ಜನಸಾಮಾನ್ಯರು ಆರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ಹೊಂದುವುದು ಅತ್ಯವಶ್ಯ : ಡಿಹೆಚ್‍ಓ ಡಾ. ಬಸವರಾಜ್ ಹುಬ್ಬಳ್ಳಿ

ಜನಸಾಮಾನ್ಯರು ಆರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ಹೊಂದುವುದು ಅತ್ಯವಶ್ಯ : ಡಿಹೆಚ್‍ಓ ಡಾ. ಬಸವರಾಜ್ ಹುಬ್ಬಳ್ಳಿ

0Shares

ಉಡುಪಿ, ಏಪ್ರಿಲ್ 07 (ಕವಾ): ಪ್ರತಿಯೊಬ್ಬ ಜನಸಾಮಾನ್ಯರು ಆರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ಹೊಂದುವುದರೊಂದಿಗೆ ಸದೃಢವಾದ ಆರೋಗ್ಯ ಕಾಪಾಡಿಕೊಂಡು ಸ್ವಾಸ್ಥ್ಯ ಜೀವನ ನಡೆಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ ಹೇಳಿದರು.
ಅವರು ಇಂದು ನಗರದ ಮಿಷನ್ ಆಸ್ಪತ್ರೆ ರೋಡ್‍ನ ಕ್ರಿಶ್ಚಿಯನ್ ಇಂಗ್ಲೀಷ್ ಮೀಡಿಯಂ ಸ್ಕೂಲ್‍ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಸರ್ವೇಕ್ಷಣಾ ಘಟಕ ಎನ್.ಸಿ.ಡಿ ಘಟಕ, ಜಿಲ್ಲಾ ಆಸ್ಪತ್ರೆ ಎನ್.ಸಿ.ಡಿ ವಿಭಾಗ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಕ್ರಿಶ್ಚಿಯನ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮಿಷನ್ ಆಸ್ಪತ್ರೆ ರೋಡ್ ಉಡುಪಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ, ಪೊಲೀಸ್ ಉಪಾಧೀಕ್ಷಕರ ಕಚೇರಿ ಉಪವಿಭಾಗ ಹಾಗೂ ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇವರ ಸಹಯೋಗದಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾರ್ವಜನಿಕರ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಹಾಗೂ ಅವರುಗಳ ಒಳಿತಿಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ಪ್ರತೀ ವರ್ಷ ವಿಶ್ವ ಆರೋಗ್ಯ ದಿನಾಚರಣೆಯನ್ನು ಆಚರಿಸುತ್ತಾ ಬರುತ್ತಿದೆ. ಪ್ರತಿಯೊಂದು ಆರಂಭಗಳು ಆರೋಗ್ಯಕರವಾಗಿದ್ದಲ್ಲಿ ನಮ್ಮ ಭವಿಷ್ಯವು ಭರವಸೆಯಿಂದ ಕೂಡಿರುತ್ತವೆ ಎಂದರು.

ಯಾವುದೇ ಕಾಯಿಲೆಗಳು ಬಂದ ನಂತರ ಅದಕ್ಕೆ ಚಿಕಿತ್ಸೆ ಪಡೆಯುವ ಬದಲು ಕಾಯಿಲೆಗಳು ಬಾರದಂತೆ ನೋಡಿಕೊಳ್ಳುವ ಆರೋಗ್ಯ ಶೈಲಿ ಹಾಗೂ ಆಹಾರ ಪದ್ಧತಿ ಕ್ರಮಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.
ಜಿಲ್ಲಾ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ವಾಸುದೇವ್ ಮಾತನಾಡಿ, ರಕ್ತದೊತ್ತಡ, ಮಧುಮೇಹ ಸೇರಿದಂತೆ ಮತ್ತಿತರ ಕಾಯಿಲೆಗಳು ಚಿಕ್ಕ ಮಕ್ಕಳಿಗೂ ಬರುವ ಸಾಧ್ಯತೆ ಇದ್ದು, ಈ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಹೊಂದಿ ಅದನ್ನು ಪೋಷಕರಿಗೆ ಹಾಗೂ ಸುತ್ತಮುತ್ತಲಿನವರಿಗೆ ಅರಿವು ಮೂಡಿಸಿದಾಗ ಅವರುಗಳು ನಿರಂತರ ಆರೋಗ್ಯ ತಪಾಸಣೆ ಮಾಡಿಸುತ್ತಾರೆ. ಆರೋಗ್ಯಕ್ಕೆ ಪೂರಕವಾದ ದೈಹಿಕ ಚಟುವಟಿಕೆ, ಸಮತೋಲಿತ ಆಹಾರ ತೆಗೆದುಕೊಳ್ಳುತ್ತಾರೆ. ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಆರ್ಥಿಕ ಸಂಪತ್ತಿಗಿಂತ ಆರೋಗ್ಯಕರವಾಗಿ ಇರುವುದೇ ದೊಡ್ಡ ಸಂಪತ್ತು. ಆರೋಗ್ಯವಂತರಾಗಿದ್ದಾಗ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಠಿಯಿಂದ ಆರೋಗ್ಯ ಇಲಾಖೆಯು ನಿರಂತರ ಆರೋಗ್ಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ಇಂತಹ ಆರೋಗ್ಯ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ, ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಎನ್.ಸಿ.ಡಿ ಕೋ-ಆರ್ಡಿನೇಟರ್ ಡಾ. ಅಂಜಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬರೂ ಸುಸ್ಥಿರ ಆರೋಗ್ಯ ಹೊಂದಲು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಅಸಾಂಕ್ರಾಮಿಕ ರೋಗಗಳ ಪರೀಕ್ಷೆಯನ್ನು, ಮಾರಣಾಂತಿಕ ಕಾಯಿಲೆಗಳ ಬಗ್ಗೆ ಮಾಹಿತಿಯನ್ನು, ಆಪ್ತಸಮಾಲೋಚನೆಯನ್ನು ತಜ್ಞ ವೈದ್ಯರುಗಳು ನೀಡಲಿದ್ದು, ಈ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ಸರ್ಜನ್ ಡಾ. ಅಶೋಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನ್ಯೂಸಿಟಿ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಂದ ಆರೋಗ್ಯ ಕಾಳಜಿ ಕುರಿತು ಕಿರುನಾಟಕ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಅಧ್ಯಕ್ಷ ಡಾ. ಸುರೇಶ್ ಶೆಣೈ, ಮಂಗಳೂರು ಎ.ಜೆ ಆಸ್ಪತ್ರೆಯ ರೇಡಿಯೇಷನ್ ಅಂಕೊಲಾಜಿ ವಿಭಾಗ ಮುಖ್ಯಸ್ಥ ಡಾ. ಕಮಲಾಕ್ಷ ಶೆಣೈ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಿ.ಇ.ಓ ರಾಜೇಶ್ ಶೇರಿಗಾರ್, ಕ್ರಿಶ್ಚಿಯನ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮುಖ್ಯೋಪಾಧ್ಯಾಯಿನಿ ಹೆಲೆನ್ ಪಿ.ಎಸ್.ಐ ಈರಣ್ಣ, ಜಿಲ್ಲಾ ಆಸ್ಪತ್ರೆಯ ಆಪ್ತ ಸಮಾಲೋಚಕ ಮನು ಎಸ್.ಬಿ, ನ್ಯೂಸಿಟಿ ಕಾಲೇಜ್ ಆಫ್ ನರ್ಸಿಂಗ್ ಇಲ್ಲಿನ ಅಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಸ್ವಾಗಿತಿಸಿ, ಆರೋಗ್ಯ ನಿರೀಕ್ಷಣಾಧಿಕಾರಿ ಸತೀಶ್ ರಾವ್ ನಿರೂಪಿಸಿದರೆ, ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now