
ಗಿನ್ನೆಸ್ ದಾಖಲೆಗಳ ಸರದಾರಿಣಿ, ಯೋಗ ಸಾಧಕಿ ಉಡುಪಿಯ ತನುಶ್ರೀ ಪಿತ್ರೋಡಿ ಮತ್ತೊಂದು ದಾಖಲೆಗೆ ಸಿದ್ಧವಾಗಿದ್ದಾರೆ.
ಯೋಗದಲ್ಲಿ ಎಂಟು ಹಾಗೂ ಭರತನಾಟ್ಯದಲ್ಲಿ ಒಂದು ಬಾರಿ ಸೇರಿ ಒಟ್ಟು 9 ಬಾರಿ ವಿಶ್ವ ದಾಖಲೆ ಬರೆದ ಉಡುಪಿಯ ಯೋಗಪಟು ತನುಶ್ರೀ ಪಿತ್ರೋಡಿ ಅವರು 10ನೇ ವಿಶ್ವ ದಾಖಲೆಗೆ ಸಜ್ಜಾಗಿದ್ದಾರೆ. ಅ. 24ರಂದು ಬೆಹರಿನ್ನಲ್ಲಿ ನಡೆಯಲಿರುವ ಯೋಗ ಕಾರ್ಯಕ್ರಮದಲ್ಲಿ ಈ ಸಾಧನೆ ಮಾಡಲಿದ್ದಾರೆ. ಕನ್ನಡ ಸಂಘ ಬೆಹರಿನ್ ಹಾಗೂ ಬೆಹರಿನ್ ಯೋಗ ಕಮ್ಯುನಿಟಿ ಸಹಯೋಗದಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ತನುಶ್ರೀ ಅವರು ಒಂದು ಗಂಟೆಯಲ್ಲಿ 300 ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಮತ್ತೊಂದು ವಿಶ್ವ ದಾಖಲೆಗೆ ಸಿದ್ಧರಾಗಿದ್ದಾರೆ. ಈ ಕಾರ್ಯಕ್ರಮವನ್ನು ಭಾರತೀಯ ರಾಯಭಾರಿ ಕಚೇರಿಯ ರಾಯಭಾರಿ ವಿನೋದ್ ಜಾಕೋಬ್ ಉದ್ಘಾಟಿಸಲಿದ್ದು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಇದು ದಾಖಲಾಗಲಿದೆ.

ಈ ಹಿಂದೆ ತನುಶ್ರೀ ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ 45 ನಿಮಿಷಗಳಲ್ಲಿ 245 ಆಸನಗಳನ್ನು ಪ್ರದರ್ಶಿಸಿ ದಾಖಲೆ ನಿರ್ಮಿಸಿದ್ದರು. ಯೋಗದ ಮೂಲಕ ಅವರು 45,000 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಿದ ಹೆಗ್ಗಳಿಕೆ ಈಕೆಯದ್ದು. 2017ರಲ್ಲಿ ನಿರಾಲಂಬ ಪೂರ್ಣ ಚಕ್ರಾಸನವನ್ನು ಕೇವಲ ಒಂದು ನಿಮಿಷದಲ್ಲಿ 19 ಬಾರಿ ಮಾಡಿದ್ದಾರೆ. ಅಲ್ಲದೆ, 2018ರಲ್ಲಿ ಎದೆಯ ಭಾಗ ಮತ್ತು ತಲೆಯನ್ನು ಸ್ಥಿರವಾಗಿರಿಸಿ ಉಳಿದ ಭಾಗವನ್ನು 1.42 ನಿಮಿಷದಲ್ಲಿ 42 ಬಾರಿ ತಿರುಗಿಸಿ ದಾಖಲೆ ಮಾಡಿದ್ದರು. 2019ರಲ್ಲಿ ಇದೇ ಭಂಗಿಯಲ್ಲಿ ತನ್ನ ಹಿಂದಿನ ದಾಖಲೆ ಮುರಿದಿದ್ದರು. ನಂತರ ಧನುರಾಸನ ಭಂಗಿಯನ್ನು 1.40 ನಿಮಿಷದಲ್ಲಿ 96 ಬಾರಿ ಮಾಡಿ ಮತ್ತೊಂದು ದಾಖಲೆಗೆ ಕಾರಣರಾಗಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now