
ಮಲ್ಪೆ: ದೇಶದ ಗಣರಾಜ್ಯೋತ್ಸವ ಹಾಗೂ ದೇವರ ವಾಕ್ಯದ ಭಾನುವಾರ ಆಚರಣೆಯ ಪ್ರಯುಕ್ತ ಸಂತ ಅನ್ನಮ್ಮ ಚರ್ಚ್ ತೊಟ್ಟಂ ಇದರ ಮಿಶನರಿ ಮಕ್ಕಳ ಸೊಸೈಟಿ ಇವರ ವತಿಯಿಂದ ಬಡ ಮಕ್ಕಳ ಸಹಾಯಾರ್ಥವಾಗಿ ಮಕ್ಕಳ ನೇತೃತ್ವದಲ್ಲಿಯೇ ಚರ್ಚಿನ ಸಭಾಂಗಣದಲ್ಲಿ ಆಯೋಜಸಿದ್ದ ಬೃಹತ್ ಆಹಾರ ಮೇಳ ಸಾರ್ವಜನಿಕರ ಗಮನ ಸೆಳೆಯಿತು.

ಆಹಾರ ಮೇಳಕ್ಕೆ ಚಾಲನೆ ನೀಡಿದ ಮಾತನಾಡಿದ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಚರ್ಚಿನ ಪುಟ್ಟ ಮಕ್ಕಳು ತಾವೇ ಮುತುವರ್ಜಿ ವಹಿಸಿ ಬಡ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ಆಹಾರ ಮೇಳವನ್ನು ಆಯೋಜಿಸದ್ದಾರೆ. ಮೂರನೇ ತರಗತಿಯಿಂದ 10 ನೇ ತರಗತಿ ವರೆಗಿನ ಮಕ್ಕಳು ತಾವೇ ತಮ್ಮ ಮನೆಗಳಲ್ಲಿ ತಯಾರಿಸಕೊಂಡು ಬಂದ ತಿಂಡಿ ತಿನಿಸುಗಳನ್ನು ಇಲ್ಲಿ ಮಾರಾಟ ಮಾಡಿ ಅದರಿಂದ ಜಮೆಯಾದ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ಉಪಯೋಗಿಸುವ ಸದುದ್ದೇಶವನ್ನು ಇಟ್ಟುಕೊಂಡಿರುವುದು ಶ್ಲಾಘನಾರ್ಹ ಸಂಗತಿಯಾಗಿದೆ.

ಸಣ್ಣ ವಯಸ್ಸಿನಲ್ಲಿ ಮಕ್ಕಳ ಮನಸ್ಸಿನಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವ, ಇತರರ ಬಗ್ಗೆ ಕಾಳಜಿ, ಹಂಚಿ ಬಾಳುವ ಮನೋಭಾವವನ್ನು ಬಿತ್ತಿದಾಗ ಮುಂದೆ ಸಮಾಜದಲ್ಲಿ ಮಹತ್ತರವಾದ ಬದಲಾವಣೆಯನ್ನು ಕಾಣಲು ಸಾಧ್ಯವಿದೆ. ಪ್ರತಿ ಮನೆಯಲ್ಲಿ ಕೂಡ ಮಕ್ಕಳು ಚಿಕ್ಕವರಾಗಿದ್ದಾಗಲೇ ಇಂತಹ ಮೌಲ್ಯಗಳನ್ನು ಮೈಗೂಡಿಸಲು ಪ್ರೋತ್ಸಾಹಿಸಿದಾಗ ಅದೇ ಮಗು ಬೆಳೆದು ದೊಡ್ಡವರಾದಾಗ ಅಶಕ್ತರಿಗೆ ಇನ್ನಷ್ಟು ಹೆಚ್ಚಿನ ಸಹಾಯ ಮಾಡಲು ಮುಂದೆ ಬರುತ್ತದೆ. ಮಕ್ಕಳಲ್ಲಿ ಹಂಚಿಕೊಳ್ಳುವ ಮೌಲ್ಯಗಳು ಸಮಾಜದಲ್ಲಿ ಸಮಾನತೆ ಹಾಗೂ ಸಾಮರಸ್ಯಗಳನ್ನು ಮೂಡಿಸಲು ಸಹಾಯಕವಾಗುತ್ತದೆ ಎಂದರು.

ಅಂಗಡಿಗಳ ಮಾದರಿಯಲ್ಲಿ ಕೌಂಟರ್ ಗಳನ್ನು ನಿರ್ಮಿಸಿದ್ದು ಅವುಗಳಲ್ಲಿ ಮಕ್ಕಳೇ ಉತ್ಸಾಹದಿಂದ ತಾವು ತಯಾರಿಸಿರುವ ವಿವಿಧ ಬಗೆಯ ಖಾದ್ಯಗಳನ್ನು ಮಾರಾಟ ಮಾಡುವುದು ಕಂಡಬಂತು. ಚರ್ಚಿನ ಸುಮಾರು 50ಕ್ಕೂ ಮಕ್ಕಳು ತಮ್ಮ ಪಾಲಕರ ನೆರವಿನಿಂದ ವಿವಿಧ ಬಗೆಯ ಖಾದ್ಯಗಳನ್ನು ಮಾಡಿಸಿಕೊಂಡು ಬಂದಿದ್ದರು. ಚರ್ಚಿನ ಭಕ್ತಾದಿಗಳು, ಪೋಷಕರು ಹಾಗೂ ಸಹಪಾಠಿಗಳು ಹಣವನ್ನು ನೀಡುವ ಮೂಲಕ ಖಾದ್ಯಗಳ ರುಚಿಯನ್ನು ಸವಿದರು.

ಮಕ್ಕಳು ತಮ್ಮ ಮನೆಗಳಿಂದ ಮಾಡಿಸಿಕೊಂಡು ಬಂದಿದ್ದ ತಿಂಡಿತಿನಿಸುಗಳನ್ನು ಒಪ್ಪ, ಓರಣವಾಗಿ ತಮಗಾಗಿ ನಿಗದಿ ಮಾಡಿದ್ದ ಸ್ಥಳದಲ್ಲಿ ಜೋಡಿಸಿದರು. ಅಲ್ಲಿ ಸ್ವಚ್ಛತೆಗೆ ಆದ್ಯತೆ ಇತ್ತು. ಸುಮ್ಮನೆ ನೋಡಲು ಬಂದವರೂ ಏನಾದರೊಂದು ಖರೀದಿ ಮಾಡಿ ನಾಲಿಗೆ ಚಪಲ ತೀರಿಸಿಕೊಳ್ಳೋಣವೆನ್ನುವಷ್ಟರ ಮಟ್ಟಿಗೆ ಮಕ್ಕಳು ಗ್ರಾಹಕರನ್ನು ಆಕರ್ಷಿಸಿದರು.
ಫ್ರೈಡ್ ರೈಸ್, ನೂಡಲ್ಸ್, ಬರ್ಗರ್, ಡಂಪ್ಲಿಂಗ್ಸ್,, ಚಿಕನ್ ಚಿಲ್ಲಿ, ಸ್ಪ್ರಿಂಗ್ ರೋಲ್, ಪಾನಿಪೂರಿ, ಸ್ಯಾಂಡ್ ವಿಚ್, ಫ್ರೂಟ್ ಬೌಲ್, ಕಾಫಿ ಮತ್ತು ಟೀ, ಲೆಮನ್ ಮಿಂಟ್ ಜ್ಯೂಸ್, ಇಡ್ಲಿ ಮತ್ತು ಚಿಕನ್ ಸುಕ್ಕ, ವಿವಿಧ ಜ್ಯೂಸ್, ಹಾಗೂ ಹಲವಾರು ಬಗೆಯ ತಿನಿಸುಗಳು ನೋಡನೋಡುತ್ತಲೇ ಬಾಯಲ್ಲಿ ನೀರೂರಿಸಿದವು. ಮಕ್ಕಳ ಉತ್ಸಾಹವಂತೂ ಮಾರುಕಟ್ಟೆಯ ವಾತಾವರಣ ಇಮ್ಮಡಿಗೊಳಿಸಿತ್ತು.
ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಉಪಾಧ್ಯಕ್ಷರಾದ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕರಾದ ವನಿತಾ ಫೆರ್ನಾಂಡಿಸ್, ಸೈಂಟ್ ಆ್ಯನ್ಸ್ ಕಾನ್ವೆಂಟಿನ ಧರ್ಮಭಗಿನಿಯರು, ಚರ್ಚಿನ ಭಕ್ತವೃಂದ ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























