
ಉಡುಪಿಯ ಹಿರಿಯ ಸಾಂಸ್ಕೃತಿಕ ಅಧ್ವರ್ಯು , ನಿವೃತ್ತ ಉಪನ್ಯಾಸಕ , ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮಾಜಿ ನಿರ್ದೇಶಕ ಪ್ರೊ ಹೆರಂಜೆ ಕೃಷ್ಣ ಭಟ್ಟರು ಇಂದು ಗುರುವಾರ ಸಂಜೆ ವಯೋಸಹಜ ಅಸ್ವಾಸ್ಥ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು
ಉಡುಪಿಯ ಎಂ ಜಿ ಎಂ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರು , ವಿಭಾಗ ಮುಖ್ಯಸ್ಥರಾಗಿ ಸುದೀರ್ಘ ಅವಧಿ ಸೇವೆ ಸಲ್ಲಿಸಿದ್ದ ಭಟ್ಟರು ನಿವೃತ್ತಿಯ ಬಳಿಕ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರಾಗಿ ಅನೇಕ ವರ್ಷಗಳ ಕಾಲ ಮಹತ್ವದ ಸೇವೆ ಸಲ್ಲಿಸಿ ಕೇಂದ್ರದ ಮೂಲಕ ಅನೇಕ ಸಾಹಿತ್ಯ ಸಾಂಸ್ಕೃತಿಕ ಕೈಂಕರ್ಯಗಳನ್ನು ಯಶಸ್ವಿಯಾಗಿ ಸಂಯೋಜಿಸಿದ್ದರು .
ಉಡುಪಿಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮೇರುಸ್ವರೂಪರಾಗಿದ್ದ ಕು ಶಿ ಹರಿದಾಸ ಭಟ್ಟರ ಗರಡಿಯಲ್ಲಿ ಪಳಗಿದ್ದ ಕೃಷ್ಣ ಭಟ್ಟರು ತಾನೂ ಅದೇ ರೀತಿಯಲ್ಲಿ ಓರ್ವ ಧೀಮಂತ ಸಾಂಸ್ಕೃತಿಕ ಸಂಘಟಕರಾಗಿ ರೂಪುಗೊಂಡಿದ್ದರು . ಸುಮಾರು 5 ದಶಕಗಳ ಉಡುಪಿಯ ಅನೇಕ ಪರ್ಯಾಯೋತ್ಸಗಳು , ವಾದಿರಾಜ ಕನಕ ದಾಸ ಸಂಗೀತೋತ್ಸವಗಳು , ಹತ್ತಾರು ಸಾಹಿತ್ಯ ಸಾಂಸ್ಕೃತಿಕ ಹಬ್ಬಗಳು , ವಿಶ್ವತುಳು ಸಮ್ಮೇಳನ , ನಡಾವಳಿಯೇ ಮುಂತಾಗಿ ದೊಡ್ಡ ದೊಡ್ಡ ಕಾರ್ಯಕ್ರಮಗಳು ಭಟ್ರ ಸಂಯೋಜನೆ ಮಾರ್ಗದರ್ಶನ ಮುತುವರ್ಜಿಯಲ್ಲಿ ಯಶಸ್ವಿಯಾಗಿ ಆಯೋಜನೆಗೊಂಡಿವೆ .
ಜಾನಪದ ಸಂಶೋಧನ ಕೇಂದ್ರದ ಮೂಲಕ ಅನೇಕ ನೇಪಥ್ಯಕ್ಕೆ ಸರಿಯುತ್ತಿರುವ ಜನಪದೀಯ ಕಲೆಗಳ ದಾಖಲೀಕರಣಗಳೂ ಭಟ್ರ ಮಾರ್ಗದರ್ಶನದಲ್ಲೇ ನಡೆದಿರುವುದು ವಿಶೇಷ .
ಈ ರೀತಿಯ ತಮ್ಮ ಬಹುಮುಖಿ ಸಾಮಾಜಿಕ ಕರ್ತವ್ಯ ಗಳ ಮೂಲಕ ಸಿದ್ಧರೂ ಪ್ರಸಿದ್ಧರೂ ಆಗಿದ್ದ ಭಟ್ರಿಗೆ ಉಡುಪಿ ಕೃಷ್ಣ ಮಠ ಅಷ್ಟಮಠಗಳ ಅನೇಕಗೌರವ ಸಂಮಾನಗಳು , 2007ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಂಮೇಳನದ ಪುರಸ್ಕಾರ , ಆಳ್ವಾಸ್ ನುಡಿಸಿರಿ ಪ್ರಶಸ್ತಿ ತಿಂಗಳೆ ಗರಡಿ ಉತ್ಸವದ ಪುರಸ್ಕಾರಗಳೂ ಸೇರಿದಂತೆ ಅನೇಕ ಗೌರವಗಳು ಸಂದಿವೆ .
ಇಳಿವಯಸ್ಸಿನಲ್ಲೂ ವೇದಾಧ್ಯಯನ ನಡೆಸಿ ಪ್ರತಿನಿತ್ಯವೆಂಬಂತೆ ಪವಮಾನಸೂಕ್ತಾದಿಗಳನ್ನು ಪಾರಾಯಣ ನಡೆಸುತ್ತಿದ್ದರು .
ಪುತ್ತಿಗೆ ಕೃಷ್ಣಾಪುರ , ಪೇಜಾವರ ಕಾಣಿಯೂರು ಅದಮಾರು ಪಲಿಮಾರು ಸೋದೆ ಶೀರೂರು ಭಂಡಾರಕೇರಿ ಶ್ರೀಪಾದರುಗಳು ಕೃಷ್ಣ ಭಟ್ಟರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು ಶ್ರೀಕೃಷ್ಣ ಮುಖ್ಯಪ್ರಾಣರ ವಿಶೇಷ ಸೇವೆ ಸಲ್ಲಿಸಿದ್ದ ಭಟ್ಟರು ವೈಶಾಖ ಶುದ್ಧ ಏಕಾದಶಿ ಪರ್ವದಿನದಂದೇ ಹರಿಪಾದ ಸೇರಿರುವುದು ವಿಶೇಷವಾಗಿದೆ . ಭಗವಂತನು ಅವರಿಗೆ ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ .
ಡಾ ಡಿ ವೀರೇಂದ್ರ ಹೆಗ್ಗಡೆ ,
ಶಾಸಕ ಯಶ್ಪಾಲ್ ಸುವರ್ಣ ಸಂಸದ ಕೋಟ ಶ್ರೀನಿವಾಸ ಪೂಜಾರಿ , ಮಾಜಿ ಶಾಸಕ ಕೆ ರಘುಪತಿ ಭಟ್ , ಡಾ ಮೋಹನ ಆಳ್ವಾ ,
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























