
ಉಡುಪಿ : ವರ್ಷದ ಹಿಂದೆ ಮೃತಪಟ್ಟ ಪತ್ರಿಕಾ ವಿತರಕನ ಕುಟುಂಬ ಸಂಕಷ್ಟದಲ್ಲಿರುವುದನ್ನು ಮನಗಂಡ ಸಮಾಜ ಸೇವಕ ವಿಶು ಶೆಟ್ಟಿ ಅವರು, ತನಗೆ ಸನ್ಮಾನದ ಸಂದರ್ಭದಲ್ಲಿ ನೀಡಿದ ಗೌರವ ಧನವನ್ನು ಸಂತ್ರಸ್ತ ಕುಟುಂಬಕ್ಕೆ ನೀಡಿ ಮಾನವೀಯತೆಗೆ ಹೊಸ ಭಾಷ್ಯ ಬರೆದಿದ್ದಾರೆ.
ಅಂಬಲಪಾಡಿಯ ಪತ್ರಿಕಾ ವಿತರಕ ಸುರೇಶ್ ಆಚಾರ್ (33) ಅವರು ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶ್ರಮ ಜೀವಿಯಾಗಿದ್ದ ಅವರು ಉಳಿದ ಸಮಯದಲ್ಲಿ ಅನ್ಯ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಧಾರವಾಗಿದ್ದರು. ಹೀಗಿರುವಾಗ ಮನೆಯೊಂದರ ಮಾಡಿನ ಕೆಲಸ ಮಾಡುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಕಳೆದ ವರ್ಷ ಮೃತ ಪಟ್ಟಿದ್ದರು. ಕುಟುಂಬದ ಆಧಾರಸ್ತಂಭವಾಗಿದ್ದ ಅವರ ಸಾವು ಕುಟುಂಬಕ್ಕೆ ಅಘಾತ ನೀಡಿತ್ತು ಅಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿತ್ತು.
ಇದೀಗ ಸುರೇಶ್ ಆಚಾರ್ ಮೃತಪಟ್ಟು ಒಂದು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಕುಟುಂಬದ ಧಾರುಣ ಪರಿಸ್ಥಿತಿಯನ್ನು ಅರಿತ ವಿಶು ಶೆಟ್ಟಿ ಅವರು ಮನೆಗೆ ತೆರಳಿ ತನಗೆ ಕತಾರ್ ನಲ್ಲಿ ಬಂಟೋತ್ಸವದ ಸಂದರ್ಭದಲ್ಲಿ ನಡೆದ ಸನ್ಮಾನದ ಗೌರವ ಧನವನ್ನು ನೀಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮೃತನ ತಾಯಿ ಸಾವಿತ್ರಿ ಆಚಾರ್ ಅವರು ಮನೆಯ ಪರಿಸ್ಥಿತಿಯನ್ನು ವಿವರಿಸಿ ಕಣ್ಣೀರು ಮಿಡಿದಿದ್ದಾರೆ.
ಸುರೇಶ್ ಆಚಾರ್ ಕುಟುಂಬ ವಾಸವಾಗಿದ್ದ ಮನೆ ತೀರಾ ದುರ್ಬಲಗೊಂಡಿದ್ದು, ಮಳೆಗಾಲದಲ್ಲಿ ಮಳೆ ನೀರು ಒಳ ಪ್ರವೇಶಿಸಿ ಕುಟುಂಬಕ್ಕೆ ಆತಂಕವನ್ನು ಸೃಷ್ಟಿಸಿತ್ತು. ಈ ಕುಟುಂಬ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದು, ಮನೆ ರಿಪೇರಿ ಮಾಡುವ ಸ್ಥಿತಿಯಲ್ಲಿಲ್ಲ. ಮನೆ ರಿಪೇರಿ ಮಾಡಲು ಕನಿಷ್ಟ 4 ಲಕ್ಷ ರೂ.ನ ಆವಶ್ಯಕತೆಯಿದ್ದು, ಮನನೊಂದ ವಿಶು ಶೆಟ್ಟಿ ಅವರು ತನ್ನ ಸನ್ಮಾನದ ಗೌರವ ಧನ *25 ಸಾವಿರಕ್ಕೆ ಮತ್ತೆ 15 ಸಾವಿರ ರೂ. ನ್ನು ಸೇರಿಸಿ 40,000 ರೂ . ನೀಡಲು ಮುಂದಾದಾಗ ಅಂಬಲಪಾಡಿಯ ನಿವೃತ್ತ ವಿಜಯ ಬ್ಯಾಂಕ್ ಅಧಿಕಾರಿ ಸದಾನಂದ ಶೆಟ್ಟಿ ಅವರು 10,000 ರೂ. ನೀಡಿದ್ದಾರೆ. ಹೀಗೆ ಒಟ್ಟು 50,000 ಮೊತ್ತವನ್ನು ವಿಶು ಶೆಟ್ಟಿ ಅವರು ಸಂಕಷ್ಟ ಕುಟುಂಬಕ್ಕೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಬಡ ಕುಟುಂಬಕ್ಕೆ ನೆರವು ನೀಡಲು ಬಯಸುವ ಸಹೃದಯರು ಅವರ ಬ್ಯಾಂಕ್ ಖಾತೆಗೆ ಹಣ ಕಳುಹಿಸಬಹುದು ಎಂದು ವಿಶು ಶೆಟ್ಟಿ ವಿನಂತಿಸಿದ್ದಾರೆ.
ಬ್ಯಾಂಕ್ ಅಕೌಂಟ್ ವಿವರ : ಸಾವಿತ್ರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಂಬಲಪಾಡಿ ಶಾಖೆ, ಸೇವಿಂಗ್ಸ್ ಅಕೌಂಟ್ ನಂ.520101234330836, ಐಎಫ್‌ಎಸ್‌ಸಿ ಕೋಡ್ UBIN0901644.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now