ಗೃಹರಕ್ಷಕರಿಂದ ಸಮಾಜಕ್ಕೆ ನಿಸ್ವಾರ್ಥ ಸೇವೆ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಗೃಹರಕ್ಷಕರಿಂದ ಸಮಾಜಕ್ಕೆ ನಿಸ್ವಾರ್ಥ ಸೇವೆ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

0Shares

ಉಡುಪಿ, ಡಿಸೆಂಬರ್ 13: ಪ್ರಕೃತಿಕ ವಿಕೋಪ ಸೇರಿದಂತೆ ಮುಂತಾದ ತುರ್ತು ಸಂದರ್ಭದಲ್ಲಿ ಗೃಹರಕ್ಷಕದಳದ ಸಿಬ್ಬಂದಿಗಳು ತಮ್ಮ ಜೀವವನ್ನು ಪಣಕಿಟ್ಟು ತಕ್ಷಣ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಸಮಾಜಕ್ಕೆ ನಿಸ್ವಾರ್ಥ ಸೇವೆ ನೀಡುತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

ಅವರು ಇಂದು ನಗರದ ಜಿಲ್ಲಾ ಗೃಹರಕ್ಷಕ ದಳ ಕಚೇರಿ ಆವರಣದಲ್ಲಿ ಜಿಲ್ಲಾ ಗೃಹರಕ್ಷಕ ದಳ ಉಡುಪಿ ಜಿಲ್ಲೆ ಇವರ ವತಿಯಿಂದ ನಡೆದ ಅಖಿಲ ಭಾರತ ಗೃಹರಕ್ಷಕ ದಿನಾಚರಣೆ ಕಾರ್ಯಕ್ರಮವು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಇಲಾಖೆಯ ಜೊತೆಗೂಡಿ, ಅವರಿಗೆ ಸಹಕಾರ ನೀಡಿ, ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ದಳದ ಕಾರ್ಯ ಶ್ಲಾಘನೀಯ ಎಂದ ಅವರು, ಮುಂದಿನ ದಿನಗಳಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿಗಳೂ ಇದೇ ರೀತಿಯಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ನೀಡುವಂತೆ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಮಾತನಾಡಿ, ಗೃಹರಕ್ಷಕ ದಳವು ಪೊಲೀಸ್ ಇಲಾಖೆಯ ಒಂದು ಪ್ರಮುಖ ಅಂಗವಾಗಿದ್ದು, ಬೇರೆ ಇಲಾಖೆಯನ್ನು ಹೋಲಿಸಿದರೆ ಗೃಹ ರಕ್ಷಕದಳ ಇಲಾಖೆಯು ಪೊಲೀಸ್ ಇಲಾಖೆಯನ್ನು ಅತಿ ಸಮೀಪದಿಂದ ತಿಳಿದಿದೆ. ಯಾವುದೇ ಸಮಯದಲ್ಲಾದರೂ ಪೊಲೀಸ್ ಇಲಾಖೆಯ ಕೆಲಸಗಳಿಗೆ ಗೃಹರಕ್ಷಕರು ಸಹಕಾರ ನೀಡುತ್ತಿದ್ದಾರೆ ಎಂದರು.

ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಟ ಡಾ. ರೋಶನ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ವಾರ್ಷಿಕ ವರದಿ ವಾಚಿಸಿ ಮಾತನಾಡಿ, ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಮುಂದಿನ ದಿನಗಳಲ್ಲಿ ಬೀಚ್ಗಳಲ್ಲಿ ಪ್ರವಾಸಿಗರ ಜೀವರಕ್ಷಕರ ಸೇವೆಯಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗುವುದು ಎಂದ ಅವರು, ಪ್ರತಿಯೊಬ್ಬರೂ ಶಿಸ್ತು, ಬದ್ಧತೆಯಿಂದ ತಮಗೆ ಸೂಚಿಸುವ ಕಾರ್ಯವನ್ನು ನಿರ್ವಹಿಸಿ, ಸಂಸ್ಥೆಗೆ ಉತ್ತಮ ಹೆಸರನ್ನು ತರಬೇಕು ಎಂದರು.

ಕಾರ್ಯಕ್ರಮದ ಅಂಗವಾಗಿ ಗೃಹರಕ್ಷಕ ದಳ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಕಾರ್ಕಳ ಘಟಕದ ಶಿವಪ್ರಸಾದ್, ಬ್ರಹ್ಮಾವರ ಘಟಕದ ವಿಜಯ ಕುಮಾರ್, ಉಡುಪಿ ಘಟಕದ ಪೂರ್ಣಿಮಾ ಹಾಗೂ ಮಣಿಪಾಲ ಘಟಕದ ವಿಲ್ಮಾ ಜ್ಯೋತಿ ರೊಡ್ರೆಗಸ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಗೃಹರಕ್ಷಕ ದಳ ಕಛೇರಿಯ ಅಧೀಕ್ಷಕ ರತ್ನಾಕರ್ ಎಂ ಸನ್ಮಾನಿತರ ವಿವರ ವಾಚಿಸಿದರು.

ಜಿಲ್ಲೆಯ ವಿವಿಧ ಘಟಕಗಳ ಗೃಹ ರಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕದಳದ ಸೆಕೆಂಡ್ ಇನ್ ಕಮಾಂಡ್ ಕೆ.ಸಿ.ರಾಜೇಶ್ ಸ್ವಾಗತಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು. ಸ್ಟೀವಸ್ ಪ್ರಕಾಶ್ ಲೂವಿಸ್ ನಿರೂಪಿಸಿದರೆ, ಕಾರ್ಕಳ ಘಟಕದ ಪ್ಲಟೂನ್ ಕಮಾಂಡರ್ ಪ್ರಭಾಕರ ಸುವರ್ಣ ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now