ಚಪ್ಪಲಿ ನಗುತಿತ್ತು…..

ಆತ ದೇವಸ್ಥಾನದ ಚಪ್ಪಲಿ ಸ್ಟಾಂಡ್ ನಲ್ಲಿ ಒಂದು ಜೊತೆ ಚಪ್ಪಲಿಗೆ 2 ರೂ ತೆಗೆದುಕೊಳ್ಳುವ ಕೆಲಸ ಮಾಡುತಿದ್ದರು. ಕಳೆದ 20 ವರ್ಷಗಳಿಂದ ಅದೇ ಕೆಲಸ. ದಿನಕ್ಕೆ ನೂರಾರು ಚಪ್ಪಲಿಗಳನ್ನು ಮುಟ್ಟಿದ್ದರೂ ತಮ್ಮ 55 ನೆಯ ವಯಸ್ಸಿನಲ್ಲೂ ಭಕ್ತಿಯಿಂದ ಅದೇ ಕೆಲಸ ಮಾಡುತಿದ್ದರು. ಯಾಕೆಂದರೆ ಅದೇ ಅವರ ಪಾಲಿಗೆ ಬದುಕು ಹಾಗು ಅನ್ನ ನೀಡುವ ಕಾಯಕವಾಗಿತ್ತು.
ಮನೆಯಲ್ಲಿ ಮಗಳು ದೊಡ್ಡ ಕಂಪೆನಿಯೊಂದರಲ್ಲಿ ಚಿಕ್ಕ ಕೆಲಸ ಮಾಡಿಕೊಂಡಿದ್ದಳು. ಇವರಿಗೆ ಮಗಳ ಮದುವೆಯ ಚಿಂತೆಯಿತ್ತು. ಬ್ರಾಹ್ಮಣನಾಗಿ ಚಪ್ಪಲಿ ಸ್ಟಾಂಡ್ ನಲ್ಲಿರುವ ವ್ಯಕ್ತಿಯ ಮಗಳನ್ನು ಯಾರು ತಂದುಕೊಳ್ಳುತ್ತಾರೆ ಎನ್ನುವ ಭಯವಿತ್ತು ಅವರಲ್ಲಿ. ಆದರೆ ಇಷ್ಟು ಸಮಯ ಊಟ ಕೊಟ್ಟ ಈ ಉದ್ಯೋಗವನ್ನು ಬಿಡಲು ಮನಸ್ಸಿರಲಿಲ್ಲ. ಈಗ ಕೂಡಾ ಅದೇ ಉದ್ಯೋಗ ಅವರಿಗೆ, ಅವರ ಕುಟುಂಬಕ್ಕೆ ಅನ್ನ ಕೊಡುತ್ತಿತ್ತು. ದಿನ ನಿತ್ಯ ದೇವರಿಗೆ ಕೈ ಮುಗಿದು ಅತ್ಯಂತ ಶ್ರದ್ಧೆಯಿಂದ ತಮ್ಮ ಕಾಯಕ ಮಾಡುತಿದ್ದರು ಅವರು.
ಆದರೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮಗಳ ಚಿಂತೆ ಕಾಡುತಿತ್ತು ಅವರಿಗೆ. ಅಂದು ದೇವಸ್ಥಾನದಲ್ಲಿ ದೇವರಿಗೆ ಬಂಗಾರದ ಕಿರೀಟ ಕೊಟ್ಟ ಮಹಾದಾನಿಯೊಬ್ಬರಿಗೆ ಸನ್ಮಾನ ಮಾಡುವ ಕಾರ್ಯಕ್ರಮವಿತ್ತು. ದೊಡ್ಡ ಕಂಪೆನಿಯ ಆ ಮಹಾನುಭಾವ ಬಂದಿದ್ದ. ಸ್ಟಾಂಡ್ ನಲ್ಲಿಡಲು ಚಪ್ಪಲಿಯನ್ನು ತೆಗೆದ. ಅವನ ಚೇಲಗಳು ಹೇಳಿದರು “ಏನೋ ಮುದುಕ ಮುಖ ನೋಡ್ತೀಯ? ಕಾಲ ಕೆಳಗೆ ಇರುವ ಚಪ್ಪಲಿ ತೆಗೆದುಕೋ, ಸಾರ್ ನಿನಗೆ ಟಿಪ್ಸ್ ಕೊಡಬಹುದು” ಎಂದು ಜೋರಾಗಿ ವ್ಯಂಗ್ಯ ನಗೆ ಬೀರಿದ್ದರು. “ಸರ್ ಚಪ್ಪಲಿ ತೆಗೆದು ಟೇಬಲ್ ಮೇಲೆ ಇಡಿ” ಎಂದರು ಅವರು. ಅಷ್ಟಕ್ಕೇ ಆ ಮಹಾದಾನಿಯ ಕಣ್ಣು ಕೆಂಪಾಗಿತ್ತು.
ಒಬ್ಬ ಸಾಮಾನ್ಯ ಚಪ್ಪಲಿ ಕಾಯುವವ ಮಾತಾಡಿದ್ದು ಅವನ ಅಹಂಕಾರಕ್ಕೆ ಪೆಟ್ಟು ಕೊಟ್ಟಿತ್ತು. ತಾನು ದುಡ್ಡಿನವ ಈತ ಚಪ್ಪಲಿ ಕಾಯುವವ ಎನ್ನುವ ಅಹಂಕಾರವಿತ್ತು.
ಆತನ ಚೇಲ ವೃದ್ಧರನ್ನು ದರದರನೆ ಹೊರಗೆ ಎಳೆತಂದು ಮಹಾದಾನಿಯ ಕಾಲಿನ ಕೆಳಗೆ ಬೀಳಿಸಿದ್ದ. ಬೇರೆ ದಾರಿ ಇಲ್ಲದೇ ಚಪ್ಪಲಿ ತೆಗೆದರು ವೃದ್ಧರು. ಕೆಕ್ಕರಿಸಿ ನೋಡಿದ ಮಹಾದಾನಿ ಹಣವನ್ನೂ ಕೊಡದೆ ಮುಂದೆ ಹೋದರು. ಆ ಕ್ಷಣ ತನ್ನ ನೋಡಿ ಚಪ್ಪಲಿ ನಕ್ಕಂತೆ ಬಾಸವಾಗಿತ್ತು ಅವರಿಗೆ. ಕಣ್ಣೀರು ಪಟಪಟನೆ ಕೆನ್ನೆಯಿಂದ ಜಾರಿ ನೆಲಕ್ಕೆ ಬಿದ್ದಿದ್ದವು.
ಮಹಾದಾನಿಗೆ ಅದ್ಭುತ ಸನ್ಮಾನ ನಡೆಯುತ್ತಿತ್ತು. ತಳ್ಳಾಟದಲ್ಲಿ ವೃದ್ಧರು ತಮ್ಮ ಮಣಿಗಂಟಲ್ಲಿ ಆದ ಗಾಯವನ್ನು ಒರೆಸಿ ಕೊಳ್ಳುತ್ತಿದ್ದರು.
ಮನೆಗೆ ಹೋದರೆ ಅಲ್ಲೊಂದು ಆಶ್ಚರ್ಯ ಕಾದಿತ್ತು. ಮನೆಯ ಎದುರು ದುಬಾರಿ ಕಾರೊಂದು ನಿಂತಿತ್ತು. ವ್ಯಕ್ತಿಯೊಬ್ಬರು ತಮ್ಮ ಮಗನಿಗೆ ಇವರ ಮಗಳ ಸಂಬಂಧ ಕೇಳಲು ಬಂದಿದ್ದರು. ತಮ್ಮದು ದೊಡ್ಡ ಮನೆತನ ಹಾಗೂ ದೊಡ್ಡ ಕಂಪೆನಿ ಮಾಲಿಕ ನಿಮ್ಮ ಅಳಿಯನಾಗುವವರು. ನಮ್ಮ ಬ್ರಾಹ್ಮಣರಲ್ಲಿ ಹುಡುಗಿಯರು ವಿರಳ. ನಿಮ್ಮ ಮಗಳನ್ನು ನನ್ನ ಮಗ ಇಷ್ಟಪಟ್ಟಿದ್ದಾನೆ. ನಿಮ್ಮ ಮಗಳು ಕೆಲಸ ಮಾಡುವ ಕಂಪೆನಿ ನಮ್ಮದೇ ಎಂದರು. ಇನ್ನು ನಿಮ್ಮ ಮಗಳು ನನ್ನ ಮಗಳು ಕೂಡಾ ಎಂದು ಹೇಳಿದಾಗ ವೃದ್ಧರ ಕಣ್ಣುಗಳು ಮಂಜಾದವು.
ಜಾತಕವೂ ಹೊಂದಾಣಿಕೆಯಾಗಿತ್ತು. ಅಂದು ಇವರ ಮನೆ ಎದುರು ಕಾರೊಂದು ಬಂದು ನಿಂತಿತು. ಆಶ್ಚರ್ಯದಿಂದ ನೋಡಿದರೆ ಅಂದು ದೇವಸ್ಥಾನದಲ್ಲಿ ಅವಮಾನ ಮಾಡಿದ ಅದೇ ವ್ಯಕ್ತಿ! ಓಡೋಡಿ ಬಂದು ವೃದ್ಧರ ಕಾಲಿಗೆ ಬಿದ್ದಿದ್ದ.
ಮತ್ತೆ ನೋಡಿದರೆ ತನ್ನ ಅಳಿಯನ ಕಂಪೆನಿಯಲ್ಲಿ ಈತ ಒಬ್ಬ ಮ್ಯಾನೇಜರಾಗಿದ್ದ. ಅಳಿಯ ದಾನ ಮಾಡಿ ದೇವಸ್ಥಾನದವರ ಒತ್ತಾಯಕ್ಕೆ ಮಣಿದು ಮ್ಯಾನೇಜರನ್ನು ಅಲ್ಲಿಗೆ ಕಳಿಸಿದ್ದ. ಗುಟ್ಟಾಗಿ ದಾನ ಮಾಡುವ ವ್ಯಕ್ತಿ ಅವನಾಗಿದ್ದ. ಅಷ್ಟರಲ್ಲಿ ಆತ ಇವರ ಚಪ್ಪಲಿ ಕೆಳಗೆ ಇದ್ದ. “ಸರ್ ನನ್ನನ್ನು ಕ್ಷಮಿಸಿ ಬಿಡಿ, ಮೊನ್ನೆ ನಡೆದ ವಿಷಯ ಬಾಸ್ ಬಳಿ ಹೇಳಬೇಡಿ. ನನ್ನ ಕೆಲಸ ಹೋಗುತ್ತದೆ. ನಾನು ರಸ್ತೆಗೆ ಬರುತ್ತೇನೆ” ಎಂದು ಗೋಳಿಟ್ಟ. ಅವನನ್ನು ಮೇಲೆತ್ತಿ ಹೀಗೆ ಹೇಳಿದರು “ಅಯ್ಯ ನೆನಪಿರಲಿ ಅಹಂಕಾರ ಯಾರ ಅಪ್ಪನ ಸ್ವತ್ತೂ ಅಲ್ಲ. ಹಾಗೇ ಅಧಿಕಾರ ಹಣ, ಆಸ್ತಿ, ಶ್ರೀಮಂತ, ಬಡವ ಎಲ್ಲವೂ ತಾತ್ಕಾಲಿಕ. ಭಗವಂತ ಮನಸ್ಸು ಮಾಡಿದರೆ 1 ನಿಮಿಷ ಸಾಕು. ಕೋಟ್ಯಾಧಿಪತಿಯನ್ನು ಭಿಕ್ಷುಕನನ್ನಾಗಿಸಲು. ನೆನಪಿರಲಿ ನಾಯಿ ಕಚ್ಚಿತೆಂದು ನಾಯಿಯಿಂದ ಸ್ವಲ್ಪ ದೂರ ಸರಿಯುತ್ತೇನೆಯೇ ಹೊರತು ಮರಳಿ ನಾಯಿಗೆ ಕಚ್ಚುವ ಜಾತಿಗೆ ಸೇರಿದವನು ನಾನಲ್ಲ” ಎಂದು ಹಿಂದೆ ಸರಿದರು. ಚಪ್ಪಲಿ ಮಾತ್ರ ಈಗಲೂ ನಗುತ್ತಿರುವಂತೆ ಕಾಣುತಿತ್ತು.
ಅದೆಷ್ಟು ಸತ್ಯ ನೋಡಿ. ಅದನ್ನೇ ಅಂದು ಭಗವಂತ ಹೇಳಿದ್ದು “ನೀನೇನು ಮಾಡಿದ್ದರೂ ಇಲ್ಲಿಂದಲೇ ಮಾಡಿರುವೆ. ಇಂದು ನಿನ್ನದಾಗಿದ್ದು ನಾಳೆ ಇನ್ಯಾರದ್ದೋ ಆಗಲಿದೆ” ಇದಿಷ್ಟು ಅರಿತರೆ ಸಾಕಲ್ಲವೇ. ಹಣದ ಮದದಲ್ಲಿ ತೇಲುವ ಆತ್ಮಗಳಿಗೊಂದು ಶ್ರದ್ಧಾಂಜಲಿ ಸಲ್ಲಿಸಲು🙏🙏.
🟩🟥🟦🌹🟩🟥🟦
ಇಂತಹ ಮೌಲ್ಯಯುಕ್ತ ಕತೆಗಳ ಸಂಗ್ರಹ ಪುಸ್ತಕ ಬದುಕ ಬದಲಿಸುವ ಕತೆಗಳು.. ಪ್ರತಿಗಳಿಗಾಗಿ ನನ್ನನ್ನು(9945130630)ಸಂಪರ್ಕಿಸಿ.
ನಿಮ್ಮ ಅನಿಸಿಕೆ ನನಗೆ ವಾಟ್ಸಪ್ ಮಾಡಿ ತಿಳಿಸಿ ..

9945130630 (ವಾಟ್ಸಪ್)
ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ
ಉಡುಪಿ,ಹೋಂ ಡಾಕ್ಟರ್ ಫೌಂಡೇಶನ್
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























