ಮಂಗಳೂರು ; ವಯೋವಂದನ ಆತಿಥ್ಯ ಗೃಹದ ಸಭೆ

ಮಂಗಳೂರು ; ವಯೋವಂದನ ಆತಿಥ್ಯ ಗೃಹದ ಸಭೆ

0Shares

ಮುಂಬಯಿ, ಮಾ.೩೧: ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆ ಸಮಾಜದ ಹಿರಿಯರಿಗಾಗಿ ನಿರ್ಮಿಸುತ್ತಿರುವ ವಯೋವಂದನ ಆತಿಥ್ಯ ಗೃಹ ಮಕ್ಕಳಿಲ್ಲದ ಹಿರಿಯರಿಗೆ ಜೀವನದ ಸಂಧ್ಯಾಕಾಲದಲ್ಲಿ ಆಸರೆಯಾಗಿ ಚೈತನ್ಯದಾಯಿಯಾಗಲಿದೆ. ವೇದಿಕೆಯ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ಸಮಾಜದ ಎಲ್ಲರೂ ಒಮ್ಮನಿಸ್ಸಿನಿಂದ ಕೈಜೋಡಿಸಿದರೆ ಈ ಮಹತ್ವಕಾಂಕ್ಷಿ ಯೋಜನೆ ಆದಷ್ಟು ಶೀಘ್ರ ನೆರವೇರಲಿದೆ ಎಂದು ವೇದಮೂರ್ತಿ ಎಂ.ವಿಠ್ಠಲ್ ಭಟ್ ಶುಭ ಹಾರೈಸಿದರು.

ಮಂಗಳೂರು ರಥ ಬೀದಿಯಲ್ಲಿರುವ ಶ್ರೀ ಕುಡ್ತೇರಿ ಮಹಾಮಾಯ ದೇವಸ್ಥಾನದ ಸಭಾಗೃಹದಲ್ಲಿ ಕಳೆದ ಶನಿವಾರ ಸಂಜೆ ಜರುಗಿದ “ವಯೋವಂದನ ಆತಿಥ್ಯ ಗೃಹ”ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ವಿಠ್ಠಲ್ ಭಟ್ ಮಾತನಾಡೀದರು.

ಉಡುಪಿ ತ್ರಿಶಾ ವಿದ್ಯಾ ಕಾಲೇಜಿನ ಸಂಸ್ಥಾಪಕ ಸಿಎ| ಗೋಪಾಲಕೃಷ್ಣ ಭಟ್ ಮಾತನಾಡಿ ಯೋಜನೆಯ ಸಮಗ್ರ ವಿವರಗಳನ್ನು ಅಂಕಿ ಅಂಶಗಳ ಮೂಲಕ ವಿವರಿಸಿ, ನಿವಾಸಿಗಳಿಗೆ ಊಟೋಪಚಾರ, ವಸತಿ ವ್ಯವಸ್ಥೆ, ವೈದ್ಯಕೀಯ ಸೌಲಭ್ಯದ ಜೊತೆಗೆ ಜೀವನೋತ್ಸಾಹವನ್ನು ಹೆಚ್ಚಿಸುವ ನಿರಂತರ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿದ್ಯಾ ಪೋಷಕ ನಿಧಿ ವಿದ್ಯಾಥಿ ವೇತನದ ಅಧ್ಯಕ್ಷ ಸಿಎ| ಎಸ್.ಎಸ್ ನಾಯಕ್ ಅವರು ತಮ್ಮ ತಾಯಿಯ ಹುಟ್ಟು ಹಬ್ಬದ ದಿನ ಸಂಕಲ್ಪಿಸಿದಂತೆ ಒಂದು ಕೊಠಡಿಯ ದೇಣಿಗೆ ೮ ಲಕ್ಷ ರೂಪಾಯಿ ಚೆಕ್ಕನ್ನು ಹಸ್ತಾಂತರಿಸಿದರು.

ಉಡುಪಿ ಅನಂತ ವೈದಿಕ ಕೇಂದ್ರದ ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್ ಮಾತನಾಡಿ, ವೇದಿಕೆಯ ಸಮಾಜಮುಖಿ ಯೋಜನೆಗಳಿಗೆ ಸಮಾಜದ ಎಲ್ಲಾ ವರ್ಗಗಳಿಂದಲೂ ದೇಣಿಗೆಗಳು ಹರಿದು ಬರುತ್ತಿದ್ದು, ಅತಿ ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಸಂಪೂರ್ಣಗೊಂಡು ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪಲಿ ಎಂದು ಶುಭ ಹಾರೈಸಿದರು.

ಉದ್ಭವ ಡಿಸೈನ್ ಸ್ಟುಡಿಯೋ ಮಣಿಪಾಲದ ಸಿವಿಲ್ ಇಂಜಿನಿಯರ್ ಕುಂದಾಪುರದ ಸಚಿತ್ ಪೈ ಅವರು ವಾಸ್ತು ವಿನ್ಯಾಸ ಮತ್ತು ಕಟ್ಟಡ ನಿರ್ಮಾಣ ಸಲಹೆಗಾರರಾಗಿದ್ದು, ಪ್ರತಿ ಮಹಡಿಯಲ್ಲಿ ೨೪ ಕೊಠಡಿ ಗಳಂತೆ ಒಟ್ಟು ೭೨ ಕೊಠಡಿಗಳ ೧೪೪ ಮಂದಿ ಹಿರಿಯರಿಗೆ ವಾಸಿಸಲು ಅನುಕೂಲವಾಗುವ ೫೬ ಸಾವಿರ ಚದರಡಿಯ ಕಟ್ಟಡದ ವಾಸ್ತು ವಿನ್ಯಾಸ ಮತ್ತು ಸೌಲಭ್ಯಗಳ ವಿವರವನ್ನು ಸಭೆಗೆ ನೀಡಿದರು.

ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಸಂಚಾಲಕ ಹಾಗೂ ವಯೋವಂದನ ಆತಿಥ್ಯ ಗ್ರಹ ಯೋಜನೆಯ ರೂವಾರಿ ಆರ್. ವಿವೇಕಾನಂದ ಶೆಣೈ ಪ್ರಾಸ್ತಾವನೆಗೈದು, ಕಳೆದ ೧೪ ವರ್ಷಗಳಿಂದ ಕುಟುಂಬ ಚೈತನ್ಯ ನಿಧಿ, ವಿದ್ಯಾ ಪೋಷಕ ನಿಧಿ, ಪ್ರತಿಭಾ ಪುರಸ್ಕಾರ, ಆರೋಗ್ಯ ಚೈತನ್ಯ ನಿಧಿ, ಜಿಎಸ್‌ಬಿ ಗ್ರಹ ನಿರ್ಮಾಣ ಯೋಜನೆ, ಉಚಿತ ಗುಂಪು ಆರೋಗ್ಯ ವಿಮಾ ಯೋಜನೆಯ ಮೂಲಕ ಉಡುಪಿ ಜಿಲ್ಲೆಯಿಂದ ಪ್ರಾರಂಭಿಸಿ ದಕ್ಷಿಣ ಕನ್ನಡ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.

“ವಯೋವಂದನ ಆತಿಥ್ಯ ಗೃಹ ಯೋಜನೆ”ಯು ವೇದಿಕೆಯ ಮಹತ್ವಕಾಂಕ್ಷಿ ಯೋಜನೆ ಆಗಿದ್ದು, ಪ್ರಮುಖವಾಗಿ ಸಮಾಜದ ಮಕ್ಕಳಿಲ್ಲದ ಹಿರಿಯರಿಗೆ ಉಚಿತ ವಾಸ್ತವ್ಯ ಕಲ್ಪಿಸುವ ಸದುದ್ದೇಶದಿಂದ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಮಕ್ಕಳು ವಿದೇಶದಲ್ಲಿದ್ದು ಒಂಟಿತನ ಕಾಡುವ ದಂಪತಿಗಳಿಗೆ ಕೂಡಾ ನಿಗದಿತ ಶುಲ್ಕದೊಂದಿಗೆ ಅವಕಾಶ ನೀಡಲಾಗುವುದು ಎಂದರು.
ವೇದಿಕೆಯಲ್ಲಿ ಅತಿಥಿ ಅಭ್ಯಾಗತರುಗಳಾಗಿ ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿಗಳಾದ ಗಣೇಶ್ ಕಾಮತ್, ಕಿರಣ ಪೈ, ಕುವೈಟ್ ಜಿಎಸ್‌ಬಿ ಸಮಾಜದ ಪ್ರಮುಖ ಮಂಜೇಶ್ವರ ಮೋಹನ್‌ದಾಸ್ ಕಾಮತ್, ಸಮಾಜ ಸೇವಕಿ ಪುಷ್ಪಾ ಪ್ರಭು ಮಂಗಳೂರು, ವಿದ್ಯಾ ಪೋಷಕ ನಿಧಿ ವಿದ್ಯಾಥಿ ವೇತನ ಯೋಜನೆಯ ಸಂಚಾಲಕ ಮೂಡಬಿದ್ರೆ ವಿಜಯಕುಮಾರ್ ಶೆಣೈ ಬೆಂಗಳೂರು ಉಪಸ್ಥಿತರಿದ್ದು ಶುಭಾಶಂಸನೆಗೈದರು.

ವಯೋವಂದನ ಯೋಜನೆಯ ಮಂಗಳೂರು ವಲಯ ಸಂಚಾಲಕ ರಘುನಾಥ ಪ್ರಭು ಸ್ವಾಗತಿಸಿ, ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now