ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ

ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ

0Shares

ಉಡುಪಿ ಡಿಸೆಂಬರ್ 06 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ವಿದ್ಯಾರತ್ನ ಸ್ಕೂಲ್ & ಕಾಲೇಜ್ ಆಫ್ ನರ್ಸಿಂಗ್, ನ್ಯೂ ಸಿಟಿ ಕಾಲೇಜ್ ಆಫ್ ನರ್ಸಿಂಗ್, ರಾಷ್ಟ್ರೀಯ ಸೇವಾ ಯೋಜನೆ ಮುನಿಯಾಲು ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸೈನ್ಸ್, ಗಾರ್ಡ್ ಸಂಸ್ಥೆ, ದೀಪ ಜ್ಯೋತಿ ನೆಟ್ವರ್ಕ್, ಆಸರೆ ಚಾರಿಟೇಬಲ್ ಟ್ರಸ್ಟ್, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ), ಉಡುಪಿ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆ ಪ್ರಗತಿಸೌಧ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ನಗರದ ಅಂಬಲಪಾಡಿ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆ ಸಭಾಂಗಣ – ಪ್ರಗತಿಸೌಧದಲ್ಲಿ ವಿಶ್ವ ಏಡ್ಸ್ ದಿನ –ಜಾಥಾ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ. ಜಿ ಹುಬ್ಬಳ್ಳಿ ಮಾತನಾಡಿ, ಅಸುರಕ್ಷಿತ ಲೈಂಗಿಕ ಸಂಪರ್ಕ ಸೋಂಕಿತ ರಕ್ತದ ವರ್ಗಾವಣೆ ಅಥವಾ ಸೋಂಕಿತ ವ್ಯಕ್ತಿಗೆ ಬಳಸಿದ ಚುಚ್ಚುಮದ್ದಿನ ಹಂಚಿಕೆ ಮೂಲಕ ಎಚ್.ಐ.ವಿ ಸೋಂಕು ಹರಡುತ್ತದೆ. ಈ ರೋಗದ ಬಗ್ಗೆ ಇಂದಿಗೂ ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆಗಳು ಇದ್ದು, ಇದನ್ನು ನಿವಾರಿಸಲು ಮತ್ತು ಸಮಾಜದಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಏಡ್ಸ್ ನಿಯಂತ್ರಣದಲ್ಲಿ ಯುವಜನತೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಯುವ ಜನತೆ ಕ್ಷಣಿಕ ಸುಖಕ್ಕಾಗಿ ಬಲಿಯಾಗದೇ ಏಡ್ಸ್ ರೋಗದ ಕುರಿತು ಅರಿವು ಹೊಂದುವುದರ ಜೊತೆಗೆ ಸಾರ್ವಜನಿಕರಿಗೆ, ರೋಗಿಗಳಿಗೆ ಏಡ್ಸ್ ರೋಗ ಹರಡುವ ಕುರಿತು ಹಾಗೂ ತಡೆಗಟ್ಟಲು ಇರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಅವರುಗಳಲ್ಲಿ ಜಾಗೃತಿ ಮೂಡಿಸಬೇಕು. ಮನುಷ್ಯ ತನ್ನ ದೈಹಿಕ ಹಾಗೂ ಮಾನಸಿಕ ಸ್ಥಿತಿಯನ್ನು ನಿಯಂತ್ರಣದಲ್ಲಿ ಇರಿಸಿಕೊಂಡಾಗ ಮಾತ್ರ ಹೆಚ್.ಐ.ವಿ ಏಡ್ಸ್ನಿಂದ ದೂರ ಉಳಿಯಲು ಸಾಧ್ಯ. ಏಡ್ಸ್ ಕಾಯಿಲೆಗೆ ಒಳಗಾದವರನ್ನು ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕಲು ದಾರಿ ಮಾಡಿಕೊಡಬೇಕು ಎಂದರು.

ಭಾರತೀಯ ರೆಡ್ಕ್ರಾಸ್ ಸ್ಂಸ್ಥೆ ಉಡುಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಜವಾಬ್ದಾರಿಯುತ ಯುವ ಜನಾಂಗ ಹೆಚ್.ಐ.ವಿ ಏಡ್ಸ್ ಅನ್ನು ಹೇಗೆ ನಿಯಂತ್ರಿಸಲು ಸಾಧ್ಯ, ಎಚ್ಚರಿಕೆ ಕ್ರಮಗಳು, ಸಂಸ್ಕಾರಯುಕ್ತ ಜೀವನ ಸಾಗಿಸುವ ಕುರಿತು, ಆರೋಗ್ಯದ ಮಹತ್ವದ ಬಗ್ಗೆ ತಿಳಿಸಿದರು.

ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಅಧ್ಯಕ್ಷೆ ತಾರಾ ಉಮೇಶ್ ಆಚಾರ್ಯ ಮಾತನಾಡಿ, ಮನುಷ್ಯ ತನ್ನ ಆಸೆಗಳನ್ನು ನಿಯಂತ್ರಿಸಿಕೊಂಡು ವಿಶೇಷ ರೀತಿಯಲ್ಲಿ ಬದುಕಬೇಕು ಎಂಬ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಹೆಚ್.ಐ.ವಿ/ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಸಾಧನೆಗೈದ ಐವರನ್ನು ಸನ್ಮಾನಿಸಲಾಯಿತು.

ಶ್ರೀ ಬಸವೇಶ್ವರ ವೀರಗಾಸೆ ಜಾನಪದ ಕಲಾತಂಡ, ಅರೆಕೆರೆ, ಭದ್ರಾವತಿ ಇವರು ವೀರಗಾಸೆ ಪ್ರದರ್ಶಿಸಿ ಯುವಜನತೆಗೆ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ನಾಗರಾಜ ಶೆಟ್ಟಿ, ಸಂತೋಷ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ ಚಿದಾನಂದ ಸಂಜು ಎಸ್.ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ರಾವ್ ಸ್ವಾಗತಿಸಿ, ಮಂಜುನಾಥ ಗಾಣಿಗ ನಿರೂಪಿಸಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಹೆಚ್ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಉಡುಪಿ ಬೋರ್ಡ್ ಹೈಸ್ಕೂಲ್ನಿಂದ ಅಂಬಲಪಾಡಿ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆ ಸಭಾಂಗಣದವರೆಗೆ ನಡೆದ ಜಾಥಾ ಕಾರ್ಯಕ್ರಮಕ್ಕೆ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ರಾಜು ಪೂಜಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ. ಜಿ ಹುಬ್ಬಳ್ಳಿ ಚಾಲನೆ ನೀಡಿದರು. ಜಾಥಾ ಕಾರ್ಯಕ್ರಮ ಏಡ್ಸ್ ನಿಯಂತ್ರಣಕ್ಕಿರುವ ಅಡೆತಡೆಗಳನ್ನು ಕೊನೆ ಗೊಳಿಸೋಣ ಎಂಬ ಘೋಷ ವಾಕ್ಯದೊಂದಿಗೆ ಪಥ ಸಂಚಲನ ಮೂಲಕ ಉಡುಪಿ ಕೆ.ಎಂ ಮಾರ್ಗವಾಗಿ ಅಂಬಲಪಾಡಿ ಪ್ರಗತಿ ಸೌಧ ತನಕ ಜಾಗೃತಿ ಮೂಡಿಸಲಾಯಿತು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now