
ಮುಂಬಯಿ (ಆರ್‌ಬಿಐ), ಎ.೦೩: ವೃತ್ತಿಪರ ಶಿಕ್ಷಣದ ಪಿತಾಮಹ ಎಂದೇ ಪ್ರಸಿದ್ಧ, ಭಾರತ ರಾಷ್ಟ್ರದ ಹೆಸರಾಂತ ವೃತ್ತಿಪರ ಶಿಕ್ಷಣ ಸಂಸ್ಥೆಯೆಂದೆಣಿಸಿದ ಐಐಟಿಸಿ ಇದರ ಸಂಸ್ಥಾಪಕ ದಿ| ಎಸ್.ಕೆ ಉರ್ವಾಲ್ ಅವರ ಧರ್ಮಪತ್ನಿ ಪ್ರಫುಲ್ಲಾ ಉರ್ವಾಲ್ (೮೦.) ವಯೋಸಹಜ ಅನಾರೋಗ್ಯದಿಂದ ಇಂದಿಲ್ಲಿ ಗುರುವಾರ ಬೆಳಿಗ್ಗೆ ತನ್ನ ಮುಂಬಯಿ ವಡಲಾ ಇಲ್ಲಿನ ಸನ್ನಿಧಾನ್ ಸ್ವನಿವಾಸದಲ್ಲಿ ನಿಧನರಾದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಅಲ್ಲಿನ ಹೆಸರಾಂತ ನ್ಯಾಯವಾದಿ ವಾಸುದೇವ ರಾವ್ ಅವರ ಸುಪುತ್ರಿ ಆಗಿದ್ದ ಮೃತರು ಎರಡು ಗಂಡು (ಐಐಟಿಸಿ ನಿರ್ದೇಶಕರಾದ ವಿಕ್ರಾಂತ್ ಉರ್ವಾಲ್ ಮತ್ತು ಸಂದೇಶ್ ಉರ್ವಾಲ್), ಒಂದು ಹೆಣ್ಣು (ಸುಜತಾ ರಾವ್) ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಹಿಂದೂ ಪರಂಪರೆ, ಸಂಸ್ಕೃತಿಯನ್ನು ಮೈಗೂಡಿಸಿ ಧರ್ಮನಿಷ್ಠೆಯಿಂದ ಬಾಳುತ್ತಾ ಪ್ರೇರಣಾದಾಯಕ ವ್ಯಕ್ತಿತ್ವವುಳ್ಳವರಾಗಿ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದರು. ಶ್ರೀರಾಮ ಮತ್ತು ಶ್ರೀಕೃಷ್ಣನ ಅಪಾರ ಭಕ್ತರಾಗಿದ್ದು ಸಾಂತಾಕ್ರೂಜ್ ಪೂರ್ವದಲ್ಲಿನ ಉಡುಪಿ ಶ್ರೀ ಪೇಜಾವರ ಮಠ (ಮಧ್ವ ಭವನ ಮುಂಬಯಿ) ಮತ್ತು ಅಂಧೇರಿ ಪಶ್ಚಿಮ ಇರ್ಲಾ ಅಲ್ಲಿನ ಶ್ರೀ ಅದಮಾರು ಮಠದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಪ್ರೋತ್ಸಾಹಿಸುತ್ತಿದ್ದರು. ಕೊಡುಗೈದಾನಿ, ಕಲಾ ಪೋಷಕರಾಗಿದ್ದ ಇವರು ಮುಂಬಯಿಯಲ್ಲಿ ವರ್ಷಂಪ್ರತಿ ಸಂಗೀತ ವಿದ್ಯಾನಿಧಿ ಡಾ| ವಿದ್ಯಾಭೂಷಣ ಅವರ ಮತ್ತು ಪುತ್ತೂರು ನರಸಿಂಹ ನಾಯಕ್ ಬಳಗದ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರು. ಮೃತರ ನಿಧನಕ್ಕೆ ಬೃಹನ್ಮುಂಬಯಿಯಲ್ಲಿನ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























