
ಮಂಗಳೂರು, ಮಾ. ೧೫: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ೨೦೨೪-೨೫ನೇ ಸಾಲಿನ ವಾರ್ಷಿಕ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ ನಡೆಸಲಾಯಿತು. ೨೦೨೩-೨೪ನೇ ಸಾಲಿನ ವಾರ್ಷಿಕ ವರದಿಯನ್ನು ವಿಜ್ಞಾನ ನಿಕಾಯದ ಮುಖ್ಯಸ್ಥೆ ಅರುಣಾ ಕುಮಾರಿ ವಾಚಿಸಿದರು. ವಾಣಿಜ್ಯ ನಿಕಾಯದ ಮುಖ್ಯಸ್ಥೆ ಡಾ. ಸುಧಾ ಎನ್. ವೈದ್ಯ ಅವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು
ಇದೇ ವೇಳೆ ೨೦೨೪-೨೫ನೇ ಶೈಕ್ಷಣಿಕ ವರ್ಷದ ಶಿಕ್ಷಕ-ರಕ್ಷಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಕಾರ್ಯಾಧ್ಯಕ್ಷರಾಗಿ ದೀಪಕ್ ಗಿಲ್ಬರ್ಟ್ ಡಿಸೋಜಾ ಅವರು ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಭೂಷಣ್ ಸನಿಲ್, ಸತೀಶ್, ಶ್ರೀನಿವಾಸ್, ಉಪಕಾರ್ಯದರ್ಶಿಯಾಗಿ ಚೇತನ, ಸದಸ್ಯರಾಗಿ ಯು.ಎಂ. ಹುಸೇನ್, ಭೀಮವ್ವ, ಹರೀಶ್, ಗೀತಾ, ಸುರೇಶ್ ಕುಲಾಲ್, ಬಸಮ್ಮ ಇವರುಗಳು ಆಯ್ಕೆಯಾದರು.
ನೂತನ ಕಾರ್ಯಾಧ್ಯಕ್ಷ ದೀಪಕ್ ಗಿಲ್ಬರ್ಟ್ ಡಿಸೋಜಾ, ಮಕ್ಕಳಿಗೆ ಸಮಾಜದ ಜೊತೆಗೆ ಕೈ ಜೋಡಿಸುವುದನ್ನು ಕಲಿಸಬೇಕು. ವಿದ್ಯಾರ್ಥಿಗಳು ಕೇವಲ ಶಿಕ್ಷಣ ಕ್ಷೇತ್ರಕ್ಕೆ ಮಾತ್ರವೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೇ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ತಾವು ಓದಿದ ಸಂಸ್ಥೆಗೆ ಕಿಂಚಿತ್ ಕೊಡುಗೆ ನೀಡುವ ಕೆಲಸ ಮಾಡಬೇಕು. ಸರ್ಕಾರಿ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಸಹಾಯ ಮಾಡುತ್ತವೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕ ಮತ್ತು ರಕ್ಷಕ ಇಬ್ಬರ ಪಾತ್ರವೂ ಮಹತ್ವಪೂರ್ಣವಾದುದು. ಇಂದು ಸಮಾಜದಲ್ಲಿ ಸರ್ಕಾರಿ ಸಂಸ್ಥೆಗಳು ಬೆಳವಣಿಗೆ ಹೊಂದಬೇಕಾದರೆ ಕೇವಲ ಆಡಳಿತ ವರ್ಗ ಮಾತ್ರವಲ್ಲದೇ, ಪೋಷಕ ವರ್ಗದ ಸಹಕಾರ ನೀಡಬೇಕಿದೆ. ವಿದ್ಯಾರ್ಥಿಗಳು ತಾವು ಓದಿದ ಸಂಸ್ಥೆ ಬಗೆಗೆ ಪ್ರೀತಿ, ಗೌರವ ಬೆಳೆಸಿಕೊಳ್ಳುವ ಮೂಲಕ ಬೆಂಬಲವಾಗಿ ನಿಲ್ಲಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಪ್ರಾಧ್ಯಾಪಕಿ ಅರುಣಾ ಕುಮಾರಿ ಹಾಗೂ ಶಿಕ್ಷಕ-ರಕ್ಷಕ ಸಂಘದ ಕಾರ್ಯಾಧ್ಯಕ್ಷ ದೀಪಕ್ ಗಿಲ್ಬರ್ಟ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























