
#ಪಕ್ಷಿ #ಪ್ರೇಮದ #ಅನನ್ಯ #ರೀತಿ
ನಗರಗಳು ಬೆಳೆದಂತೆ ಕಾಡುಗಳು ಕಡಿಮೆಯಾಗುತ್ತಿವೆ. ಇದರೊಂದಿಗೆ ಪ್ರಾಣಿ, ಪಕ್ಷಿಗಳೂ ಕಡಿಮೆಯಾಗುತ್ತಿವೆ. ಮನುಷ್ಯರಿಗೆ ಎಷ್ಟೇ ಸಹಾಯ ಮಾಡಿದರೂ ಒಂದಿಲ್ಲೊಂದು ದಿನ ಮರೆಯುತ್ತಾರೆ. ಆದರೆ, ಕಾಡನ್ನು ಉಳಿಸಿ, ಬೆಳೆಸಿದಲ್ಲಿ ಪ್ರಕೃತಿಯನ್ನು ಕಾಪಾಡಿದಂತಾಗಿ ಪ್ರಾಣಿ ಪಕ್ಷಿಗಳ ಸಂತತಿಯನ್ನು ಉಳಿಸಿದಂತಾಗುತ್ತದೆ.. ನಾವು ಬೆಳೆಸಿದ ಗಿಡ, ಮರಗಳು ಇತರರಿಗೂ ಸ್ಪೂರ್ತಿಯಾಗುತ್ತವೆ. ಕುಂದಾಪುರದ ಸನಿಹದಲ್ಲಿ ವಾಸಿಸುತ್ತಿರುವ ಹವ್ಯಾಸಿ ಚಾರಣಿಗ, ಪರಿಸರ ಪ್ರೇಮಿ ಮಥಾಯಿಸ್ ಡೇಸಾರವರಿಗೆ ಮರ, ಗಿಡ, ಪ್ರಾಣಿ ಪಕ್ಷಿಗಳೆಂದರೆ ಎಲ್ಲಿಲ್ಲದ ಪ್ರೀತಿ. ತಾನು ಚಾರಣ ನಡೆಸಿದ ಬೆಟ್ಟ, ಗುಡ್ಡ, ಕಾಡುಗಳಲ್ಲಿನ ಸೌಂದರ್ಯಕ್ಕೆ ಹಾಗೂ ಪಕ್ಷಿಗಳ ಚಿಲಿಪಿಲಿ ಗಾನಕ್ಕೆ ಮಾರು ಹೋಗಿ ತನ್ನ ನಿವೃತ್ತಿ ಜೀವನವನ್ನು ಪ್ರಕೃತಿಯ ನಡುವೆ ಕಳೆಯಲು ನಿರ್ಧರಿಸಿದರು. ಬಾಂಬೆಯಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ಸೇವೆಸಲ್ಲಿಸಿ ನಿವೃತ್ತರಾದ ಬಳಿಕ, ಕುಂದಾಪುರ ತಾಲೂಕಿನ ಕಂದಾವರ ಗ್ರಾಮದ ಮೂಡ್ಲಕಟ್ಟೆಯಲ್ಲಿರುವ ತನ್ನ ಮನೆಯ ಸಮೀಪ ಒಂದು ಎಕರೆ ಜಾಗವನ್ನು ಖರೀದಿಸಿ ಕಾಡನ್ನು ಬೆಳೆಸಲು ಮುಂದಾದರು. ಇದಕ್ಕಾಗಿ ಅವರು 35 ವರ್ಷಗಳಿಂದ ದುಡಿದು ಕೂಡಿಟ್ಟ ಉಳಿತಾಯದ ಹಣವನ್ನು ಖರ್ಚುಮಾಡಿದ್ದಾರೆ.
ಡೇಸಾ ಅವರು, ಒಂದು ಎಕರೆ ಪ್ರದೇಶದಲ್ಲಿ ಪ್ರಾಣಿ ಪಕ್ಷಿಗಳು ತಿನ್ನಲೆಂದು ಹಣ್ಣಿನ ಮರಗಳ ಕಾಡು ಬೆಳೆಸುತ್ತಿದ್ದಾರೆ. ಹೆಬ್ಬಲಸು, ರೆಂಜೆ, ಪೇರಲೆ, ನೇರಳೆ, ಕುಂಟಲಹಣ್ಣು, ಜಾರಿಗೆ, ಕೋಕಂ, ಹೊನ್ನೆ, ರಾಮಪತ್ರೆ, ನೆಲ್ಲಿ, ಕಾಡುಮಾವು, ಬಗಿನೀ ಮರ, ಸುರಿಗೆ, ದಾಲ್ಟಿನ್ನಿ ಮೊದಲಾದ ಮರಗಳು ಡೇಸಾ ಬೆಳೆಸುತ್ತಿರುವ ಕಾಡಿನಲ್ಲಿವೆ. ಇವೆಲ್ಲವೂ ಬೆಳೆದು ದೊಡ್ಡವಾದಲ್ಲಿ ದಟ್ಟ ಕಾಡಿನಂತೆ ಕಾಣುವುದರಲ್ಲಿ ಸಂಶಯವಿಲ್ಲ. ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ಅಭಾವ ಉಂಟಾಗದಂತೆ ಅಲ್ಲಲ್ಲಿ ನೀರಿನ ಹೊಂಡಗಳನ್ನು ನಿರ್ಮಿಸಿದ್ದಾರೆ. ಕಾಡಿನ ನಡುವೆ ಟೀ ಹೌಸ್ ನಿರ್ಮಿಸಲಾಗಿದ್ದು, ಒಳಾಂಗಣದ ಭಿತ್ತಿಗಳಲ್ಲಿ ಪ್ರಾಣಿ ಪಕ್ಷಿಗಳ ಚಿತ್ರಗಳನ್ನು ರಚಿಸಲಾಗಿದೆ. ಟ್ರೇಹೌಸ್ನಲ್ಲಿ ವಿಶ್ರಮಿಸಿದರೆ, – ಪಕ್ಷಿಗಳು, ನರಿ, ನವಿಲುಗಳು ನೀರನ್ನು ಕುಡಿಯಲು ಬರುವುದನ್ನು ನೋಡಬಹುದಂತೆ. ಹಸಿರು ತುಂಬಿದ ಆ ನಿಶ್ಯಬ್ದ ವಾತಾವರಣದಲ್ಲಿ ಕುಳಿತರೆ, ಪಕ್ಷಿಗಳ ಕಲರವ
ಮನಸ್ಸಿಗೆ ಮುದನೀಡುತ್ತದಂತೆ. ಸ್ವಾವಲಂಬಿ ಜೀವನ ನಡೆಸುತ್ತಿರುವ ಡೇಸಾ, ಐದು ಸೆಂಟ್ಸ್ ಜಾಗದಲ್ಲಿ ನಿರ್ಮಿಸಿರುವ ಪುಟ್ಟ ಮನೆಯ ಸುತ್ತಲೂ ಇರುವ ಖಾಲಿ ಜಾಗದಲ್ಲಿ ಬಸಳೆ, ಕಬ್ಬು, ಬಾಳೆ, ಅಲಸಂದೆ, ಪೇರಳೆ, ಪಪ್ಪಾಯಿ ಮುಂತಾದುವುಗಳನ್ನು ಬೆಳೆಯುತ್ತಾರೆ. ಮಾವು ಮತ್ತು ಹಲಸಿನ ತಲಾ ಒಂದೊಂದು ಮರವಿದೆ. ಪುಟ್ಟ ಹೊಂಡವೊಂದನ್ನು ನಿರ್ಮಿಸಿ ಅಪರೂಪದ ಮೀನುಗಳನ್ನು ಹಾಗೂ ನಾಲ್ಕು ಆಮೆಗಳನ್ನೂ ಸಾಕುತ್ತಿದ್ದಾರೆ. ಅವರ ಊರಿನ ಸುತ್ತಲೂ ಹರಡಿರುವ ಕಾಂಡ್ಲಾವನದಲ್ಲಿ ವಿಹರಿಸುವಾಗ, ನದಿಯಿಂದ ಮೀನು, ಏಡಿಗಳನ್ನು ಹಿಡಿದು ತರುತ್ತಾರೆ. ಡೇಸಾರವರಿಗೆ ಕಾಂಡ್ಲಾ ವನವೆಂದರೆ ಇನ್ನಿಲ್ಲದ ಪ್ರೀತಿ. ತಮ್ಮದೇ ಆದ ಪುಟ್ಟ ಬೋಟ್ನಲ್ಲಿ ದಿನದ ಹೆಚ್ಚಿನ ಸಮಯವನ್ನು ಕಾಂಡ್ಲಾವನಗಳ ನಡುವೆ ಕಳೆಯುತ್ತಾರೆ.
ನಿವೃತ್ತಿಯ ನಂತರ, ಹಳ್ಳಿಯ ಪರಸರಕ್ಕೆ ವಾಪಸಾಗಿ, ಮನೆಯ ಸುತ್ತಲೂ ಕಾಡು ಮರಗಳನ್ನು ಬೆಳೆಸಿ, ಹಕ್ಕಿಗಳಿಗಾಗಿ ಆಹಾರವನ್ನು ಒದಗಿಸುತ್ತಿರುವ ಈ ಪರಿಸರ ಪ್ರೇಮಿಯ ಸಾಹಸ ಬೆರಗು ಹುಟ್ಟಿಸು
ವಂತಿದೆ.
ಕೆಲವೊಮ್ಮೆ ಪಕ್ಷಿಗಳ ಕಲರವದ ನಡುವೆ ಸಂಜೆಯವರೆಗೂ ಕಳೆದದ್ದಿದೆ. ಚಾರಣದ ಸಮಯದಲ್ಲಿ ಪರಿಚಿತರಾದವರನ್ನು ತನ್ನ ಮನೆಗೆ ಆಹ್ವಾನಿಸುತ್ತಾರೆ ಹಾಗೂ ಅವರನ್ನು ಕಾಂಡ್ಲಾವನಗಳಲ್ಲಿ ಸುತ್ತಿಸಿ, ಕಾಂಡ್ಲಾ ಕಾಡಿನ ಮಹತ್ವವನ್ನು ವಿವರಿಸುತ್ತಾರೆ. ಮೀನು, ಏಡಿಗಳನ್ನು ಹಿಡಿಯುವ ಕೌಶಲ್ಯವನ್ನು ಕಲಿಸಿ, ಹಿಡಿದ ಮೀನು, ಏಡಿಗಳ ಪದಾರ್ಥಗಳನ್ನು ತಾವೇ ತಯಾರಿಸಿ ಉಣಬಡಿಸುತ್ತಾರೆ. ‘ಎಲ್ಲಿಯವರೆಗೆ ಈ ಭೂಮಿಯು ವನ್ಯ ಮೃಗಗಳಿಂದ ತುಂಬಿದ ಕಾಡು, ಮೇಡುಗಳಿಂದ ತುಂಬಿರುತ್ತದೆಯೋ ಅಲ್ಲಿಯವರೆಗೆ ಮನುಜ ಸಂತತಿಗೆ ಆಸರೆ ನೀಡುತ್ತದೆ’ ಎನ್ನುವುದನ್ನು ಡೇಸಾ ಅಕ್ಷರಶಃ ಪಾಲಿಸುತ್ತಿದ್ದಾರೆ. ಇವರ ಕಾಡಿನಲ್ಲಿ ನಿರ್ಮಿಸಿರುವ ಟೀ ಹೌಸ್ ಸಮೀಪ ಇದೇ ಸ್ಲೋಗನ್ ಇರುವ ಫಲಕ ನಮ್ಮನ್ನು ಆಹ್ವಾನಿಸುತ್ತದೆ.
ಡೇಸಾರವರ ಪತ್ನಿ ವಿನ್ನಿಯವರು ಪುತ್ರ ವ್ಯಾಂಟಿನ್ ಡೇಸಾ ನೊಂದಿಗೆ ಮುಂಬೈಯಲ್ಲಿ ವಾಸವಾಗಿದ್ದು, ದೇಸಾರವರ ಪರಿಸರ ಕಾಳಜಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಮತ್ತು ಆಗಾಗ ಈ ಪರಿಸರಕ್ಕೆ ಬಂದು ಹಸಿರಿನ ಸಿರಿಯ ನಡುವೆ ಸಮಯ ಕಳೆಯುತ್ತಾರೆ.
ನಮ್ಮ ರಾಜ್ಯದ ಕರಾವಳಿಯಲ್ಲಿರುವ ಕಾಂಡ್ಲಾ ಕಾಡು ನಿಧಾನವಾಗಿ ನಾಶವಾಗುತ್ತಲೇ ಇದೆ. ಕಾಂಡ್ಲಾವನವನ್ನು ನಾಶಮಾಡುವುರಿಂದ, ಮೊಸಳೆ, ಹಾವು, ಏಡಿ, ಲೆಕ್ಕಕ್ಕೆ ಸಿಗದಷ್ಟು ಜಲಚರ ಹಾಗೂ ಸೂಕ್ಷ್ಮ ಜೀವಿಗಳ ಸಂತತಿ ಅಪಾವನ್ನೆದುರಿಸ ಬೇಕಾಗಿದೆ. ಪಕ್ಕದಲ್ಲಿಯೇ ಸಿಗಡಿ ಕೆರೆಗಳಿದ್ದು, ಕಾಂಡ್ಲಾವನದಲ್ಲಿ ವಾಸಿಸುತ್ತಿರುವ ಹಕ್ಕಿಗಳಿಂದ ಉಂಟಾಗುತ್ತಿರುವ ಸಮಸ್ಯೆಯಿಂದ ಪಾರಾಗಲು ಕಾಂಡ್ಲಾವನ್ನು ಸವರುತ್ತಿದ್ದಾರೆ. ಮೋಜು ಮಸ್ತಿಯ ತಾಣವಾಗಿರುವುದರಿಂದ ತ್ಯಾಜ್ಯ ಹೆಚ್ಚಾಗುತ್ತಿದ್ದು, ಪರಿಸರ ಹಾನಿಗೆ ಕಾರಣವಾಗುತ್ತಿದೆ ಎಂದು ಮಥಾಯಿಸ್ ಡೇಸಾ ಬೇಸರ ವ್ಯಕ್ತಪಡಿಸುತ್ತಾರೆ. ಪಕ್ಷಿ ಪ್ರೇಮಿ ಸಲೀಂ ಆಲಿಯವರ ಸಂಸ್ಥೆಯ ಒಡನಾಟದಲ್ಲಿ (ಬಿಎನ್ಎಚ್ಎಸ್) ಪಕ್ಷಿಗಳು ಹಾಗೂ ವನ್ಯ ಜೀವಿಗಳ ಬಗ್ಗೆ ಹುಟ್ಟಿದ ಕುತೂಹಲ ಮತ್ತು ಪ್ರೇಮದಿಂದಾಗಿ ಕಾಡು ಹಣ್ಣಿನ ಮರಗಳ ಕಾಡನ್ನು ನಿರ್ಮಿಸಲು ಪ್ರೇರಣೆ ನೀಡಿತಂತೆ. ಜೀವನದ ಕೊನೆ ದಿನಗಳನ್ನು ತಾನು ಬೆಳೆಸಿದ ಕಾಡಿನಲ್ಲಿ ಪಕ್ಷಿಗಳ ಕಲರವದಲ್ಲಿ ಕಳೆಯಬೇಕೆಂದು ಹೇಳುತ್ತಾ, ‘ಇಹಲೋಕವನ್ನು ತ್ಯಜಿಸಿದಾಗ ಇದೇ ಜಾಗದಲ್ಲಿ ಮಣ್ಣುಮಾಡಬೇಕೆಂದು’ ಮಗನಿಗೆ ತಿಳಿಸಿರುವುದಾಗಿ ಅವರು ಹೇಳುವಾಗ, ಪ್ರಕೃತಿ ಮತ್ತು ಪಕ್ಷಿಗಳ ಮೇಲೆ ಮಥಾಯಿಸ್ ಡೇಸಾರಿಗಿರುವ ಅನನ್ಯ ಪ್ರೀತಿಗೆ ಮತ್ತು ಕಾಳಜಿಗೆ ಕಣ್ಣಾಲಿಗಳು ತೇವವಾಗುತ್ತವೆ.





Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























