ಗೋಶಾಲೆಯ ಜಲಸಂಪರ್ಕಕ್ಕೆ ನೆರವು – ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ನಿಂದ ಎರಡು ಲಕ್ಷದ ಮೂವತ್ತು ಸಾವಿರ ರುಪಾಯಿ ದೇಣಿಗೆ – ಹನುಮ ಕಲ್ಯಾಣ ಪ್ರಸಂಗ ಪ್ರದರ್ಶನ

ಗೋಶಾಲೆಯ ಜಲಸಂಪರ್ಕಕ್ಕೆ ನೆರವು – ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ನಿಂದ ಎರಡು ಲಕ್ಷದ ಮೂವತ್ತು ಸಾವಿರ ರುಪಾಯಿ ದೇಣಿಗೆ – ಹನುಮ ಕಲ್ಯಾಣ ಪ್ರಸಂಗ ಪ್ರದರ್ಶನ

0Shares

ಬ್ರಹ್ಮಾವರ ಜಿಲ್ಲೆಯ ನಂಚಾರಿನಲ್ಲಿರುವ ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನ ಗೋಶಾಲೆಗೆ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಇವರ ಆಯೋಜನೆಯಲ್ಲಿ ದಿನಾಂಕ ೦೧-೦೨-೨೦೨೬ ನೇ ಭಾನುವಾರ ಮದ್ಯಾಹ್ನ ಎರಡು ಗಂಟೆಗೆ ಮೈರ್ ಕೊಮೆಯ ಸಪ್ತಪದಿ ಕನ್ವೆನ್ ಷನ್ ಹಾಲ್ ನಲ್ಲಿ ಶುಭಾಶಯ ಜೈನ್ ವಿರಚಿತ ಹನುಮ ಕಲ್ಯಾಣ ಎಂಬ ಪೌರಾಣಿಕ ಆಖ್ಯಾನದ ಪ್ರದರ್ಶನ ನಡೆಯಿತು

ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಗೋಶಾಲೆಯ ಮುಖ್ಯಸ್ಥರಿಗೆ ಕಾರ್ಯಕ್ರಮದಿಂದ ಸಂಗ್ರಹವಾದ ಒಂದು ಲಕ್ಷ ರುಪಾಯಿ ಮೊತ್ತದ ದೇಣಿಗೆಯನ್ನು ವೇದಿಕೆಯಲ್ಲಿ ಗಣ್ಯರ ಮುಂದೆ ಹಸ್ತಾಂತರಿಸಲಾಯಿತು. ಉಳಿದ ಒಂದು ಲಕ್ಷದ ಮೂವತ್ತು ಸಾವಿರ ರುಪಾಯಿಗಳ ಮೊತ್ತವನ್ನೂ ಗೋಶಾಲೆಗೆ ಹಸ್ತಾಂತರಿಸುವ ಕುರಿತು ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಇದರ ಅಧ್ಯಕ್ಷ ಗೋವಿಂದ ವಂಡಾರು ಘೋಷಣೆ ಮಾಡಿದರು.

ದೇಣಿಗೆಯನ್ನು ಸ್ವೀಕರಿಸಿ ಮಾತನಾಡಿದ ನಂಚಾರು ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನ ಮುಖ್ಯಸ್ಥರಾದ ರಾಜೇಂದ್ರ ಚಕ್ಕೆರವರು ಅನಾಥ ಗೋವುಗಳ ಸೇವೆಯಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡಿರುವ ನಂಚಾರು ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನ ನೆರವಿಗೆ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ನಿಂತಿರುವುದು ಬಹಳ ಸಂತಸದ ವಿಚಾರ. ಯಕ್ಷಗಾನ ಕಲಾವಿದರಾಗಿ ಶ್ರೀ ಗೋವಿಂದ ವಂಡಾರು ಅವರು ತಮ್ಮ ಟ್ರಸ್ಟ್ ನ ಮುಖಾಂತರ ಗೋವುಗಳ ಪೋಷಣೆ ಹಾಗೂ ರಕ್ಷಣೆಯ ಮಹತ್ತರವಾದ ಉದ್ದೇಶಕ್ಕೆ ಮನ ಮಾಡಿರುವುದರಿಂದ ನಿಜಕ್ಕೂ ಅಭಿನಂದನಾರ್ಹ ಎಂದು ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗೋಶಾಲಾ ಟ್ರಸ್ಟ್ ನ ಮುಖ್ಯಸ್ಥರಾದ ರಾಜೇಂದ್ರ ಚಕ್ಕೆಯವರಿಗೆ ಶಾಲು ಹೊದೆಸಿ ಸನ್ಮಾನಿಸಿ ಗೋಶಾಲೆಗೆ ದೇಣಿಗೆಯನ್ನು ಚೆಕ್ ಮುಖಾಂತರ ನೀಡಲಾಯಿತು..

ಬಳಿಕ ಮಾತನಾಡಿದ ಗೋವಿಂದ ವಂಡಾರು ಕಳೆದ ಕೆಲವು ವರ್ಷಗಳಿಂದ ನಮ್ಮದೇ ಊರಿನ ಗೋಶಾಲೆಯ ಜಲಸಂಪರ್ಕಕ್ಕಾಗಿ ವ್ಯವಸ್ಥೆ ಕಲ್ಪಿಸಬೇಕೆಂಬ ಕನಸು ನನ್ನದಾಗಿತ್ತು. ಯಕ್ಷಗಾನ ಕಲಾವಿದನಾಗಿ ಕಲೆಯಿಂದ ಬದುಕು ಗೌರವ ಮನ್ನಣೆ ಎಲ್ಲವನ್ನೂ ಪಡೆದುಕೊಂಡಿದ್ದೇನೆ. ಅದೇ ಕಲೆಯ ಮೂಲಕ ಇಂದು ಈ ರೀತಿಯಾಗಿ ಗೋಮಾತೆಗೆ ಸೇವೆ ಸಲ್ಲಿಸಲು ಅವಕಾಶ ದೊರಕಿರುವುದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಈ ಪುಣ್ಯದ ಕಾರ್ಯಕ್ಕೆ ಒಂದೊಂದು ರುಪಾಯಿಯೂ ದೇಣಿಗೆ ನೀಡಿದ ಪ್ರತಿಯೊಬ್ಬರಿಗೂ ಆ ಪುಣ್ಯ ಲಭಿಸುತ್ತದೆ ಅವರೆಲ್ಲರಿಗೂ ಗೋಮಾತೆ ಹಾಗೂ ಮಂದಾರ್ತಿ ಮಾತೆ ಒಳಿತು ಮಾಡಲಿ. ಈ ಪುಣ್ಯದ ಕೆಲಸದಲ್ಲಿ ನನ್ನೊಂದಿಗೆ ಭಾಗಿಯಾದ ಟ್ರಸ್ಟ್ ನ ಕಾರ್ಯಕರ್ತರಿಗೂ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ ಎಂದರು.

ಇನ್ನು ಕುಂದಾಪುರ ಕನ್ನಡದ ರಾಯಭಾರಿ ಮನು ಹಂದಾಡಿ ಮಾತನಾಡಿ ಗೋವುಗಳನ್ನು ಪೋಷಣೆ ಮಾಡುವಲ್ಲಿ ಪ್ರತಿಯೊಬ್ಬರೂ ಕೈಲಾದ ಸಹಾಯವನ್ನು ಮಾಡುವುದು ಅಗತ್ಯ. ಗೋಪೂಜೆ ಹಬ್ಬಕ್ಕೆ ಮನೆಯಲ್ಲಿ ಮಾಡುವುದಷ್ಟೆ ಅಲ್ಲ. ನಿಜವಾದ ಪೂಜೆ ಎಂದರೆ ವರ್ಷಕ್ಕೊಮ್ಮೆಯಾದರೂ ಹತ್ತಿರದ ಗೋಶಾಲೆಗೆ ಹೋಗಿ ಅಲ್ಲಿರುವ ಗೋವುಗಳಿಗೆ ತನ್ನ ಕೈಲಾದಷ್ಟು ಸಹಾಯ ಮಾಡುವುದು ಶ್ರೇಷ್ಠ ಕೆಲಸ. ಕೃಷಿಕರಾದವರು ತಮ್ಮ ಹೊಲದಲ್ಲಿ ಬೆಳೆದ ಒಣ ಹುಲ್ಲು ಇತರ ವಸ್ತುಗಳನ್ನು ಗೋಶಾಲೆಗೆ ದಾನ ನೀಡುವುದರಿಂದ ಗೋಶಾಲೆಗೆ ಸಹಾಯವಾಗುವುದರೊಂದಿಗೆ ಅದರ ಫಲವೂ ನಮಗೆ ಸಿಗುತ್ತದೆ ಎಂದರು. ಕಲಾವಿದರಾಗಿ ವಂಡಾರು ಮಾಡಿರುವ ಈ ಸೇವೆ ನಿಜಕ್ಕೂ ಶ್ಲಾಘನೀಯ. ಇದು ಮುಂದಿನ ಯುವಪೀಳಿಗೆಗೆ ಒಂದು ಮಾದರಿ ಎಂದರು.

  ಗೋಶಾಲಾ ಟ್ರಸ್ಟ್ ನ ಜಲಸಂಪರ್ಕದ ಉದ್ದೇಶಕ್ಕೆ ಸತತವಾಗಿ ಶ್ರಮಿಸಿ ಟ್ರಸ್ಟ್ ಗೆ ಎರಡು ಲಕ್ಷದ ಮೂವತ್ತು ಸಾವಿರ ರುಪಾಯಿ ದೇಣಿಗೆ ನೀಡಿದ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ಇದರ ಸ್ಥಾಪಕಾಧ್ಯಕ್ಷರಾದ ಗೋವಿಂದ ವಂಡಾರು ಅವರನ್ನು ನಂಚಾರು ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನ ಹಾಗೂ ಊರ ಗಣ್ಯರ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now