಕು ಗ್ಯಾರಂಟಿ ಯೋಜನಾ ಸಮಿತಿಯ ಸದಸ್ಯರುಗಳಾದ ಕೀರ್ತಿ ಕುಮಾರ್, ಎಸ್ ವಿಜಯ್, ರೀನ್ ವಿನುತಾ ಡಿಸೋಜಾ, ಸವಿತಾ ಕುಂದರ್, ರಶ್ಮಿತಾ, ರೋಶನ್ ಕುಮಾರ್, ಉದಂiÀi ಸಿ, ಲವ ಕರ್ಕೇರ, ಪ್ರಭಾಕರ ಆಚಾರ್ಯ, ಹಸನಬ್ಬ ಶೇಖ್, ಮಹೇಶ್ ಶೆಟ್ಟಿ, ರಾಜ್ ಮೂಲ್ಯ, ಸುಧೀರ್ ಕರ್ಕೇರ, ಹಸನ್ ಬಾವ ಹಾಗೂ ಪೂರ್ಣಿಮಾ ಜಿ.ಸಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್ ಡಿ ಸಿಲ್ವ ಸ್ವಾಗತಿಸಿ, ಪ್ರಶಾಂತ್ ಹಾವಂಜೆ ನಿರೂಪಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























