
ಮಂಗಳೂರು: ಮೂಲತಃ ಉಡುಪಿ ಜಿಲ್ಲೆಯ ಶಿರ್ವದವರಾದ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಹಿರಿಯ ವೈದ್ಯೆ ಡಾ. ಜೆಸಿಂತಾ ಡಿಸೋಜಾ ಅವರು ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿಯಾಗಿ (Joint Director) ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದಾರೆ.
ಅವರ ಸುದೀರ್ಘ 35 ವರ್ಷಗಳ ಸೇವೆಯನ್ನು ಗುರುತಿಸಿ, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಬಿಷಪ್ ನಿವಾಸದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನ ಮಾಡಿದರು.
ಶೈಕ್ಷಣಿಕ ಹಿನ್ನೆಲೆ:
ಡಾ. ಜೆಸಿಂತಾ ಡಿಸೋಜಾ ಅವರು ಉನ್ನತ ಮಟ್ಟದ ಶೈಕ್ಷಣಿಕ ಸಾಧನೆ ಮಾಡಿದ್ದು, ಅವರ ವಿದ್ಯಾಭ್ಯಾಸದ ವಿವರಗಳು ಹೀಗಿವೆ:
ಪ್ರಾಥಮಿಕ ಶಿಕ್ಷಣ: ಉಡುಪಿ ಜಿಲ್ಲೆಯ ಶಿರ್ವದ ಡಾನ್ ಬಾಸ್ಕೋ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದರು.
ಪ್ರೌಢಶಾಲೆ ಮತ್ತು ಪಿಯುಸಿ: ಶಿರ್ವದ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲೆ ಮತ್ತು ಪಿಯುಸಿ ಶಿಕ್ಷಣವನ್ನು ಪೂರೈಸಿದರು.
ವೈದ್ಯಕೀಯ ಪದವಿ (MBBS): 1984 ರಲ್ಲಿ ಮೈಸೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸೇರ್ಪಡೆಗೊಂಡು ಎಂಬಿಬಿಎಸ್ ಪದವಿ ಪಡೆದರು.
ಸ್ನಾತಕೋತ್ತರ ಡಿಪ್ಲೊಮಾ (DA): 1992-94ರ ಅವಧಿಯಲ್ಲಿ ಮೈಸೂರು ವೈದ್ಯಕೀಯ ಕಾಲೇಜಿನಿಂದ ಅರಿವಳಿಕೆ ಶಾಸ್ತ್ರದಲ್ಲಿ (Anaesthesiology) ಪಿಜಿ ಡಿಪ್ಲೊಮಾ ಪೂರೈಸಿದರು.
ಸ್ನಾತಕೋತ್ತರ ಪದವಿ (MD): 2003 ರಲ್ಲಿ ಮಂಗಳೂರಿನ ಕೆಎಂಸಿ (KMC) ಕಾಲೇಜಿನಿಂದ ಅರಿವಳಿಕೆ ಶಾಸ್ತ್ರದಲ್ಲಿ ಎಂಡಿ ಪದವಿ ಪಡೆದರು.
ಡಿಎನ್ಬಿ (DNB): 2004 ರಲ್ಲಿ ನವದೆಹಲಿಯ ನ್ಯಾಷನಲ್ ಬೋರ್ಡ್ ಆಫ್ ಎಜುಕೇಶನ್ನಿಂದ (NBE) ಅರಿವಳಿಕೆ ಶಾಸ್ತ್ರದಲ್ಲಿ ಡಿಎನ್ಬಿ ಗೌರವಕ್ಕೆ ಪಾತ್ರರಾದರು.
ಮಂಗಳೂರಿನ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ (KPT) ಕಾಲೇಜಿನಿಂದ ಕಂಪ್ಯೂಟರ್ ಅಪ್ಲಿಕೇಶನ್ನಲ್ಲಿ 6 ತಿಂಗಳ ಡಿಪ್ಲೊಮಾ ಪದವಿ ಪಡೆದಿದ್ದಾರೆ.
ವೃತ್ತಿ ಜೀವನದ ಹಾದಿ:
ಡಾ. ಜೆಸಿಂತಾ ಅವರು 1991ರಲ್ಲಿ ಕೆಪಿಎಸ್ಸಿ (KPSC) ಮೂಲಕ ಆಯ್ಕೆಯಾಗಿ ಉಪ್ಪಿನಂಗಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮೀಣ ಸೇವೆಯನ್ನು ಆರಂಭಿಸಿದ್ದರು.
ನಂತರದ ದಿನಗಳಲ್ಲಿ
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ 8 ವರ್ಷಗಳ ಕಾಲ ಅರಿವಳಿಕೆ ತಜ್ಞರಾಗಿ ಸೇವೆ (ಅಲ್ಲಿನ ಅರಿವಳಿಕೆ ವಿಭಾಗದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ).
ಲೇಡಿಗೋಷನ್ ಆಸ್ಪತ್ರೆಯಲ್ಲಿ 12 ವರ್ಷಗಳ ಸೇವೆ
ವೆನ್ಲಾಕ್ ಆಸ್ಪತ್ರೆಯಲ್ಲಿ 10 ವರ್ಷಗಳ ಕಾಲ ವಿವಿಧ ವಿಭಾಗಗಳಲ್ಲಿ ಅರಿವಳಿಕೆ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ.
ನಿರ್ವಹಿಸಿದ ಪ್ರಮುಖ ಜವಾಬ್ದಾರಿಗಳು:
ಅವರು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿಯಾಗಿ (District Surgeon), ಜಿಲ್ಲಾ ವೆಕ್ಟರ್ ಬೋರ್ನ್ ಡಿಸೀಸ್ ಕಂಟ್ರೋಲ್ ಅಧಿಕಾರಿಯಾಗಿ ಮತ್ತು ಲೇಡಿಗೋಷನ್ ಆಸ್ಪತ್ರೆಯ ಆ ಎಂ ಒ (RMO) ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ವಿಶೇಷವಾಗಿ 2010ರ ಬಜ್ಪೆ ವಿಮಾನ ದುರಂತದ ಸಂದರ್ಭದಲ್ಲಿ ನೋಡಲ್ ಅಧಿಕಾರಿಯಾಗಿ ದುರಂತಕ್ಕೀಡಾದವರ ಕುಟುಂಬಗಳಿಗೆ ಸಾಂತ್ವನ ನೀಡುವಲ್ಲಿ ಮತ್ತು ಡಿಎನ್ಎ (DNA) ಪರೀಕ್ಷೆಯ ಸಮನ್ವಯತೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲೂ ಅವರ ಸೇವೆ ಅನನ್ಯವಾದುದು.
ಶೈಕ್ಷಣಿಕ ಹಿನ್ನೆಲೆ ಮತ್ತು ಕುಟುಂಬ:
ಮೈಸೂರು ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾದ ಇವರು, ಕೆಎಂಸಿ ಮಂಗಳೂರಿನಲ್ಲಿ ಎಂಡಿ (MD) ಪದವಿ ಪಡೆದಿದ್ದಾರೆ. ಶಿರ್ವದ ದಿವಂಗತ ಮೊಂತು ಗ್ರೆಗೊರಿ ಡಿಸೋಜಾ ಮತ್ತು ಮೇರಿ ಡಿಸೋಜಾ ಅವರ ಪುತ್ರಿಯಾದ ಇವರಿಗೆ ಪತಿ ಡಾ. ವಾಲ್ಟರ್ ಡಿಸೋಜಾ (ಮಂಗಳೂರು ಸರ್ಕಾರಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು) ಮತ್ತು ಒಬ್ಬ ಪುತ್ರ (ನೇತ್ರ ತಜ್ಞರು) ಇದ್ದಾರೆ.
ವೈದ್ಯಕೀಯ ಕ್ಷೇತ್ರದ ಜೊತೆಗೆ ಇವರು ಸಾಹಿತ್ಯದಲ್ಲೂ ಆಸಕ್ತಿ ಹೊಂದಿದ್ದು, ‘ಸಿರಿಂಜ್ ಹಿಡಿದ ಕೈ ಪೆನ್ನು ಹಿಡಿದಾಗ’ ಪುಸ್ತಕದಲ್ಲಿ ಇವರ ಲೇಖನ ಪ್ರಕಟವಾಗಿದೆ.
ನಮ್ಮ ವರದಿಗಾರರು

ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now