ತನಗಿಂತ ತನ್ನ ದೇಶಮೊದಲೆಂದು ಬದುಕಿದ ಒನಕೆ ಓಬವ್ವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ: ಕೋಟ ಶ್ರೀನಿವಾಸ್ ಪೂಜಾರಿ

ತನಗಿಂತ ತನ್ನ ದೇಶಮೊದಲೆಂದು ಬದುಕಿದ ಒನಕೆ ಓಬವ್ವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ: ಕೋಟ ಶ್ರೀನಿವಾಸ್ ಪೂಜಾರಿ

0Shares

ಅವರು ಇಂದು ನಗರದ ಮಣಿಪಾಲ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಒನಕೆ ಓಬವ್ವ ಆತ್ಮರಕ್ಷಣೆಯ ಪ್ರತೀಕ. ಹೆಣ್ಣುಮಕ್ಕಳು ತಮ್ಮ ಆತ್ಮ ರಕ್ಷಣೆಯ ಜೊತೆಗೆ ತನ್ನ ಪ್ರಾಂತ್ಯ, ರಾಜ್ಯ ಮತ್ತು ದೇಶಕ್ಕೋಸ್ಕರ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹೋರಾಡುತ್ತಾರೆ ಎನ್ನುವುದಕ್ಕೆ ಒನಕೆ ಓಬವ್ವ ಸಾಕ್ಷಿ. ಚಿತ್ರದುರ್ಗದ ಕಲ್ಲಿನ ಕೋಟೆ ಕಂಡಾಗಲೆಲ್ಲಾ ಓಬವ್ವನ ಸ್ಮರಣೆಯಾಗುತ್ತದೆ. ಆಕೆಯ ತ್ಯಾಗ, ಬಲಿದಾನ ಮತ್ತು ಸಮರ್ಪಣೆಯನ್ನು ಸ್ಮರಿಸುವ ಸಲುವಾಗಿ ಸರ್ಕಾರವು ಒನಕೆ ಓಬವ್ವಳ ಜಯಂತಿಯನ್ನು ಆಚರಿಸಿ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಭಾವವನ್ನು ಬಿತ್ತುತ್ತಿರುವುದು ಸಂತೋಷದ ವಿಚಾರ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಚಿವನಾಗಿದ್ದಾಗ ಹೆಣ್ಣು ಮಕ್ಕಳು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ೮೦೦ ಶಾಲೆಗಳು ಮತ್ತು ೩೫೦೦ ಹಾಸ್ಟೆಲ್ ಗಳಲ್ಲಿ ಕರಾಟೆ ಕಲಿಸಲು ಮುಂದಾದಾಗ ಅದಕ್ಕೆ ಯಾವ ಹೆಸರಿಡುವುದು ಎನ್ನುವ ಚರ್ಚೆ ನಡೆದಾಗ ಎಲ್ಲರ ಅಭಿಮತವೂ ಒನಕೆ ಓಬವ್ವನ ಹೆಸರಿಡುವುದು ಸೂಕ್ತ ಎಂದಾಗಿತ್ತು. ವಿದ್ಯಾರ್ಥಿನಿಯರ ಆತ್ಮರಕ್ಷಣಾ ಕಲಿಕೆಗೆ ಸರ್ವಾನುಮತದಿಂದ ಒನಕೆ ಓಬವ್ವನ ಹೆಸರನ್ನು ಇಟ್ಟು ಆಕೆಯ ಹೆಸರನ್ನು ಚಿರಸ್ಥಾಯಿಯಾಗಿಸುವ ಪ್ರಯತ್ನ ಮಾಡಿದ್ದೆ. ಜಾತಿ, ಮತ, ನಾನು-ನನ್ನದು ಎನ್ನುವುದಕ್ಕಿಂತ ಭಾರತ ಮೊದಲು ಎನ್ನುವ ಭಾವನೆ ವಿದ್ಯಾರ್ಥಿಗಳಲ್ಲಿ ಮೊಳೆಯಬೇಕು ಅದಕ್ಕೆ ಒನಕೆ ಓಬವ್ವ ಜಯಂತಿ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಕುತಂತ್ರದಿಂದ ಚಿತ್ರದುರ್ಗದ ಕೋಟೆಗೆ ಒಳನುಸುಳಿದ ಹೈದರಾಲಿಯ ಸೈನ್ಯದ ವಿರುದ್ಧ ದಿಟ್ಟತನದಿಂದ ಹೋರಾಡಿದ ವೀರವನಿತೆ ಒನಕೆ ಓಬವ್ವರ ಧೈರ್ಯ, ದೇಶ ಪ್ರೇಮ, ಸದಾ ಸ್ಮರಣೀಯವಾಗಿರುವುದರ ಜೊತೆಗೆ ಸ್ತ್ರೀಶಕ್ತಿಯ ಸಂಕೇತವಾಗಿ ಇಂದಿಗೂ ಮಹಿಳೆಯರಿಗೆ ಓಬವ್ವಳ ಹೋರಾಟದ ಮನೋಭಾವ ಸದಾ ಸ್ಫೂರ್ತಿದಾಯಕವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಸಮಾಜಕ್ಕೆ ಮಹನೀಯರು, ಮಹಿಳೆಯರು ನೀಡಿದ ಕೊಡುಗೆ, ತ್ಯಾಗ, ಬಲಿದಾನ, ಸಾಧನೆಗಳ ಸಾರ್ಥಕ ಸೇವೆ ಗುರುತಿಸಿ ಜಯಂತಿ ಕಾರ್ಯಕ್ರಮವನ್ನು ಅಯೋಜಿಸಲಾಗುತ್ತಿದೆ ಇಂದಿನ ಯುವ ಪೀಳಿಗೆಯು ಮಹನೀಯರ ಮಹತ್ವವನ್ನು ಅರಿತು ಅವರ ತತ್ವ ಆದರ್ಶಗಳನ್ನು ಪಾಲಿಸುವಂತಾಗಬೇಕು ಎಂದರು.

ಕುಂದಾಪುರದ ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಒನಕೆ ಓಬವ್ವರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಕೋಶದ ಸುಬ್ರಮಣ್ಯ ಶೆಟ್ಟಿ, ಮಣಿಪಾಲ ಹೈಸ್ಕೂಲ್ ಟ್ರಸ್ಟ್ ಹಾಗೂ ಮ ಣಿಪಾಲ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಕಾಲೇಜಿನ ಉಪಪ್ರಾಂಶುಪಾಲ ನಾಗೇಂದ್ರ ಪೈ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು, ವರ್ಷಾ ನಿರೂಪಿಸಿ, ಕಾಲೇಜಿನ ಹಿರಿಯ ಶಿಕ್ಷಕ ಸಚ್ಚಿದಾನಂದ ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now