ಅಪರಾಧ ತಡೆ ಮಾಸಾಚರಣೆ 2025

ಅಪರಾಧ ತಡೆ ಮಾಸಾಚರಣೆ 2025

0Shares

ಶಿರ್ವ: ಉಡುಪಿ ಜಿಲ್ಲಾ ಪೋಲಿಸ್ ಇಲಾಖೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಶಿರ್ವದ ಸೈಂಟ್ ಮೇರಿ ಪಿಯು ಕಾಲೇಜಿನ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಯಶಂಕರ್, ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಸ್ಪಂದಿಸಿದರು. ಉಡುಪಿ ಜಿಲ್ಲಾ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಿರ್ವ ಪೋಲಿಸ್ ಠಾಣೆಯ ಉಪನಿರೀಕ್ಷಕ ಮಂಜುನಾಥ ಮರಬದ ರವರು ಹಾಜರಿದ್ದು, ಕಳ್ಳತನ, ಸೈಬರ್ ಅಪರಾಧದ ಕುರಿತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್‌ನೆಟ್ ಮತ್ತು ತಂತ್ರಜ್ಞಾನವು ಮಾನವ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಇದರೊಂದಿಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಸೈಬರ್ ಅಪರಾಧ ಎಂದರೆ ಕಂಪ್ಯೂಟರ್, ಮೊಬೈಲ್, ಇಂಟರ್‌ನೆಟ್ ಮೂಲಕ ನಡೆಯುವ ಅಕ್ರಮ ಚಟುವಟಿಕೆಗಳು. ಸೈಬರ್ ಅಪರಾಧದ ಕುರಿತು ಅರಿವು ಹೊಂದಿರುವುದು ಬಹಳ ಮಹತ್ವದ್ದಾಗಿದೆ. ಬ್ಯಾಂಕ್ ವಂಚನೆ, ಆನ್‌ಲೈನ್ ಮೋಸ, ಗುರುತು ಕಳವು, ಹ್ಯಾಕಿಂಗ್, ಸಾಮಾಜಿಕ ಜಾಲತಾಣ ದುರುಪಯೋಗ ಮುಂತಾದ ಅಪಾಯಗಳಿಂದ ನಮ್ಮನ್ನು ಕಾಪಾಡಿಕೊಳ್ಳಲು ಜಾಗ್ರತಿ ಅಗತ್ಯ. ಸೈಬರ್ ಅಪರಾಧಗಳ ಬಗ್ಗೆ ತಿಳುವಳಿಕೆ ಹೊಂದುವುದರಿಂದ ಮಕ್ಕಳು ಹಾಗೂ ಹಿರಿಯ ನಾಗರಿಕರು ಸುರಕ್ಷಿತವಾಗಿ ಇಂಟರ್‌ನೆಟ್ ಬಳಕೆ ಮಾಡಬಹುದು. ಸರ್ಕಾರ ಹಾಗೂ ಪೋಲಿಸ್ ಇಲಾಖೆಗಳು ಸೈಬರ್ ಅಪರಾಧ ತಡೆಗಾಗಿ ಕಾನೂನುಗಳನ್ನು ಜಾರಿಗೆ ತಂದಿದ್ದು, ಜನರು ಸಹಕಾರ ನೀಡುವುದು ಅತಿ ಮುಖ್ಯ ಎಂದು ಹೇಳಿದರು. ವಿದ್ಯಾರ್ಥಿಗಳು ಜಾಗ್ರತಿ ಪ್ಲೆಕ್ಸ್ ಗಳು ಹಾಗೂ ಪ್ರಕಾರ್ಡುಗಳನ್ನು ಹಿಡಿದು, ಜಾಥಾದಲ್ಲಿ ಭಾಗವಹಿಸಿದರು.
ಇತ್ತೀಚಿನ ದಿನಗಳಲ್ಲಿ ದರೋಡೆ, ಕಳ್ಳತನ ಹೆಚ್ಚುತ್ತಿದ್ದು, ಪ್ರತಿಯೊಬ್ಬರು ತಮ್ಮ ಆಸ್ತಿ, ಒಡವೆಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಲು ಹೇಳಿದರು. ವಾಹನಗಳಿಗೆ ಭದ್ರವಾದ ಬೀಗ, ಸ್ಟೇರಿಂಗ್ ಲಾಕ್, ಕ್ವಾರ್ಟರ್ ಗ್ಲಾಸ್ ಲಾಕ್ ಹಾಕುವ ವ್ಯವಸ್ಥೆಮಾಡಿ, ವಾಹನ ನಿಲುಗಡೆ ಮಾಡಿದಾಗ ಕಿಟಕಿ ಬಾಗಿಲುಗಳನ್ನು ಸರಿಯಾಗಿ ಮುಚ್ಚಿದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ವಾಹನಕ್ಕೆ ಬೀಗ ಹಾಕದೆ ಕ್ಷಣ ಕಾಲವೂ ಬೇರೆ ಕೆಲಸಕ್ಕೆ ಹೋಗಬಾರದು ಎಂದು ಒತ್ತಿ ಹೇಳಿದರು.

ಕಾರ್ಯಕ್ರಮಕ್ಕೆ ಶಿರ್ವ ಠಾಣಾ ಹೆಡ್ ಕಾನ್ಸ್ಟೇಬಲ್ ಶ್ರೀ ಮಂಜುನಾಥ ಅಡಿಗರವರು ಹಾಗೂ ಸೇಂಟ್ ಮೇರಿಸ್ ಕಾಲೇಜಿನ ದೈಹಿಕ ಶಿಕ್ಷಕ ಜೋಸೆಫ್ ಡಿಸೋಜಾರವರು ಹಾಜರಿದ್ದರು. ಕಾರ್ಯಕ್ರಮ ಯಶಸ್ವಿಗೊಳಿಸಲು ಕಾಲೇಜಿನ ಅಧ್ಯಾಪಕ ವ್ರಂದ ಹಾಗೂ ಶಿರ್ವ ಠಾಣಾ ಪೋಲಿಸ್ ಸಿಬ್ಬಂದಿಗಳು ಸಹಕಾರ ನೀಡಿದರು.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now