ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 47

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 47

0Shares

ಜಗತ್ತು ನಂಬಿದ ಸತ್ಯಕ್ಕಿಂತ… ನಿಜವಾದ ಸತ್ಯ ಅತ್ಯಂತ ಕಠೋರವಾಗಿರುತ್ತದೆ😭😭

ಸಣ್ಣಕತೆ: ಡಾ. ಶಶಿಕಿರಣ್ ಶೆಟ್ಟಿ
ಹೋಂ ಡಾಕ್ಟರ್ ಫೌಂಡೇಶನ್
ಉಡುಪಿ

9945130630(whatsup)

🟥🟩🟦🌹🟥🟩🟦
ಅಂದು ಸ್ವರ್ಗ ಆಶ್ರಮದ ಕಛೇರಿಯಲ್ಲಿ ಫೈಲ್ ನೋಡುತ್ತಿದ್ದರು ಆಶ್ರಮದ ವೈದ್ಯರು. ಯಾರೋ ಬಂದು ನಿಂತಂತಾಗಿತ್ತು, ತಲೆಯೆತ್ತಿ ನೋಡಿದರೆ ಮೊನ್ನೆ ಆಶ್ರಮಕ್ಕೆ ಬಂದಿದ್ದ ಸುಮಾರು 80 ವರ್ಷದ ಪುರಂದರ ಕಾಮತ್ (ಹೆಸರು ಬದಲಿಸಿದೆ) ಅಲ್ಲಿದ್ದರು.
ಅವರ ನಿಲ್ಲುವಿಕೆಯ ಭಂಗಿ ನೋಡಿದರೆ ತರಗತಿಯಲ್ಲಿ ಮಕ್ಕಳು ಅಧ್ಯಾಪಕರ ಎದುರು ನಿಲ್ಲುವಂತಿತ್ತು. ಏನೋ ಹೇಳಬೇಕಿತ್ತು ಅವರಿಗೆ. ಏನ್ಸಾರ್, ಏನಾಗ್ಬೇಕಿತ್ತು? ನಗುತ್ತಾ ಕೇಳಿದರು ವೈದ್ಯರು.

“ಸರ್…” ಎಂದರು ವೃದ್ಧರು ಕೈ ಮುಗಿಯುತ್ತಾ… ” ಕೈ ಮುಗಿಯಬೇಡಿ, ಕೈ ಮುಗಿಯಬೇಕಾದ್ದು ದೇವರಿಗೆ ಮಾತ್ರ” ಈ ಬಾರಿ ಜೋರಾಗಿ ಗದರಿದರು ವೈದ್ಯರು. ತಕ್ಷಣ ಕೈ ಕೆಳಗಿಳಿಸಿದವರೇ ಹೀಗೆ ಹೇಳಿದರು.
“ಸರ್ ನಾನು ಇಲ್ಲೇ ಇರುತ್ತೇನೆ, ಮರಳಿ ಮನೆಗೆ ಕಳಿಸಬೇಡಿ 😢.” ಮತ್ತೆ ಕೈ ಮುಗಿದರು, ಈ ಬಾರಿ ಅವರ ಕಣ್ಣುಗಳು ಮಂಜಾಗಿದ್ದವು.
ಅವರನ್ನು ಅಲ್ಲೇ ಕೂರಿಸಿದರು ವೈದ್ಯರು.
“ಮೊನ್ನೆ ಮಗ ಬಿಡುವಾಗ ಇಲ್ಲಿ ಬರಲು ಕೇಳಿಲ್ಲ ನೀವು. ಒಂದೇ ವಾರ ಎಂದಾಗ ಓಕೆ ಎಂದಿದ್ದೀರಿ ನೆನಪಿದೆಯೇ?” ನೆನಪಿಸಿದರು ವೈದ್ಯರು.
“ಒಂದು ವಾರಕ್ಕೆ ಮಗ ಬರುತ್ತಾನೆ ಹೋದರಾಯಿತು. ಇದು ಆಶ್ರಮ ಅದು ನಿಮ್ಮ ಮನೆ” ಕೊನೆಯ ಪದ ಸ್ವಲ್ಪ ಜೋರಾಗಿ ಹೇಳಿದ್ದರು ವೈದ್ಯರು.
ವೃದ್ಧರ ಕಣ್ಣುಗಳಿಂದ ಹನಿಯೊಂದು ಸುಕ್ಕುಗಟ್ಟಿದ ಕೆನ್ನೆ ದಾಟಿ ಟೇಬಲ್ ಮೇಲೆ ಬಿತ್ತು. ಒಂದು ಕರಾಳ ಕತೆಯೊಂದು ಅನಾವರಣಗೊಳ್ಳುವುದರಲ್ಲಿತ್ತು.

“ಸರ್… ಇಲ್ಲಿ ನನಗೆ ಒಳ್ಳೆಯದಾಗುತ್ತಿದೆ. ಒಳ್ಳೆ ಊಟ, ಒಳ್ಳೆ ನಿದ್ದೆ, ಒಳ್ಳೆ ಪರಿಸರ, ಮನಸ್ಸಿಗೆ ನೆಮ್ಮದಿ, ಸಮಾಧಾನ. ನಾನು ಇಲ್ಲೇ ಇರುತ್ತೇನೆ ಸರ್” ಎಂದರು ವೃದ್ಧರು. “ಅಲ್ಲ ಮೊನ್ನೆ ಮಗನೊಂದಿಗೆ ಬರುವಾಗ 1 ವಾರ ಅಂದಿದ್ರಿ ಅಲ್ವಾ?” ಮತ್ತೆ ನೆನಪಿಸಿದರು ವೈದ್ಯರು. ಈ ಬಾರಿ ವೃದ್ಧರ ಮುಖ ಬಾಡಿತ್ತು. “ಹೌದು ಸರ್ ಹೇಳಿದ್ದೆ. ಅಂದು ಇದು ಅಪರಿಚಿತ ಸ್ಥಳವಾಗಿತ್ತು. ಆದರೆ ಈಗ ಗೊತ್ತಾಗಿದೆ ಇದು ಆಶ್ರಮ ಅಲ್ಲ, ದೇವಮಂದಿರ ಎಂದು. ನಮ್ಮಂತಹ ಅಸಹಾಯಕರ ಪಾಲಿಗೆ ಇದು ಎಲ್ಲವೂ ಸರ್. ಇದನ್ನು ಬಿಟ್ಟು ಮನೆಗೆ ಹೇಗೆ ಹೋಗಲಿ? ಅಲ್ಲಿ ದಿನ ಬೆಳಗಾದರೆ ಕೆಟ್ಟಕೆಟ್ಟ ಪದಗಳ ಬೈಗುಳ, ಊಟಕ್ಕೂ ನಿನ್ನೆಯ ಅನ್ನ ಹಾಕುವ, ಮನೆಯ ನಾಯಿಗಿಂತ ಕಡೆ ಮಾಡುವ ಸೊಸೆ ಇದ್ದಾಳೆ. ಮಗ ಕೂಡ ಮಾತಾಡಲು ಹೆದರುತ್ತಾನೆ.” ಎಂದವರೇ ಅಂಗಿ ಬಿಚ್ಚಿ ಬೆನ್ನು ತೋರಿಸುತ್ತಾರೆ. ಒಂದು ಕ್ಷಣ ದಂಗಾದರು ವೈದ್ಯರು.
ಹತ್ತಾರು ಗಾಯದ ಕಲೆಗಳಿದ್ದವು ಅಲ್ಲಿ. ಇದು ಕಟ್ಟಿಗೆಯಲ್ಲಿ ಸೊಸೆ ಹೊಡೆದದ್ದು ಎನ್ನುವಾಗ ಅವರ ಕಣ್ಣುಗಳು ಮತ್ತೆಮತ್ತೆ ಒದ್ದೆಯಾಗಿದ್ದವು.
ಅಷ್ಟರಲ್ಲಿ ವೃದ್ಧರ ಮಗನ ಕಾಲ್ ಇತ್ತು, “ಅಪ್ಪ ಹೇಗಿದ್ದಾರೆ?” ಎಂದರು. “ಅಡ್ಜಸ್ಟ್ ಆಗಿದ್ದಾರೆ ಇಲ್ಲೇ ಇರುತ್ತಾರಂತೆ” ಎಂದರು ವೈದ್ಯರು… ಮಗನಿಗೂ ಸಮಾಧಾನವಿತ್ತು. ಎದುರಲ್ಲಿ ಅಪ್ಪ ಕೈ ಮುಗಿದು ನಿಂತಿದ್ದರು. ಅವರ ಕಣ್ಣೆರಡೂ ಒದ್ದೆಯಾಗಿದ್ದವು. ವೈದ್ಯರು ಕೇಳಿದರು ಯಾಕೆ ಏನಾಯ್ತು ಎಂದು. “ಹಾ 5 ವರ್ಷ ಮುಂಚೆ ಈ ಆಶ್ರಮ ಮಾಡಬಾರದಿತ್ತೆ?” ಎಂದು ಕೇಳಿದರು ವೃದ್ಧರು. “ಹೌದು ಇಂತಹದೊಂದು ಉಚಿತ ಆಶ್ರಮ ಮಾಡುವುದು ಅಷ್ಟೊಂದು ಸುಲಭವಾದ ಕೆಲಸವಲ್ಲ. ಕಳೆದ 7 ವರ್ಷಗಳಿಂದ ಪ್ರಯತ್ನಿಸುತ್ತಲೇ ಇದ್ದೆವು. ಈಗ ಕೈಗೊಡಿದೆ ಎಂದರು ವೈದ್ಯರು. “5 ವರ್ಷದ ಕೆಳಗೆ ಇದ್ದಿದ್ದರೆ ನನ್ನ ಹೆಂಡತಿ ಉಳಿಯುತ್ತಿದ್ದಳು ಸರ್” ಎಂದರು ಅಜ್ಜ ಕಣ್ಣೀರು ಒರೆಸುತ್ತ. ವೈದ್ಯರ ಕಣ್ಣೂ ಮಂಜಾಗಿದ್ದವು. “ನಿಮ್ಮ ಹೆಂಡತಿ ಹೇಗೆ ಸತ್ತರು ಸರ್? ಎಂದರು ವೈದ್ಯರು. ಕಣ್ಣೀರು ಒರೆಸಿಕೊಳ್ಳುತ್ತಾ ಹೇಳಿದರು “ಬಾವಿಗೆ ಬಿದ್ದು ಸತ್ತಳು ಎಂದು ಜಗತ್ತು ನಂಬಿದೆ ಸರ್. ಜಗತ್ತಿಗೆ ತಿಳಿಯದ್ದು ಬಹಳಷ್ಟಿದೆ….” ಎನ್ನುತ್ತಾ ಒಳಗೆ ಹೋದರು.
ಕೆಲವು ಸತ್ಯಗಳನ್ನು ಅರ್ಧ ಸತ್ಯವಾಗಿಸಿ ಅಲ್ಲಿಂದ ಮರೆಯಾಗಿದ್ದರು ಅವರು.

ಅದೆಷ್ಟು ಸತ್ಯ ನೋಡಿ ಇಂತಹ ಅಸಹಾಯಕರ ಅರಮನೆ ಪ್ರತಿ ಊರಲ್ಲೂ ಒಂದೊಂದು ಇದ್ದಿದ್ದರೆ ಅದೆಷ್ಟೋ ಹಿರಿಯರು ಬಾವಿಗೆ ಬಿದ್ದು ಸತ್ತರು, ರೈಲ್ವೆ ಟ್ರ್ಯಾಕ್ ಮೇಲೆ ಸತ್ತರು, ನೇಣು ಬಿಗಿದುಕೊಂಡು ಸತ್ತರು ಎನ್ನುವ ಸ್ಟೇಟ್ಮೆಂಟ್ ಗಳು ಪೇಪರ್ ಗಳಲ್ಲಿ ಓದುವುದು ನಿಲ್ಲಬಹುದೇನೋ. ಯಾಕೆಂದರೆ ಎಷ್ಟೋ ಕಡೆ

ಜಗತ್ತು ನಂಬಿದ ಸತ್ಯಕ್ಕಿಂತ,ನಿಜವಾದ ಸತ್ಯ ಅತ್ಯಂತ ಕಠೋರವಾಗಿರುತ್ತದೆ.
🟩🟦🟥🌹🟥🟩🟦
ಇಂತಹ ಮೌಲ್ಯಯುಕ್ತ ಕತೆಗಳ ಸಂಗ್ರಹ ಪುಸ್ತಕ ಬದುಕ ಬದಲಿಸುವ ಕತೆಗಳು ಪ್ರತಿಗಳಿಗಾಗಿ ನನ್ನನ್ನು(9945130630)ಸಂಪರ್ಕಿಸಿ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now