
ಮುಂಬಯಿ (ಆರ್‌ಬಿಐ), ಮುಂಬಯಿ ವಿಶ್ವವಿದ್ಯಾಲಯದ ವಾತಾವರಣ ಬಹಳ ಖುಷಿ ನೀಡಿದೆ. ಪದೇ ಪದೇ ಇಲ್ಲಿ ಬಂದು ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಅನ್ನುವ ಇಚ್ಛೆ ಮೂಡಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೃಹನ್ಮುಂಬಯಿಯಲ್ಲಿ ಮುಂಬಯಿ ವಿಶ್ವವಿದ್ಯಾಲಯ ಮತ್ತು ಚಿಣ್ಣರ ಬಿಂಬ ಸಂಘಟನೆಗಳ ಶ್ರಮ ಅನನ್ಯವಾದುದು. ಮುಂಬಯಿಯಲ್ಲಿ ಕನ್ನಡ ಕಲಿಯುವವರ ಸಂಖ್ಯೆ ಹೆಚ್ಚುತ್ತಿದ್ದು ಇದಕ್ಕೆ ಉಭಯ ಸಂಸ್ಥೆಗಳ ಪ್ರೇರಣೆ ಮತ್ತು ಪ್ರೋತ್ಸಹ ಮಹತ್ತರವಾಗಿದೆ. ಇದರ ಫಲವಾಗಿ ಕನ್ನಡ ಭಾಷೆ, ಸಂಸ್ಕೃತಿ ಮುಂಬಯಿಯಲ್ಲಿ ರಾರಾಜಿಸುತ್ತಿದೆ ಎಂದ ಮುಂಬಯಿಯಲ್ಲಿನ ಪ್ರಸಿದ್ಧ ಉದ್ಯಮಿ, ಬಂಟರ ಸಂಘ ಮುಂಬಯಿ ಇದರ ಮುಖವಾಣಿ ಬಂಟರವಾಣಿ ಮಾಸಿಕದ ಮಾಜಿ ಕಾರ್ಯಧ್ಯಕ್ಷ, ಮಧ್ಯ ಮುಂಬಯಿ ಪ್ರಾದೇಶಿಕ ಸಮಿತಿ ಸಂಯೋಜಕ ರವೀಂದ್ರ ಎಂ.ಭಂಡಾರಿ ತಿಳಿಸಿದರು.

ಇಂದಿಲ್ಲಿ ಶನಿವಾರ ಮುಂಬಯಿ ವಿಶ್ವವಿದ್ಯಾಲಯದ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿ ಇಲ್ಲಿನ ಜೆ.ಪಿ. ನಾಯಕ್ ಭವನದ ಸಭಾಗೃಹದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಇದರ ಕನ್ನಡ ವಿಭಾಗವು ಆಯೋಜಿಸಿದ್ದ ಕನ್ನಡ ಸರ್ಟಿಫಿಕೇಟ್ ಕೋರ್ಸ್ ವಿದ್ಯಾಥಿಗಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭಾರೈಸಿ ಮಾತನಾಡಿ ಮುಂಬಯಿವಾಸಿ ಕನ್ನಡಿಗರು ಕನ್ನಡಕ್ಕಾಗಿ ಬಹಳಷ್ಟು ಕೆಲಸ ಮಾಡುತ್ತಿದ್ದಾರೆ. ನಿಜಕ್ಕೂ ತುಂಬ ಹೆಮ್ಮೆ ಎನಿಸುತ್ತಿದೆ. ನಾವು ಸಾಮಾಜಿಕ ಚಟುವಟಿಕೆಗಳನ್ನು ಮಾತ್ರ ಮಾಡುತ್ತೇವೆ. ಆದರೆ ಮುಂಬಯಿ ವಿವಿ ಕನ್ನಡ ವಿಭಾಗದ ಮೂಲಕ ಜ್ಞಾನವೃದ್ಧಿಯ ಕೆಲಸ ಆಗುತ್ತಿದೆ. ಈ ಮೂಲಕ ಹಲವಾರು ಮಂದಿ ಪ್ರತಿಭಾವಂತರಾಗಿ ಹೊರಹೊಮ್ಮುತ್ತಿರುವುದು ಅಭಿನಂದನೀಯ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಸರ್ಟಿಫಿಕೇಟ್ ಶಿಕ್ಷಕರಾದ ಗೀತಾ ಮಂಜುನಾಥ್ ಮತ್ತು ಕುಮುದಾ ಆಳ್ವ ವೇದಿಕೆಯನ್ನಲಂಕರಿಸಿದ್ದರು.
ದ್ವಿತೀಯ ಕಾರ್ಯಕ್ರಮವಾಗಿಸಿ ನಾಡಿನ ಹಿರಿಯ ಸಾಹಿತಿ ಡಾ| ಹೆಚ್.ಎಸ್.ವೆಂಕಟೇಶ ಮೂರ್ತಿ ಸಂಸ್ಮರಣೆ ಹಾಗೂ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಲಾವಿದೆಯರಾದ ಶೈಲಜಾ ಅಮರನಾಥ ಶೆಟ್ಟಿ ಮತ್ತು ವಿಮಲಾ ದೇವಾಡಿಗ ಹೆಚ್.ಎಸ್.ವಿ ಗೀತ ಗುಂಜನವನ್ನು ಮತ್ತು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಹಾಗೂ ಸಂಶೋಧನ ವಿದ್ಯಾಥಿನಿಯರಾದ ಸುರೇಖಾ ಹರಿಪ್ರಸಾದ್ ಶೆಟ್ಟಿ, ನಳಿನಾ ಪ್ರಸಾದ್, ಅನಿತಾ ತಾಕೋಡೆ ಅವರು ಹೆಚ್‌ಎಸ್‌ವಿ ಅವರ ರಚನೆಗಳ ಪ್ರಸ್ತುತಿಗೈದರು.

ಇತ್ತೀಚೆಗೆ ಅಗಲಿದ ಮುಂಬಯಿಯ ಹಿರಿಯ ಸಾಹಿತಿ, ಸಂಘಟಕ, ನಿವೃತ್ತ ಪ್ರಾಚಾರ್ಯ ಡಾ| ಜಿ.ಡಿ ಜೋಶಿ ಅವರ ಗುಣಗಾನಗೈದ ಡಾ| ಉಪಾಧ್ಯ, ಕನ್ನಡಕ್ಕಾಗಿ ಮತ್ತು ಕನ್ನಡ ಸಾಹಿತ್ಯಕ್ಕಾಗಿ ಜೋಶಿ ಅವರು ಮಾಡಿದ ಸೇವೆಯನ್ನು ಸ್ಮರಿಸಿದರು. ಬಳಿಕ ಪ್ರಸ್ತಾವನೆಗೈದು ವೆಂಕಟೇಶಮೂರ್ತಿ ಅವರ ಕಾವ್ಯದ ಗುಣ ಮೌಲ್ಯಗಳನ್ನು ವಿಶ್ಲೇಷಿಸಿ ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಸೈ ಎನಿಸಿಕೊಂಡವರು. ಅವರ ಕಾವ್ಯಯಾನದ ಸೊಗಸುಗಾರಿಕೆ ವಿಶಿಷ್ಟವಾಗಿತ್ತು ಎಂದು ಹೆಚ್‌ಎಸ್‌ವಿ ಬರವಣಿಗೆಯನ್ನು ಬಣ್ಣಿಸಿದರು. ಅಂತೆಯೇ ಮುಂಬಯಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಥಿಗಳ ಸಾಧನೆಯನ್ನು ಪ್ರಶಂಸಿಸಿ ವಿದ್ಯಾಥಿಗಳು ಲೇಖಕರಾಗಿ ಬೆಳೆಯುತ್ತಿದ್ದಾರೆ ಎಂದರು.
ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ಮತ್ತು ಶೆಟ್ಟಿ ಕೃಷ್ಣರಾಜ್ ಶೆಟ್ಟಿ ವಿಶೇಷ ಆಮಂತ್ರಿತರಾಗಿದ್ದು ಕನ್ನಡ ವಿಭಾಗದ ಕಾರ್ಯಚಟುವಟಿಕೆಗಳಿಗೆ ಸಹಕರಿಸುವ ಮಹನೀಯರನ್ನು ಧನ್ಯತೆಯಿಂದ ನೆನೆಸಿಕೊಂಡ ಡಾ| ಉಪಾಧ್ಯ ಅವರು ರವೀಂದ್ರನಾಥ ಭಂಡಾರಿ ಅವರನ್ನು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಪರವಾಗಿ ಗೌರವಿಸಿದರು. ಡಾ| ಪೂರ್ಣಿಮಾ ಎಸ್.ಶೆಟ್ಟಿ ಉಭಯ ಕಾರ್ಯಕ್ರಮಗಳನ್ನು ನಿರೂಪಿಸಿ, ವಂದಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























