ಉಡುಪಿ, ಡಿಸೆಂಬರ್ 22, 2024 : ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಕೌಶಲ್ಯಾಭಿವೃದ್ಧಿ ಪಡೆದ ಅರ್ಹ ಫಲಾನುಭವಿಗಳಿಗೆ ಚಟುವಟಿಕೆಗಳನ್ನು ನಡೆಸಲು ಬ್ಯಾಂಕುಗಳು ಆರ್ಥಿಕ ನೆರವು ನೀಡಲು ಶಿಫಾರಸ್ಸು ಆದ ಎಲ್ಲಾ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಿ ಎಂದು ಬ್ಯಾಂಕಿನ ಅಧಿಕಾರಿಗಳಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಅವರು ಶನಿವಾರ, ಡಿ. 21 ರಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸರಕಾರದ ಪಿಎಂ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡುವ ಸಂದರ್ಭದಲ್ಲಿ ಸ್ಟ್ಯಾಂಪ್ ಶುಲ್ಕವನ್ನು ಹೆಚ್ಚು ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಈ ಯೋಜನೆಯಡಿ ಸಾಲ ಸೌಲಭಕ್ಕೆ 500 ರೂಪಾಯಿ ಸ್ಟ್ಯಾಂಪ್ ಶುಲ್ಕ ಪಡೆಯಬೇಕು ಎಂದರು.
ಪಿಎಂ ವಿಶ್ವಕರ್ಮ ಯೋಜನೆಯಡಿ ಆರ್ಥಿಕ ನೆರವು ಕೋರಿ ಬ್ಯಾಂಕುಗಳಿಗೆ ಹೋದ ಸಂದರ್ಭದಲ್ಲಿ ಅಲ್ಲಿನ ಮ್ಯಾನೇಜರ್ ಗಳು ಸ್ಥಳೀಯ ಕನ್ನಡ ಭಾಷೆ ಬಾರದೇ ಅರ್ಹ ಫಲಾನುಭವಿಗಳಿಗೆ ನೆರವು ಪಡೆಯಲು ತೊಂದರೆ ಆಗುತ್ತಿದೆ. ಭಾಷಾ ಸಮಸ್ಯೆಗಳಿದ್ದಲ್ಲಿ ಬ್ಯಾಂಕ್ ನ ಇತರೆ ಸಿಬ್ಬಂದಿಗಳ ಸಹಾಯದಿಂದ ಸಂವಹನ ನಡೆಸಿ, ಅವರುಗಳಿಗೆ ಸಹಾಯ ಮಾಡಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಜಿಲ್ಲೆಯಲ್ಲಿನ ಎಲ್ಲಾ ಬ್ಯಾಂಕುಗಳ ವತಿಯಿಂದ 60,519 ಕೋಟಿ ರೂ. ನಷ್ಟು ವಹಿವಾಟು ನಡೆದಿದ್ದು, ಕಳೆದ ವರ್ಷಕ್ಕಿಂತ 5734 ಕೋಟಿ ರೂ. ಗೂ ಹೆಚ್ಚು ವಹಿವಾಟು ನಡೆದು ಶೇ. 10.47 ರಷ್ಟು ಹೆಚ್ಚಾಗಿದೆ ಎಂದರು.
ಜಿಲ್ಲೆಯಲ್ಲಿ ವಿಶೇಷ ಗಮನ ಕಾರ್ಯಕ್ರಮಗಳ ಅಡಿಯಲ್ಲಿ ಬ್ಯಾಂಕುಗಳು ದುರ್ಬಲ ವರ್ಗಗಳಿಗೆ 1233 ಕೋಟಿ ರೂ., ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ 82.90ಕೋಟಿ ರೂ., ವಸತಿ ಕ್ಷೇತ್ರಗಳ ಸುಸ್ಥಿರ ಅಭಿವೃದ್ಧಿಗಾಗಿ 136 ಕೋಟಿ ರೂ. ಗಳ ಸಾಲ ವಿತರಣೆ ಮಾಡಲಾಗಿದೆ ಎಂದರು.
ಜಿಲ್ಲೆಯ ಉದ್ಯಮಿಗಳನ್ನು ಬೆಂಬಲಿಸುವುದರೊಂದಿಗೆ ಉದ್ಯೋಗಾವಕಾಶ ಸೃಷ್ಠಿಸಲು ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ 261 ಅರ್ಜಿಗಳು ಸ್ವೀಕೃತವಾಗಿದ್ದು, ಇದರಲ್ಲಿ 131 ಅರ್ಜಿಗಳನ್ನು ವಿಲೇವಾರಿ ಮಾಡಿ, 28.34 ಕೋಟಿ ರೂ. ಸಾಲ ವಿತರಿಸಲಾಗಿದೆ. ಬಾಕಿ ಉಳಿದ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಿ, ಅರ್ಹ ಫಲಾನುಭವಿ ಉದ್ಯಮಿಗಳಿಗೆ ಸಬ್ಸಿಡಿಯನ್ನು ಶೀಘ್ರವಾಗಿ ವಿತರಿಸುವಂತೆ ಸೂಚನೆ ನೀಡಿದರು.
ಕೆನರಾ ಬ್ಯಾಂಕ್ನ ರೀಜನಲ್ ಮ್ಯಾನೆಜರ್ ಶ್ರೀಜಿತ್ ಕೆ ಮಾತನಾಡಿ, ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ 256 ಬ್ರಾಂಚ್ಗಳು, ಖಾಸಗಿ ಸೆಕ್ಟರ್ನ 96 ಬ್ರಾಂಚ್ ಗಳು, ಆರ್.ಆರ್.ಬಿ ನ 23 ಬ್ರಾಂಚ್ಗಳು, ಕೋ ಆಪರೇಟಿವ್ ಸೆಕ್ಟರ್ನ 52 ಬ್ರಾಂಚ್ಗಳು ಹಾಗೂ ಸಣ್ಣ ಫೈನಾನ್ಸ್ 3 ಬ್ರಾಂಚ್ ಸೇರಿದಂತೆ ಗ್ರಾಮೀಣ ಭಾಗದಲ್ಲಿ 236, ನಗರ ವ್ಯಾಪ್ತಿಯಲ್ಲಿ 193 ಸೇರಿ ಒಟ್ಟು 429 ಬ್ಯಾಂಕುಗಳು ಹಾಗೂ 491 ಎಟಿಎಂಗಳು ಕಾರ್ಯನಿರ್ವಹಿಸುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಉದಯ್ ಕುಮಾರ್ ಶೆಟ್ಟಿ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ, ಬೆಂಗಳೂರಿನ ಆರ್.ಬಿ.ಐ ನ ಎಫ್.ಐ.ಡಿ.ಡಿ ಸೆಕ್ಷನ್ನ ಟಿ.ಎನ್ ಮ್ಯಾನೇಜರ್ ವೆಂಕಟರಾಮಯ್ಯ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕುಗಳ ಮುಖ್ಯಸ್ಥರುಗಳು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now