ಉಡುಪಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥ ಪರಿಚಲನಾ ಮತ್ತು ಎರವಲು ಸೇವೆಗೆ ಚಾಲನೆ.

ಉಡುಪಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥ ಪರಿಚಲನಾ ಮತ್ತು ಎರವಲು ಸೇವೆಗೆ ಚಾಲನೆ.

0Shares

ಉಡುಪಿ ಅಜ್ಜರಕಾಡಿನಲ್ಲಿರುವ ಉಡುಪಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥ ಪರಿಚಲನಾ (ಲೈಬ್ರೇರಿ ಅಟೋಮೇಶನ್) ಹಾಗೂ ಓದುಗರಿಗೆ ಆನ್‌ಲೈನ್ ಎರವಲು ಸೇವೆ (ಆನ್‌ಲೈನ್ ಪಬ್ಲಿಕ್ ಆ್ಯಕ್ಸೆಸ್ ಕೆಟಲಾಗ್ – ಓಪಿಎಸಿ ) ಸೌಲಭ್ಯದ ಉದ್ಘಾಟನೆ ಶುಕ್ರವಾರ ನಡೆಯಿತು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ಇದರ ಆಯುಕ್ತರಾದ ಜಯವಿಭವ ಸ್ವಾಮಿ ಅವರು ಈ ಸೇವಾ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿ,

ಗ್ರಂಥಾಲಯ ಎಂದರೆ ದೇವಳವಿದ್ದಂತೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂತಹ ಹೈಟೆಕ್ ಲೈಬ್ರೇರಿಗಳ ವ್ಯವಸ್ಥೆಯಾಗಿದೆ, ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಫಂಡ್‌ನಲ್ಲಿ 35 ಕೋಟಿ ವೆಚ್ಚದಲ್ಲಿ ಹೈಟೆಕ್ ಲೈಬ್ರೇರಿ ನಿರ್ಮಾಣವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಅಧ್ಯಯನ ನಡೆಸಲು ಲೇಟೆಸ್ಟ್ ಪುಸ್ತಕಗಳ ಜೊತೆಗೆ ಹವಾನಿಯಂತ್ರಿಕ (ಏಸಿ) ಕೊಠಡಿಗಳನ್ನು ನಿರ್ಮಿಸಲು ಚಿಂತನೆ ನಡೆದಿದೆ. ಬಹುಷ: ಇದು ಒಂದು ತಿಂಗಳೊಳಗೆ ಕಾರ್ಯಗತಗೊಳ್ಳಲಿದೆ ಎಂದರು.

ಉಡುಪಿ, ಮಂಗಳೂರು, ಕರಾವಳಿ ಹಾಗೂ ಗುಲ್ಬರ್ಗ, ರಾಯಚೂರು, ಕೋಲಾರ ಮೊದಲಾದ ಬಿಸಿಲು ಹೆಚ್ಚಿರುವ ಕಡೆಗಳಲ್ಲಿ ಕೂತುಕೊಂಡು ಓದಬೇಕು ಎನ್ನುವ ವಾತಾವರಣ ಕಲ್ಪಿಸಲಾಗುವುದು. ಉತ್ತಮ ಖುರ್ಚಿ, ಟೇಬಲ್ ಜೊತೆಗೆ ಸಾಧ್ಯವಾದರೆ ಏಸಿ ವ್ಯವಸ್ಥೆಯನ್ನು ಕೂಡಾ ಅಳವಡಿಸಲು ಸೂಚಿಸಿದ್ದೇನೆ. ಸ್ಥಳೀಯಾಡಳಿತ ನೀಡುವ ಸೆಸ್ ಸಂಗ್ರಹಣೆಯಲ್ಲಿ ಶೇ.60ರಷ್ಟು ಪುಸ್ತಕ ಖರೀದಿ ಮಾಡಬೇಕಾಗಿದೆ. ಇದರಲ್ಲಿ ಶೇ.20 ರಷ್ಟು ಮೊತ್ತವನ್ನು ಓದುಗರು ಇಷ್ಟಪಟ್ಟ ಪುಸ್ತಕಗಳನ್ನು ತರಿಸಿಕೊಡಲು ಅವಕಾಶವಿದೆ ಎಂದರು.

ಪ್ರಸ್ತುತ ಉಡುಪಿ ನಗರಕೇಂದ್ರ ಗ್ರಂಥಾಲಯ ಅತ್ಯುತ್ತಮ ಹಾಗೂ ಆಧುನಿಕ ಸೌಲಭ್ಯಗಳೊಂದಿಗೆ ಓದುಗರಿಗೆ ತೆರೆದಿದೆ. ಉತ್ತಮ ಅಧಿಕಾರಿಗಳು, ಸಿಬಂದಿಗಳು ಇದ್ದಾರೆ. ಆದ್ದರಿಂದ ಉಡುಪಿಯ ಓದುಗರು ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು. ಸ್ಥಳೀಯಾಡಳಿತ ಸಂಸ್ಥೆಗಳು ಗ್ರಂಥಾಲಯಗಳನ್ನು ತೆರೆಯಲು ಅಗತ್ಯವಾದ ಜಾಗ, ಕಟ್ಟಡ ನೀಡಿದರೆ ಜಿಲ್ಲೆಯ ಓದುಗರಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಹೆಚ್ಚಿನ ಮಂದಿ ಕೆಎಎಸ್, ಐಎಎಸ್ ನಂತಹ ಸೇವಾಕ್ಷೇತ್ರಗಳಿಗೆ ಕಾಲಿರಿಸಬೇಕು. ಇದಕ್ಕಾಗಿ ಬೇಕಾದ ಎಲ್ಲಾ ಪುಸ್ತಕಗಳನ್ನು ಇಲಾಖೆ ಒದಗಿಸಲಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಗ್ರಂಥಾಲಯದ ಉಪಾಧ್ಯಕ್ಷೆ ಹಾಗೂ ಸಾಹಿತಿ ವಸಂತಿ ಶೆಟ್ಟಿ ಬ್ರಹ್ಮಾವರ ಮಾತನಾಡಿ, ಓಪಾಕ್ ಸೌಲಭ್ಯವನ್ನು ಉಡುಪಿ ನಗರಕೇಂದ್ರ ಗ್ರಂಥಾಲಯದಲ್ಲಿ ಪ್ರಾರಂಭಿಸಿರುವುದರಿAದ ಓದುಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ನಾವು ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಇಂತಹ ಸೌಲಭ್ಯಗಳಿದ್ದರೆ ಬದುಕಿನಲ್ಲಿ ಹೆಚ್ಚಿನದ್ದನ್ನು ಸಾಧಿಸುವ ಅವಕಾಶ ಸಿಗುತ್ತಿತ್ತು. ಆದರೆ ಇಂದಿನ ಯುವ ಪೀಳಿಗೆಗೆ ಇಂತಹ ಹೈಟೆಕ್ ಸೌಲಭ್ಯ ಸಿಕ್ಕಿದೆ. ಪ್ರಮುಖವಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಇಲ್ಲಿನ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ನಗರ ಸಭೆ ವ್ಯಾಪ್ತಿಯಲ್ಲಿ ಇಂತಹ ಹೈಟೆಕ್ ಗ್ರಂಥಾಲಯವಿರುವುದು ಖುಷಿಯ ಸಂಗತಿ. ಆದ್ದರಿಂದ ಓದುಗರ ಹಿತಾಸಕ್ತಿಗೆ ಪೂರಕವಾಗಿ ನಗರಕೇಂದ್ರ ಗ್ರಂಥಾಲಯಕ್ಕೆ ಅಗತ್ಯವಾದ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದರು.

ನಗರಕೇAದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಪ್ರಾಸ್ತಾವಿಕ ಮಾತುಗಳನ್ನಾಡಿ, ಗ್ರಂಥಾಲಯ ಇಲಾಖೆ ಜೊತೆಗೆ ಜಿಲ್ಲಾಡಳಿತ, ನಗರಸಭೆ ಹಾಗೂ ಜನಪ್ರತಿನಿಧಿಗಳ ಸಹಕಾರದಲ್ಲಿ 5 ಕೋಟಿ ರೂ.ವೆಚ್ಚದಲ್ಲಿ ಈ ಹೈಟೆಕ್ ಗ್ರಂಥಾಲಯ ತಲೆ ಎತ್ತಲು ಸಾಧ್ಯವಾಗಿದೆ. ಓದುಗರು ಈ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಂಥಾಲಯ ಇಲಾಖೆಯ ಆಯುಕ್ತರಾದ ಜಯವಿಭವ ಸ್ವಾಮಿ ಅವರು ನಗರಕೇಂದ್ರ ಗ್ರಂಥಾಲಯದ ವಿವಿಧ ವಿಭಾಗಗಳನ್ನು ಪರಿಶೀಲಿಸಿ, ಮೆಚ್ಚುಗೆ ವ್ಯಕ್ತ ಪಡಿಸಿದರು. ಅಲ್ಲದೆ ಗ್ರಂಥಾಲಯದಲ್ಲಿದ್ದ ಓದುಗರೊಂದಿಗೆ ಚರ್ಚಿಸಿ, ಸಲಹೆಗಳನ್ನು ಸ್ವೀಕರಿಸಿದರು.

ಉಡುಪಿ ಜಿಲ್ಲಾ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಎಂ. ಉಪಸ್ಥಿತರಿದ್ದರು.

ನಗರಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಸ್ವಾಗತಿಸಿದರು. ಗ್ರಂಥ ಪಾಲಕಿ ರಂಜಿತಾ ಸಿ. ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ಧರ್ಜೆ ಸಹಾಯಕಿ ಶಕುಂತಳಾ ಕುಂದರ್ ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now