ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೂ ಮುನ್ನ ಅಚ್ಚರಿಯ ಆಯ್ಕೆ

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೂ ಮುನ್ನ ಅಚ್ಚರಿಯ ಆಯ್ಕೆ

0Shares

ಲಂಡನ್: ಬಹುನಿರೀಕ್ಷಿತ ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಗೆ ವೇದಿಕೆ ಸಜ್ಜಾಗುತ್ತಿದೆ. ಇದರ ನಡುವೆ ಯುವ ವೇಗಿ ಹರ್ಷಿತ್ ರಾಣಾ ಭಾರತ ತಂಡಕ್ಕೆ 19ನೇ ಆಟಗಾರನಾಗಿ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ಭಾರತ ಎ ತಂಡದ ಇಂಗ್ಲೆಂಡ್‌ನಲ್ಲಿ ಚತುರ್ದಿನ ಪಂದ್ಯ ಆಡಿದ್ದ ಹರ್ಷಿತ್, ನಿರೀತ ನಿರ್ವಹಣೆ ತೋರದಿದ್ದರೂ ಭಾರತ ತಂಡಕ್ಕೆ ಸೇರ್ಪಡೆಗೊಂಡಿರುವುದು ಅಚ್ಚರಿ ಸೃಷ್ಟಿಸಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಈ ಮುನ್ನ 18 ಆಟಗಾರರ ತಂಡವನ್ನು ಹೆಸರಿಸಿತ್ತು. ಅದರಲ್ಲಿ ಐವರು ವೇಗಿಗಳು (ಬುಮ್ರಾ, ಸಿರಾಜ್, ಪ್ರಸಿದ್ಧ ಕೃಷ್ಣ, ಆಕಾಶ್‌ದೀಪ್‌, ಅರ್ಷದೀಪ್) ಸ್ಥಾನ ಪಡೆದಿದ್ದರು. ಇದೀಗ ಹರ್ಷಿತ್ 6ನೇ ವೇಗಿಯಾಗಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‌ನ ವೇಗ ಮತ್ತು ಸ್ವಿಂಗ್ ಬೌಲಿಂಗ್ ಸ್ನೇಹಿ ವಾತಾವರಣದಲ್ಲಿ ಹೆಚ್ಚಿನ ವೇಗಿಗಳನ್ನು ತಂಡದಲ್ಲಿ ಇಟ್ಟುಕೊಳ್ಳುವ ಭಾರತ ಟೀಮ್ ಮ್ಯಾನೇಜ್‌ಮೆಂಟ್ ಯೋಜನೆಯ ಅನ್ವಯ 23 ವರ್ಷದ ಹರ್ಷಿತ್‌ಗೆ ಸ್ಥಾನ ಕಲ್ಪಿಸಲಾಗಿದೆ. ಅಲ್ಲದೆ ಬುಮ್ರಾ ಫಿಟೈಸ್‌ ಕಾರಣದಿಂದಾಗಿ ಸರಣಿಯ ಎಲ್ಲ 5 ಟೆಸ್ಟ್‌ಗಳಲ್ಲಿ ಆಡದ ಕಾರಣ, ಹೆಚ್ಚುವರಿ ವೇಗಿಯ ಅಗತ್ಯ ಕಾಣಿಸಿದೆ. ಹೀಗಾಗಿ ಭಾರತ ಎ ತಂಡದ ಇತರ ಆಟಗಾರರೊಂದಿಗೆ ಅವರು ತವರಿಗೆ ಮರಳದೆ ಇಂಗ್ಲೆಂಡ್‌ನಲ್ಲೇ ಉಳಿದುಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಪರ ಆಡುವ ಹರ್ಷಿತ್ ರಾಣಾ, ಆ ತಂಡದ ಮಾಜಿ ಮೆಂಟರ್ ಆಗಿರುವ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್‌ರ ನೆಚ್ಚಿನ ವೇಗಿಯಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದ ಹರ್ಷಿತ್, 2 ಟೆಸ್ಟ್‌ಗಳಲ್ಲಿ 4 ವಿಕೆಟ್ ಕಬಳಿಸಿದ್ದರು. ಇಂಗ್ಲೆಂಡ್ ಲಯನ್ಸ್ ವಿರುದ್ಧ ಒಂದು ಚತುರ್ದಿನ ಪಂದ್ಯ ಆಡಿದ್ದ ಹರ್ಷಿತ್ 27 ಓವರ್ ಎಸೆದು ಒಂದು ವಿಕೆಟ್ ಮಾತ್ರ ಗಳಿಸಿದ್ದರು. ಅದೂ 10ನೇ ಕ್ರಮಾಂಕದ ಆಟಗಾರನ ವಿಕೆಟ್ ಆಗಿತ್ತು. ಹೀಗಾಗಿ ಲಯದಲ್ಲಿಲ್ಲದ ಹರ್ಷಿತ್‌ಗಿಂತ ಭಾರತ ಎ ಪರ 5 ವಿಕೆಟ್ ಕಬಳಿಸಿ ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಮತ್ತೋರ್ವ ಯುವ ವೇಗಿ ಅಂಶುಲ್ ಕಂಬೋಜ್‌ರನ್ನು ಭಾರತ ತಂಡಕ್ಕೆ ಸೇರಿಸಿಕೊಂಡಿದ್ದರೆ ಉತ್ತಮವಿತ್ತು ಎಂಬ ಮಾತುಗಳು ಕೇಳಿಬಂದಿವೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now