ಕೊರಗ ಸಮುದಾಯವನ್ನು ಸಾಮಾಜಿಕವಾಗಿ ಸದೃಢಗೊಳಿಸಬೇಕು- ಬಸವಮೂರ್ತಿ ಶ್ರೀ

ಕೊರಗ ಸಮುದಾಯವನ್ನು ಸಾಮಾಜಿಕವಾಗಿ ಸದೃಢಗೊಳಿಸಬೇಕು- ಬಸವಮೂರ್ತಿ ಶ್ರೀ

0Shares

ಉಡುಪಿ: ಪ್ರಸ್ತುತ ಇರುವ ಸಮಾಜದಲ್ಲಿ ಅತ್ಯಂತ ಕಡು ಬಡತನದಿಂದ ಕೂಡಿರುವ ಕೊರಗ ಸಮುದಾಯವನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢಗೊಳಿಸುವ ಕಾರ್ಯವನ್ನು ಮಾಡಬೇಕಿದೆ. ಹಾಗಾದಾಗ ಮಾತ್ರವೇ ತಳ ಮಟ್ಟದ ಸಮುದಾಯ ಕೂಡ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಡಾ. ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಕರೆ ನೀಡಿದರು.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಡಾ. ಎಚ್.ಎಸ್. ಶೆಟ್ಟಿ ನೇತೃತ್ವದಲ್ಲಿ ಕುಂದಾಪುರ ತಾಲೂಕಿನ ಉಳ್ಳೂರು ಎಂಬಲ್ಲಿನ ಕೊರಗ ಸಮುದಾಯದ ೧೪ ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಡಾ. ಎಚ್. ಎಸ್ .ಶೆಟ್ಟಿ ಅವರಲ್ಲಿ ಬಸವಾದಿ ಶರಣರ ವ್ಯಕ್ತಿತ್ವವೇ ಕಾಣುತ್ತದೆ. ಸ್ವಾತಂತ್ರ ನಂತರ ಭಾರತದಲ್ಲಿ ಶ್ರೀರಾಮ, ಶ್ರೀಕೃಷ್ಣ , ಕನಕದಾಸರ ಹೆಸರು ಹೇಳಿ ಭಾಷಣ ಮಾಡಿದವರು ಮಾತ್ರ ಇದ್ದರು. ಆದರೆ ತಳ ಮಟ್ಟದವರ ಪರವಾಗಿ ಮಾತನಾಡುವವರು ಯಾರೂ ಇರಲಿಲ್ಲ. ಆದ್ದರಿಂದಲೇ ಆ ತಳ ವರ್ಗದ ಸಮುದಾಯ ದ ಹಲವಾರು ಕುಟುಂಬಗಳು ಮತಾಂತರಕ್ಕೆ ತುತ್ತಾದವು. ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು, ಡಾ. ಎಚ್. ಎಸ್. ಶೆಟ್ಟಿ ಅವರಂತಹ ಉದಾತ್ತ ಚಿಂತನೆ ಉಳ್ಳವರು ಅಂದಿನ ಕಾಲದಲ್ಲೇ ಸಿಗುತ್ತಿದ್ದರೆ ತಳ ಮಟ್ಟದ ಸಮುದಾಯಗಳು ಮತಾಂತರವಾಗುತ್ತಿರಲಿಲ್ಲ ಎಂದು ತಿಳಿಸಿದರು. ಪ್ರಸ್ತುತ ಇಂತಹ ಉದಾತ್ತ ಚಿಂತನೆಯುಳ್ಳವರು ಸನಾತನ ಸಂಸ್ಕೃತಿಯಲ್ಲಿ ಇರುವುದರಿಂದ ಮುಂದಾಗುವ ಅನಾಹುತವನ್ನು ತಡೆಯಬಹುದಾಗಿದೆ. ಇವರಿಂದ ಪ್ರೇರಣೆ ಪಡೆದು ಮತ್ತಷ್ಟು ಜನರು ಕೊರಗ ಸಮುದಾಯ ಹಾಗೂ ಇತರ ಸಮುದಾಯಗಳಿಗೆ ಸಹಾಯ ಮಾಡುವ ಗುಣವನ್ನು ಹೊಂದುವಂತಾಗಲಿ ಎಂದು ಹಾರೈಸಿದರು. ನಿರಾಶ್ರಿತರಿಗೆ ಸಾಮಾಜಿಕ ನ್ಯಾಯ ಸಿಗಬೇಕು ಅಂದಿದ್ದರೆ, ಕಲ್ಪಿಸಿಕೊಡಬೇಕು ಎಂದು ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದರು ೧೯೭೦ ರಲ್ಲಿ ಮಾಡಿದ್ದರು.‌ ಹಾಗಾಗಿ ತಳ ವರ್ಗದ ಸಮುದಾಯಗಳು ನಿಮ್ಮ ಪರವಾಗಿ ಉಡುಪಿ ಪೇಜಾವರ ಮಠವಿದೆ ಎಂಬುದನ್ನು ಧೈರ್ಯವಾಗಿ ಹೇಳಿಕೊಳ್ಳಿ ಎಂದು ತಿಳಿಸಿದರು. ಇಂದಿನ ದಿನಮಾನಸದಲ್ಲಿ ಬಡವರು ತಮ್ಮ ಮನೆಯ ಬಳಿ ಇದ್ದರೆ ಅಗೌರವ ಎಂದು ಭಾವಿಸುವ ಶ್ರೀಮಂತರ ಮಧ್ಯದಲ್ಲಿ ಸ್ವಾಭಿಮಾನದಿಂದ ಬದುಕಲು ಮನೆ ನಿರ್ಮಿಸಿ ಕೊಟ್ಟಿರುವದು ಗೌರವದ ವಿಚಾರ ಎಂದು ಎಚ್.ಎಸ್. ಶೆಟ್ಟಿ ಅವರ ಕಾರ್ಯವನ್ನು ಶ್ಲಾಘಿಸಿದರು.

ಪೇಜಾವರ ಶ್ರೀ ವಿಶ್ವ ಪ್ರಸನ್ನ ಶ್ರೀಪಾದರು ಆಶೀರ್ವಚನ ನೀಡಿ, ಕಳೆದ ಎರಡು ವರ್ಷಗಳಲ್ಲಿ ಡಾ.ಎಚ್. ಎಸ್. ಶೆಟ್ಟಿ ಅವರು ೨೮ ಮನೆಗಳನ್ನು ನಿರ್ಮಿಸಿ ಕೊರಗ ಸಮುದಾಯಕ್ಕೆ ಕೊಟ್ಟಿದ್ದಾರೆ. ಇನ್ನು ೭೨ ಮನೆಗಳನ್ನು ನಿರ್ಮಿಸಿ ಕೊಡಲಿದ್ದಾರೆ. ಆಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಹಾಗೂ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆದಿದ್ದು, ಇನ್ನೇನಿದ್ದರೂ ರಾಮರಾಜ್ಯ ನಿರ್ಮಾಣ ಮಾಡುವ ಕೆಲಸ ಮಾತ್ರ ಬಾಕಿ ಇದೆ. ಆ ನಿಟ್ಟಿನಲ್ಲಿ ಇಂದು ಮನೆಗಳನ್ನು ನಿರ್ಮಿಸಿ ಕೊಡಲಾಗಿದ್ದು, ಇದು ಶ್ರೀರಾಮನಿಗೆ ಅರ್ಪಿತ ಎಂದರು.

ಮತಾಂತರ ಆಗಬಾರದು ಎಂಬುದೊಂದೇ ಷರತ್ತು

ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಪೇಜಾವರ ಶ್ರೀಗಳು, ನೀವು ರಾಮನ ಸೇವೆ ಮಾಡುವುದಾದರೆ ಕಡು ಬಡವನಿಗೆ ಮನೆ ಕಟ್ಟಿಕೊಡಿ ಎಂದು ಹೇಳಿದ ಏಕೈಕ ಮಾತಿಗೆ ಬದ್ದವಾಗಿ ಡಾ. ಎಚ್. ಎಸ್. ಶೆಟ್ಟಿ ಅವರು ೧೦೦ ಮನೆಗಳನ್ನು ಕೊರಗ ಸಮುದಾಯಕ್ಕೆ ಕಟ್ಟಿ ಕೊಡುವ ಭರವಸೆ ನೀಡಿದರು. ಅದರಲ್ಲಿ ೨೮ ಮನೆಗಳು ಸಾಕಾರಗೊಂಡಿವೆ. ಈ ಮನೆಗಳನ್ನು ಕಟ್ಟಿ ಕೊಡುವ ಸಂದರ್ಭದಲ್ಲಿ ಡಾ. ಶೆಟ್ಟಿ ಅವರು, ಯಾರೂ ಕೂಡ ಮತಾಂತರ ಆಗಬಾರದು ಎಂಬ ಏಕಮಾತ್ರ ಷರತ್ತು ವಿಧಿಸಿ ಕನಸಿನ ಮನೆ ಕಟ್ಟಿ ಕೊಟ್ಟಿರುವುದು ಹೆಮ್ಮೆಯ ವಿಷಯವಾಗಿದೆ. ಇಂತಹ ನಿರ್ಧಾರಗಳು ನಮಗೆ ಮೇಲ್ಪಂಕಿ ಹಾಕಿ ಕೊಡುತ್ತವೆ ಎಂದರು‌.

ಆರ್ ಎಸ್ ಎಸ್ ಗೆ ಅರ್ಪಣೆ

ಡಾ. ಎಚ್. ಎಸ್.ಶೆಟ್ಟಿ ಮಾತನಾಡಿ,ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ೧೦೦ ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಮನೆಗಳನ್ನು ಆ ಸಂಘಕ್ಕೆ ಅರ್ಪಿಸಲು ಇಚ್ಛಿಸುತ್ತೇನೆ. ನಾನು ದುಡಿದ ಸ್ವಲ್ಪ ಪ್ರಮಾಣವನ್ನು ಸಮಾಜಕ್ಕೆ ಕೊಡಬೇಕೆಂಬ ಕಾರಣಕ್ಕೆ ೧೮ ವರ್ಷಗಳ ಹಿಂದೆ ಟ್ರಸ್ಟ್ ಆರಂಭಿಸಿದ್ದೆ. ಈ ಮೊದಲು ಅನ್ನ ದಾಸೋಹ, ವಿದ್ಯಾರ್ಥಿ ವೇತನ ಮಾತ್ರ ನೀಡುತ್ತಿದ್ದೆವು. ಪೇಜಾವರ ಶ್ರೀಗಳ ಮಾತಿನ ಪ್ರೇರಣೆಯಿಂದಾಗಿ ೨ ವರ್ಷದ ಹಿಂದೆ ಮನೆ ಕಟ್ಟಲು ಆರಂಭಿಸಿದ್ದೆವು. ಇನ್ನು ಉಳಿದ ೨ ವರ್ಷದಲ್ಲಿ ೭೨ ಮನೆ ಗಳನ್ನು ಕಟ್ಟಿ ಕೊಡುವ ಸಂಕಲ್ಪ ಮಾಡಿದ್ದೇನೆ ಎಂದರು.

ಕೊರಗರ ಆರೋಗ್ಯ ಸಮಸ್ಯೆ ಕುರಿತು ಸಂಶೋಧನೆ ಆಗಲಿ

ಒಂದಷ್ಟು ವರ್ಷಗಳ ಹಿಂದೆ ಕೊರಗ ಸಮುದಾಯ ಅತ್ಯಂತ ಆರೋಗ್ಯವಾಗಿತ್ತು. ಸಮುದಾಯದ ಜನರು ಗಟ್ಟಿಮುಟ್ಟಾಗಿದ್ದರು. ಆದರೆ ಪ್ರಸ್ತುತ ಸರ್ಕಾರ ಸರಿಯಾದ ಪೌಷ್ಠಿಕಾಂಶಯುಕ್ತ ಆಹಾರ ನೀಡದ ಪರಿಣಾಮ ಹಾಗೂ ಇತರೆ ಕಾರಣಗಳಿಂದ ಇಡೀ ಕೊರಗ ಸಮುದಾಯ ಅನಾರೋಗ್ಯದಿಂದ ಬಳಲುತ್ತಿದೆ. ಅವರ ಜನಸಂಖ್ಯೆಯೂ ತೀವ್ರವಾಗಿ ಕುಸಿಯುತ್ತಿದೆ. ಹಾಗಾಗಿ ಈ ಕುರಿತು ಕೇಂದ್ರ ಸರ್ಕಾರ ಕೂಡಲೇ ಸಂಶೋಧನೆ ನಡೆಸಿ, ಕಾರಣ ಹುಡುಕಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ಕೊರಗ ಸಮುದಾಯದ ಮುಖಂಡೆ ಸುಶೀಲ ನಾಡ ಮಾತನಾಡಿ, ನಮ್ಮ ಸಮುದಾಯ ಆರ್ಥಿಕವಾಗಿ ಬಹಳ ಹಿಂದುಳಿದಿದೆ. ಸರ್ಕಾರಿ ನೌಕರಿಯೂ ನಮಗೆ ಸಿಗುತ್ತಿಲ್ಲ. ನೇರ ನೇಮಕಾತಿಗೆ ಆಗ್ರಹಿಸಿ ನಾವು ಕಳೆದ ೧೧ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ ಎಂದರು. ನಮ್ಮಲ್ಲಿ ವಿದ್ಯಾವಂತರಿದ್ದರೂ ನಮ್ಮನ್ನು ಅಸ್ಪೃಶತೆಯಿಂದ ಕಾಣುವ ಮನಸ್ಥಿತಿ ಇನ್ನೂ ದೂರವಾಗಿಲ್ಲ. ಹೀಗಾಗಿ ಆತ್ಮ ವಿಶ್ವಾಸದ ಕೊರತೆಯಿಂದ ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ. ನಮಗೆ ನೇರ ನೇಮಕಾತಿ ಮಾಡಿ ಹುದ್ದೆ ಕೊಡಬೇಕು ಎಂದು ಆಗ್ರಹಿಸಿದರು.

ನಾವೆಲ್ಲರೂ ಉಪಕಾರ ಮಾಡುವ ಗುಣ ಬೆಳೆಸಿಕೊಳ್ಳೋಣ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತನಾಡಿ,

ಜಾಂಬವಂತ ಹನುಮಂತ ನಿಗೆ ತನ್ನ ಶಕ್ತಿಯನ್ನು ನೆನಪಿಸಿದಂತೆ ಡಾ. ಎಚ್. ಎಸ್. ಶೆಟ್ಟಿ ಅವರು ನಮ್ಮನ್ನೆಲ್ಲಾ ಸೇವೆ ಮಾಡುವಂತೆ ಎಚ್ಚರಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ನಾವು ಭಾವಿಸಬೇಕು. ಈ ಕಾರ್ಯವನ್ನು ಮಾಡಲು ಮತ್ತಷ್ಟು ಮಂದಿ ಪ್ರೇರಣೆ ಪಡೆಯಬೇಕು. ಎಲ್ಲರೂ ಮನೆಯೇ ಕಟ್ಟಿಸಿಕೊಡಬೇಕಾಗಿಲ್ಲ. ಬದಲಿಗೆ ತಮ್ಮಿಂದಾಗುವ ಸಹಾಯವನ್ನು ಮಾಡಬೇಕು ಎಂದರು. ಡಾ.ಎಚ್.ಎಸ್ .ಶೆಟ್ಟಿ‌ ಅವರು ಮನವಿ ಮಾಡಿದ, ಕೊರಗರ ಸಮುದಾಯದ ಆರೋಗ್ಯ ಸಮಸ್ಯೆಯ ಕುರಿತು ಅಧ್ಯಯನ ನಡೆಸಲು ಬೇಕಾದ ಕ್ರಮ ಕೈಗೊಳ್ಳಲು ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೈ. ಭರತ್ ಶೆಟ್ಟಿ, ಗುರುರಾಜ ಗಂಟಿಹೊಳೆ, ಯಶ್ ಪಾಲ್ ಸುವರ್ಣ, ಕಿರಣ್ ಕುಮಾರ್ ಕೋಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಹೊಸ ದಿಗಂತ ಪತ್ರಿಕೆ ಸಿಇಒ ಪ್ರಕಾಶ್ ಪಿ.ಎಸ್, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕ್ಕಾರ್, ೭೪ ಉಳ್ಳೂರು ಗ್ರಾ.ಪಂ. ಅಧ್ಯಕ್ಷೆ ಕುಸುಮಾ ಶೆಟ್ಟಿ, ಉಳ್ಳೂರು ಶ್ರೀ ಬನಶಂಕರಿ ದೇವಾಲಯದ ಆಡಳಿತ ಮೋಕ್ತೇಸರ ಸಂಜೀವ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಪಹರೆ ವೇದಿಕೆ ಕಾರವಾರದ ಅಧ್ಯಕ್ಷ ನ್ಯಾಯವಾದಿ ನಾಗರಾಜ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now