
ಉಡುಪಿ ಜಿಲ್ಲೆಯ ಕಾಪುವಿನ ಪಾದೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ISPRL) ಕಚ್ಚಾ ತೈಲ ಸಂಗ್ರಹಣಾ ಘಟಕದ 2ನೇ ಹಂತದ ಯೋಜನೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಯೋಜನೆಯ ಕಾಮಗಾರಿಯನ್ನು ಮೇಘಾ ಇಂಜಿನಿಯರಿಂಗ್ (MEIL) ಖಾಸಗಿ ಕಂಪನಿಗೆ 60 ವರ್ಷಗಳ ಗುತ್ತಿಗೆ ನೀಡಲಾಗಿದೆ ಎನ್ನಲಾಗಿದ್ದು, ಈ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿವೆ.
ಸುಮಾರು 15 ವರ್ಷಗಳ ಹಿಂದೆ ಆರಂಭಗೊಂಡ ಈ ಯೋಜನೆ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಅದರ ವಿಸ್ತರಣೆಯ ಭಾಗವಾಗಿ ಹೊಸ ಕಾಮಗಾರಿ ಪ್ರಾರಂಭಿಸಲು ಕಂಪನಿ ಮುಂದಾಗಿದೆ. ಆದರೆ ಅಗತ್ಯ ಭೂಮಿ ಅನುಮತಿ ಸಿಕ್ಕಿಲ್ಲ, ಪೋಲ್ಯೂಶನ್ ಕ್ಲಿಯರೆನ್ಸ್ ಸಿಕ್ಕಿಲ್ಲ, ಎನ್ವಿರಾನ್‌ಮೆಂಟ್ ಪರ್ಮಿಷನ್ ಇಲ್ಲ, ಫಾರೆಸ್ಟ್ ಕ್ಲಿಯರೆನ್ಸ್ ಇಲ್ಲ. ಆದರೆ ಬಂಡೆ ಹೊಡೆಯುವ ಪರ್ಮಿಷನ್ ಸಿಕ್ಕಿದ್ದು, ಸಮರ್ಪಕ ಮಾಹಿತಿಯಿಲ್ಲದೆ ಬಂಡೆ ಸ್ಫೋಟ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಹಿಂದೆ ನಡೆದ ಸ್ಫೋಟಗಳಿಂದ ಮನೆಗಳಿಗೆ ಹಾನಿ ಉಂಟಾಗಿದ್ದು, ಬಾವಿ ಹಾಗೂ ಕೊಳವೆಬಾವಿಗಳ ನೀರು ಬತ್ತಿಹೋಗಿದ ಘಟನೆಗಳು ಸಂಭವಿಸಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಪರಿಸರ ಹಾಗೂ ಜನರ ಸುರಕ್ಷತೆ ಕುರಿತಾಗಿ ಗಂಭೀರ ಚಿಂತೆ ವ್ಯಕ್ತವಾಗಿದೆ.
ಇದಲ್ಲದೆ, ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದೆ ಹೊರರಾಜ್ಯದ ಕಾರ್ಮಿಕರನ್ನು ನೇಮಕ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಇದಕ್ಕೆಲ್ಲ ಯಾರು ಹೊಣೆ ಎಂದು ಮಾಜಿ ಕಾಪು ಶಾಸಕರಾದ ವಿನಯ್ ಕುಮಾರ್ ಸೊರಕೆ ಅವರು ಪ್ರತಿಭಟನೆಯಲ್ಲಿ ಪ್ರಶ್ನಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಎಂ.ಎಫ್. ಗಪೂರ್ ಮಾತನಾಡಿ, ಎರಡನೇ ಹಂತದ ಯೋಜನೆಯನ್ನು ಖಾಸಗಿ ಕಂಪನಿಗೆ ಕೊಟ್ಟದ್ದು ಯಾಕೆ ಎಂಬುದರಲ್ಲಿ ಅನುಮಾನವಿದೆ. ಕೇಂದ್ರ ಸರ್ಕಾರ ಜನರನ್ನು ಮರುಳು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರ ಮುಖಾಂತರ ಒಂದು ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಪುನರ್ವಸತಿ ಯೋಜನೆಯಲ್ಲಿ ಮೂರು ಮನೆಗಳಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ. ನಾಗಬನ, ದೈವದೇವರ ಬನಗಳಿಗೆ ಪರಿಹಾರ ಸಿಕ್ಕಿಲ್ಲ. ಅಲ್ಲಿರುವ ಜೈನ ಬಸದಿ ಹತ್ತಿರ ಸುಮಾರು 500 ಮೀಟರ್ ಒಳಗೆ ಬಂಡೆ ಹೊಡೆಯುವ ಕಾರ್ಯ ನಡೆಯುತ್ತಿದ್ದು, ಇದರಿಂದ ಬಸದಿ ಹಾನಿಯಾಗುವ ಸಂಭವವಿದೆ ಎಂದು ಸ್ಥಳೀಯರಾದ ಸುರೇಂದ್ರ ಜೈನ್ ಪಾದೂರು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಸದಾನಂದ ಪೂಜಾರಿ, ದಿವಾಕರ ಶೆಟ್ಟಿ (ಕಾಪು), ನಾಗಭೂಷಣ್ ರಾವ್, ಶರಬುದ್ದೀನ್ ಶೇಕ್, ಶಾಂತಲಾ ಶೆಟ್ಟಿ, ಭಾಸ್ಕರ್ ಪೂಜಾರಿ, ವಿಜಯ್ ಧೀರಜ್, ಮೆಲ್ವಿನ್ ಡಿಸೋಜಾ (ಶಿರ್ವ), ವಿಲ್ಸನ್ ರೊಡ್ರಿಗಸ್ (ಶಿರ್ವ), ಜಿತೇಂದ್ರ ಫುರ್ಟಾಡೊ(ಪಲಿಮಾರು), ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಅನ್ಸರ್ ಅಹಮದ್ (ಉಡುಪಿ) ಉಪಸ್ಥಿತರಿದ್ದರು.
ಪ್ರತಿಭಟನೆಯ ಶಿಸ್ತು ಬಂದೋಬಸ್ತನ್ನು ಕಾಪು ಸರ್ಕಲ್ ಇನ್ಸ್ಪೆಕ್ಟರ್ ಹಸ್ಮತ್ ಅಲಿ, ಶಿರ್ವ ಠಾಣೆಯ ಠಾಣಾಧಿಕಾರಿ ಮಂಜುನಾಥ್ ಮರಬದ, ಕ್ರೈಂ ಎಸ್‌ಐ ಲೋಹಿತ್ ಕುಮಾರ್ ಹಾಗೂ ಶಿರ್ವ ಠಾಣಾ ಸಿಬ್ಬಂದಿಯವರು ಅಚ್ಚುಕಟ್ಟಾಗಿ ನಿರ್ವಹಿಸಿದರು.


ನಮ್ಮ ವರದಿಗಾರರು

ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now