
ಮುಂಬಯಿ, ಆ.10: ಮುಂಬಯಿಗರ ಗೋವಿಂದಾ ಆಲಾ ರೇ ಆಲಾ ಶಬ್ದದ ಧ್ವನಿ ಮನಾಕರ್ಷಕ ಅರ್ಥ ನೀಡುವ ಕೃಷ್ಣಾಷ್ಟಮಿ ಸಂದೇಶವಾಗಿದೆ. ಮಹಾರಾಷ್ಟ್ರದ ಇಂತಹ ಚಿಂತನೆ ನಮ್ಮೂರಲ್ಲೂ ಮೊಳಗಬೇಕು ಎಂದು ನನ್ನ ಆಶಯ. ಮುಂಬಯಿಯಲ್ಲಿ ಸನಾತನ ಸಂಸ್ಕೃತಿಯ ಪ್ರತೀಕರದ ಅನಾವರಣದ ಮಂಟಪ ಗೋಕುಲ ಆಗಬೇಕು. ಡಾ| ಸುರೇಶ್ ರಾವ್ ಅವರ ಶ್ರೀ ಕೃಷ್ಣನ ಪ್ರೇರಣೆಯ ಕನಸು ಇದಾಗಿದ್ದು ಅದನ್ನು ಸಾಕ್ಷಾತ್ಕಾರ ಮಾಡಲು ಕೃಷ್ಣ ಕುಟುಂಬ ಇಲ್ಲಿ ರೂಪಿತಗೊಂಡಿರುವುದೇ ನಿಜಾರ್ಥದ ಕೃಷ್ಣಾಷ್ಟಮಿ ಆಗಿದೆ. ಇಂತಹ ಪುಣ್ಯಾಧಿ ಕಾರ್ಯಕ್ರಮದಲ್ಲಿ ಭಾಗಿಗಳಾದ ನಾವೆಲ್ಲರೂ ಭಾಗ್ಯವಂತರು ಎಂದು ಕಲ್ಕೂರ ಆರ್ಟ್ಸ್ ಮಂಗಳೂರುಇದರ ಸಂಸ್ಥಾಪಕ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ನುಡಿದರು.

ಗೋಕುಲಾಷ್ಟಮಿ ಪ್ರಯುಕ್ತ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಜಿಪಿಟಿ) ಮತ್ತು ಬಿಎಸ್ಕೆಬಿ ಅಸೋಸಿಯೇಶನ್ (ಗೋಕುಲ) ವರ್ಷಂಪ್ರತಿಯಂತೆ ಈ ಬಾರಿಯೂ ಬೃಹನ್ಮುಂಬಯಿಯಲ್ಲಿನ ಮುದ್ದು ಮಕ್ಕಳಿಗಾಗಿ ಇಂದಿಲ್ಲಿ ಭಾನುವಾರ ಸಯಾನ್ ಪೂರ್ವದ ಗೋಕುಲ ಸಂಕೀರ್ಣದ ಗೋಕುಲದ ಸರಸ್ವತಿ ಸಭಾಗೃಹದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಿದ್ದು ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆಯನ್ನುತ್ತು ಕಲ್ಕೂರ ಮಾತನಾಡಿದರು.
ಕೃಷ್ಣ ವೇಷ ಸ್ಪರ್ಧೆ ಆಯೋಜನಾ ಕಾರ್ಯಾಧ್ಯಕ್ಷ ದೀಪಕ್ ಶಿವತ್ತಾಯ ಇವರ ಸಾರಥ್ಯದಲ್ಲಿ ಜರುಗಿದ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಲ್ಕೂರ ಪ್ರತಿಷ್ಠಾನ, ಮಂಗಳೂರು ಇದರ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಗೌರವ ಅತಿಥಿಗಳಾಗಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಚಿಣ್ಣರ ಬಿಂಬ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇದರ ಸ್ಥಾಪಕ ಮತ್ತು ಟ್ರಸ್ಟಿ ಪ್ರಕಾಶ್ ಬಿ.ಭಂಡಾರಿ, ಶ್ರೀ ಷಣ್ಮುಖಾನಂದ ಫೈನ್ ಆರ್ಟ್ಸ್ ಮತ್ತು ಸಂಗೀತ ಸಭಾ (ಕಿಂಗ್ ಸರ್ಕಲ್) ಗೌರವ ಕಾರ್ಯದರ್ಶಿ ಶ್ರೀಧರ್ ರಾಮಮೂರ್ತಿ, ಪೀಪಲ್ಸ್ ಫೋರಂ ಸಯಾನ್ ಮಾಟುಂಗಾ ಇದರ ಮುಖ್ಯಸ್ಥ ಅಜಯ್ ಪಾಂಡ್ಯ ಮತ್ತಿತರರು ಉಪಸ್ಥಿತರಿದ್ದರು.
ಪ್ರವೀಣ್ ಶೆಟ್ಟಿ ಮಾತನಾಡಿ ಸುಮಾರು ಏಳ್ನೂರು ಮುದ್ದು ಕೃಷ್ಣಗಳ ಭಾಗವಹಿಸುವಿಕೆ ಸ್ತುತ್ಯರ್ಹ. ಗೋಕುಲ ಅಧ್ಯಕ್ಷ ಡಾ| ಸುರೇಶ್ ರಾವ್ ಕಟೀಲು ಅವರ ಇಂದಿನ ಅನಿವಾರ್ಯದ ಅನುಪಸ್ಥಿತಿ ತಿಳಿದಿರುವೆ. ಅವರೇ ಈ ಕಾರ್ಯಕ್ರಮದ ಸ್ಫೂರ್ತಿ ಮತ್ತು ಪ್ರಮುಖ ವ್ಯಕ್ತಿ ಎಂದು ಭಾವಿಸುವೆ. ಆಧುನಿಕ ಜಗತ್ತಿನಲ್ಲೂ ಮಕ್ಕಳೇ ದೇವರಾಗಿರುತ್ತಾರೆ. ಆದ್ದರಿಂದ ಇಲ್ಲಿ ಸುಮಾರು ಏಳ್ನೂರು ದೇವರುಗಳ ದರ್ಶನ ಪಡೆದ ನಾವೆಲ್ಲರೂ ಧನ್ಯರು. ಸ್ಪರ್ಧೆಯಲ್ಲಿ ಪ್ರತಿಭಾ ಪ್ರದರ್ಶನವೇ ಮಕ್ಕಳ ಪಾಲಿನ ಬಹುಮಾನವಾಗಿದ್ದು, ಇಂತಹ ಸ್ಪರ್ಧೆಗಳ ಚಿಂತಕ ಪ್ರದೀಪ್ ಕಲ್ಕೂರ ಅವರ ದೂರದೃಷ್ಟಿ ಎಲ್ಲರಿಗೂ ಮಾದರಿ ಆಗಲಿ ಎಂದು ಆಶಯ ವ್ಯಕ್ತ ಪಡಿಸಿದರು.

ಚಿಣ್ಣರ ಬಿಂಬ ಸಂಸ್ಥೆಯ ಸರ್ವೋನ್ನತಿಗೆ ಇಂತಹ ಸ್ಪರ್ಧೆಗಳು ಮಾದರಿಯಾಗಿವೆ. ಕೃಷ್ಣೈಕ್ಯ ಶ್ರೀ ವಿಶ್ವೇಶತೀರ್ಥ ಪೇಜಾವರಶ್ರೀಗಳ ಅಭಯಹಸ್ತದಿಂದ ಶುಭಾರಂಭಗೊಂಡ ಚಿಣ್ಣರ ಬಿಂಬಕ್ಕೆ ಮುಂಬಯಿಯಲ್ಲಿನ ಪೇಜಾವರ ಮಠವೂ ಆಶ್ರಯವಾಗಿದೆ. ಸನಾತನ ಧರ್ಮದ ಅಭಿವೃದ್ಧಿಗೆ ಇಂತಹ ಸ್ಪರ್ಧೆ, ಕಾರ್ಯಕ್ರಮಗಳು ಪೂರಕವಾಗಿದ್ದು ಮಕ್ಕಳಲ್ಲಿನ ಇಂತಹ ಪ್ರತಿಭಾ ಪ್ರದರ್ಶನ ಚಿಣ್ಣರ ಬಿಂಬ ಸಂಸ್ಥೆಗೂ ಉತ್ತೇಜನವಾಗಿದೆ ಎಂದು ಪ್ರಕಾಶ್ ಭಂಡಾರಿ ತಿಳಿಸಿದರು.
ಏಳು ವಿಭಾಗಗಳ ಹರೆಯ ಗುಂಪುಗಳು ಮತ್ತು ಸಮೂಹ ಸ್ಪರ್ಧೆಗಳನ್ನು ಗೋಕುಲದಲ್ಲಿನ ವಿವಿಧ ಸಭಾಗೃಹಗಳಲ್ಲಿ ನಡೆಸಲ್ಪಟ್ಟವು. ಬಿಎಸ್ಕೆಬಿ ಅಸೋಸಿಯೇಶನ್ನ ಶತಮಾನೋತ್ಸವ ಆಚರಣಾ ಈ ವರ್ಷ ದೊಡ್ಡ ಮಟ್ಟದಲ್ಲಿ ಶುಲ್ಕಮುಕ್ತ ಸ್ಪರ್ಧೆಯಲ್ಲಿ ಆಯೋಜಿಸಲ್ಪಟ್ಟ ಶ್ರೀ ಕೃಷ್ಣ ವೇಷ ಸ್ಪರ್ಧೆ-2025ರಲ್ಲಿ ಮಹಾನಗರದಲ್ಲಿನ ವಿವಿಧ ಶಾಲೆಗಳ, ಸಂಘ ಸಂಸ್ಥೆಗಳ ಎರಡು ತಿಂಗಳ ಶಿಶುವಿನಿಂದ 15 ವರ್ಷದ ವರೆಗಿನ ಮಕ್ಕಳ ಸಹಿತ ಸುಮಾರು 700ಕ್ಕೂ ಅಧಿಕ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಬಿಎಸ್ಕೆಬಿಎ ಉಪಾಧ್ಯಕ್ಷ ವಾಮನ್ ಹೊಳ್ಳಾ, ಕಾರ್ಯದರ್ಶಿ ಎ.ಪಿ.ಕೆ ಪೋತಿ (ಜಿಪಿಟಿ ಟ್ರಸ್ಟಿ- ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ ವೈ.ಮೋಹನ್ರಾಜ್, ಜೊತೆ ಕೋಶಾಧಿಕಾರಿ ಗಣೇಶ್ ಭಟ್, ಯುವ ವಿಭಾಗಧ್ಯಕ್ಷ ಪ್ರಶಾಂತ್ ಹೆರ್ಲೆ, ಗೋಕುಲ ಕಲಾವೃಂದದ ಕಾರ್ಯಧ್ಯಕ್ಷ ವಿನೋದಿನಿ ರಾವ್, ಗೋಕುಲ ಭಜನಾ ಮಂಡಳಿ ಸಮಿತಿ ಮತ್ತು ಮಾಧ್ಯಮ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ನ್ಯಾಯವಾದಿ ಎಲ್ಲೂರು ಗುರುರಾಜ್ ಭಟ್, ಮಾಜಿ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್, ಜಿಪಿಟಿ ಟ್ರಸ್ಟಿಗಳಾದ ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ, ಶೈಲಿನಿ ರಾವ್, ಸೇರಿದಂತೆ ಇನ್ನಿತರ ಪದಾಧಿಕಾರಿಗಳು, ಸದಸ್ಯರನೇಕರು ಹಾಜರಿದ್ದರು.
ಮಹಿಳಾ ವಿಭಾಗಧ್ಯಕ್ಷೆ ಡಾ| ಸಹನಾ ಎ.ಪೋತಿ ಮತ್ತು ಭಾರತಿ ಉಡುಪ ಪ್ರಾರ್ಥನೆಯನ್ನಾಡಿದರು. ದೀಪಕ್ ಶಿವತ್ತಾಯ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಪಗುಚ್ಫ, ಸ್ಮರಣಿಕೆಗಳನ್ನೀಡಿ ಗೌರವಿಸಿದರು. ಪ್ರದೀಪ್ ಕಲ್ಕೂರ ಸ್ಪರ್ಧಿಗಳಿಗೆ ಬಹುಮಾನಗಳನ್ನೀಡಿ ಅಭಿನಂದಿಸಿದ ರು. ಎ.ಪಿ.ಕೆ ಪೋತಿ ವಂದನಾರ್ಪಣೆಗೈದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now