
ಪೋಲೀಸ್ ಇಲಾಖೆಯು ಸಾಮಾಜಿಕ ಕಳಕಳಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಡೆಸುತ್ತಿದೆ. ಈ ಕಾರ್ಯಕ್ರಮದ ಉದ್ದೇಶವನ್ನು ಸರ್ವರೂ ಅರ್ಥಮಾಡಿಕೊಳ್ಳಬೇಕು. ಪೊಲೀಸರು ಅಥವಾ ಸಾರಿಗೆ ಇಲಾಖೆಯವರು ರಸ್ತೆಯಲ್ಲಿ ನಿಂತು ಕೇಸು ಹಾಕುವುದರಿಂದ ಅಪಘಾತ ಕಡಿಮೆ ಮಾಡಲು ಸಾಧ್ಯವಿಲ್ಲ. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿದಾಗ ಮಾತ್ರ ಅಪಘಾತ ತಪ್ಪಿಸಬಹುದು. ವಾಹನದಲ್ಲಿ ಸಂಚರಿಸುವವರು ತಮ್ಮ ಪ್ರಾಣ ಹಾಗೂ ಬೇರೆಯವರ ಪ್ರಾಣದ ಬಗ್ಗೆ ಸದಾ ಎಚ್ಚರದಿಂದ ಇರಬೇಕು ಎಂದು ಸಾರಿಗೆ ಅಧಿಕಾರಿ ಸಂತೋಷ್ ಶೆಟ್ಟಿ ನುಡಿದರು. ಅವರು ಬ್ರಹ್ಮಾವರದ ಕುಂಜಾಲು ಕ್ರಾಸ್‌ನಲ್ಲಿ ವಿವಿಧ ಸಮಾಜಸೇವಾ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆಸಿದ ೩೭ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಉದ್ದೇಶಿಸಿ ಮಾತನಾಡಿದರು.

ಬ್ರಹ್ಮಾವರ ಪೊಲೀಸ್ ಠಾಣೆಯ ಎ.ಎಸ್.ಐ ವಿಠಲರವರು ಮಾತನಾಡಿ ಬ್ರಹ್ಮಾವರ ಠಾಣೆಯಲ್ಲಿ ದಾಖಲಾಗಿರುವ ಕೇಸುಗಳಲ್ಲಿ ಅತಿ ಹೆಚ್ಚಿನ ಕೇಸುಗಳು ಅಪಘಾತಕ್ಕೆ ಸಂಬಂಧಿಸಿದ್ದಾಗಿವೆ. ಈ ಅಪಘಾತಗಳನ್ನು ಕಡಿಮೆ ಮಾಡುವ ಜವಾಬ್ದಾರಿ ಎಲ್ಲರದ್ದಾಗಬೇಕು. ಬೈಕ್ ಸವಾರರು ಹೆಲ್ಮೆಟ್ ಧರಿಸಿಯೇ ಓಡಾಡಬೇಕು. ಯಾವುದೇ ಹಳೆಯ ವಾಹನ ಸಂಚಾರಕ್ಕೆ ಯೋಗ್ಯವಾಗಿದೆಯೇ? ಬ್ರೇಕ್‌ಗಳು ಸರಿ ಇದೆಯೇ ಇಲ್ಲವೇ ಎಂಬುದನ್ನು ನೋಡಿಕೊಂಡು ಓಡಿಸಬೇಕೆಂದರು.
ಇನ್ನೋರ್ವ ಎ.ಎಸ್.ಐ. ಜಯಕುಮಾರ್ ಪೂಜಾರಿ ಮಾತನಾಡಿ ನಮ್ಮಲ್ಲಿ ಎಲ್ಲಾ ಕಾಯ್ದೆ ಕಾನೂನುಗಳು ಹಾಗೂ ವಿಮಾಸೌಲಭ್ಯಗಳಿರಬಹುದು. ಇವುಗಳಿಗಿಂತ ಪ್ರತಿಯೊಬ್ಬರ ಜೀವ ಹಾಗೂ ಕುಟುಂಬ ಮುಖ್ಯ. ಯಾರ ಜೀವ ಹಾನಿಯಾದರೂ ಅಥವಾ ದೇಹಕ್ಕೆ ಭಾಗಶಃ ಹಾನಿಯಾದರೂ ಹಾನಿಗೊಳಗಾದ ವ್ಯಕ್ತಿ ಹಾಗೂ ಕುಟುಂಬ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂಬುದನ್ನು ವಾಹನ ಸಂಚಾರರು ನೆನಪಿನಲ್ಲಿಟ್ಟುಕೊಳ್ಳಬೇಕೆಂದರು.

ವೇದಿಕೆಯಲ್ಲಿ ರೋಟರಿ ಅಧ್ಯಕ್ಷ ಸತೀಶ್ ಶೆಟ್ಟಿ, ಬ್ರಹ್ಮಾವರ – ಬಾರಕೂರು ಲಯನ್ಸ್ ಅಧ್ಯಕ್ಷ ಕೆ.ಸುದೇಶ ಹೆಗ್ಡೆ, ಅಜಪುರ ಕರ್ನಾಟಕ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ,ಬ್ರಹ್ಮಾವರ ರೋಯಲ್ ರೋಟರಿ ಅಧ್ಯಕ್ಷ ಚಂದ್ರಶೇಖರ ನಾಯರಿ, ಬ್ರಹ್ಮಾವರ ರೆಡ್‌ಕ್ರಾಸ್ ಸೊಸೈಟಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹಾರಾಡಿ, ಹಿರಿಯ ನಾಗರಿಕಾ ವೇದಿಕೆ ಅಧ್ಯಕ್ಷ ಮೇಜರ್ ಜಿ.ಬಾಲಕೃಷ್ಣ ಶೆಟ್ಟಿ, ನವಕಿರಣ್ ನವತಾರೆ ಸೇವಾ ವೇದಿಕೆಯ ಶ್ರೀಮತಿ ಕುಸುಮಾ ಮನೋಜ್, ಎಕ್ತಾ ಇವೆಂಟ್ಸ್ ಅಧ್ಯಕ್ಷ ಖಲೀಲ್ ಕೆರಾಡಿ, ರೋಟರ‍್ಯಾಕ್ಟ್ ಅಧ್ಯಕ್ಷ ಆಶಿಸ್ ಅಂದ್ರಾದೆ ಇದ್ದರು. ಬ್ರಹ್ಮಾವರ ಬೋರ್ಡ್ ಹೈಸ್ಕೂಲು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನವಕಿರಣ್ ಸಂಘಟನೆಯ ಸಂಚಾಲಕ ಉಮೇಶ್ ಪೂಜಾರಿ ಸ್ವಾಗತಿಸಿದ್ದು ಪದ್ಮಶ್ರೀ ಡ್ರೈವಿಂಗ್ ಸ್ಕೂಲ್ ಮಾಲಕ ಸುಂದರಾಮ್ ಶೆಟ್ಟಿ ವಂದಿಸಿದರು. ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್(ರಿ.)ನ ಅಲ್ವಿನ್ ಅಂದ್ರಾದೆ ನಿರೂಪಿಸಿದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now