
ಮುಂಬಯಿ (ಆರ್ಬಿಐ), ಜೂ.16: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಗೋಕುಲ, ಸಾಯನ್, ಬಿ. ಎಸ್.ಕೆ.ಬಿ. ಎಸೋಸಿಯೇಶನ್, ಇದರ ಶತಮಾನೋತ್ಸವ ಆಚರಣೆಯ ಅಂಗವಾಗಿ ಸೋಮವಾರ ದಿನಾಂಕ 9.6. 2025 ರಿಂದ ರವಿವಾರ ದಿನಾಂಕ 15.6.2025 ರವರೆಗೆ ಹಮ್ಮಿಕೊಂಡ ತಾಳಮದ್ದಳೆ ಸಪ್ತಾಹವು ಜೂನ್ 15 ರಂದು ಸಂಪನ್ನಗೊಂಡಿತು
ಗೋಕುಲ ಶ್ರೀ ಗೋಪಾಲಕೃಷ್ಣನ ಸನ್ನಿಧಾನದಲ್ಲಿ, ತವರೂರಿನ ನುರಿತ ಅರ್ಥಧಾರಿಗಳಿಂದ, ಪ್ರಸಿದ್ಧ ಭಾಗವತರು ಹಾಗೂ ಹಿಮ್ಮೇಳದವರಿಂದ “ಶ್ರೀ ಕೃಷ್ಣ ಕಥಾಮೃತಮ್” ಎಂಬ ಅರ್ಥಪೂರ್ಣ ಶೀರ್ಷಿಕೆಯಡಿ, ಮೊದಲನೆಯ ದಿನದಿಂದ ಕೊನೆಯ ದಿನದವರೆಗೆ ಕ್ರಮವಾಗಿ ಶ್ರೀ ಕೃಷ್ಣಾವತಾರಣ-ಕಂಸ ವಧೆ, ರುಕ್ಮಿಣೀ ಸ್ವಯಂವರ, ನರಕಾಸುರ ವಧೆ, ಮಾಗಧ ವಧೆ, ಸತ್ವ ಪರೀಕ್ಷೆ, ಶ್ರೀ ಕೃಷ್ಣ ಸಂಧಾನ, ಸುದರ್ಶನ ದರ್ಶನ ಎಂಬ ಪ್ರಸಂಗಗಳಲ್ಲಿ ಶ್ರೀ ಕೃಷ್ಣನ ವೈವಿಧ್ಯಮಯ ವ್ಯಕ್ತಿತ್ವದ ಪರಿಚಯವನ್ನು ಅತ್ಯಂತ ಸೊಗಸಾಗಿ ವ್ಯಾಖ್ಯಾನಿಸಿ ಪ್ರಸ್ತುತ ಪಡಿಸಿದರು. ಭಾಗವತರಾಗಿ ಸುಶ್ರಾವ್ಯ ಕಂಠದ ಸತ್ಯನಾರಾಯಣ ಪುಣಿಂಚಿತ್ತಾಯ, ಚಿನ್ಮಯ ಭಟ್,ಕಲ್ಲಡ್ಕ, ರವಿಚಂದ್ರ ಕನ್ನಡಿಕಟ್ಟೆ, ಮದ್ದಳೆ ವಾದಕರಾಗಿ ಮನಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಚೈತನ್ಯಕೃಷ್ಣ ಪದ್ಯಾಣ, ಚೆಂಡೆಯಲ್ಲಿ ಮುರಾರಿ ಕಡಂಬಳಿತ್ತಾಯ, ರಾಮಪ್ರಕಾಶ ಕಲ್ಲೂರಾಯ, ಚಕ್ರತಾಳದಲ್ಲಿ ಸ್ಥಳೀಯ ಯಕ್ಷಗಾನ ಕಲಾವಿದ ಎಚ್. ಲಕ್ಷ್ಮೀನಾರಾಯಣರವರು ಸಹಕರಿಸಿದರು. ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟ, ವಾಸುದೇವ ರಂಗಾ ಭಟ್ಟ, ಮಧೂರು, ಪಶುಪತಿ ಶಾಸ್ತ್ರಿ ಶಿರಂಕಲ್ಲು, ಡಾ| ಶಿವಕುಮಾರ್ ಅಳಗೋಡು, ಸರ್ಪ0ಗಳ ಈಶ್ವರ ಭಟ್ಟ, ಶ್ರೀರಮಣ ಆಚಾರ್ಯ, ಕಾರ್ಕಳ, ಪುತ್ತಿಗೆ ಬಾಲಕೃಷ್ಣ ಭಟ್ಟರವರು ಭಾಗವಹಿಸಿದರು.

ಡಾ| ಸುರೇಶ್ ರಾವ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರೋಪ ಸಮಾರಂಭದಲ್ಲಿ ಉಪಾಧ್ಯಕ್ಷರುಗಳಾದ ಅವಿನಾಶ್ ಶಾಸ್ತ್ರಿ, ವಾಮನ್ ಹೊಳ್ಳ, ಗೌ.ಕಾರ್ಯದರ್ಶಿ ಅನಂತಪದ್ಮನಾಭ ಪೆÇೀತಿ. ಕೋಶಾಧಿಕಾರಿ ಹರಿದಾಸ್ ಭಟ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿ, ವಿಶ್ವಸ್ತರು, ಬಿ.ರಮಾನಂದ ರಾವ್, ಜಗದೀಶ್ಚಂದ್ರ ಕುಮಾರ್, ಆರ್. ಲಕ್ಷ್ಮೀಶ್ ಭಟ್, ಹಾಗೂ ತಾಳಮದ್ದಳೆ ತಂಡದವರು ಉಪಸ್ಥಿತರಿದ್ದರು. ಅಧ್ಯಕ್ಷರು, ಪದಾಧಿಕಾರಿಗಳು, ಮಾಜಿ ಅಧ್ಯಕ್ಷ ಕೆ, ಸುಬ್ಬಣ್ಣ ರಾವ್ ವೇದಮೂರ್ತಿ ಸುಬ್ರಹ್ಮಣ್ಯ ಐತಾಳ್, ಹರಿ ಭಟ್, ರಾಮವಿಠಲ ಕಲ್ಲೂರಾಯರವರು ತಾಳಮದ್ದಳೆ ತಂಡದ ಕಲಾವಿದರನ್ನು ಶಾಲು ಹೊದಿಸಿ, ಫಲವಸ್ತುಗಳನ್ನಿತ್ತು ಗೌರವಿಸಿದರು.

ಡಾ| ಸುರೇಶ್ ಎಸ್ ರಾವ್ ರವರು ಈ ಸಂದರ್ಭದಲ್ಲಿ ಮಾತನಾಡುತ್ತಾ ಶತಮಾನೋತ್ಸವದ ಈ ಶುಭ ಸಂದರ್ಭದಲ್ಲಿ, ಈ ಏಳು ದಿವಸಗಳಲ್ಲಿ ಶ್ರೀಕೃಷ್ಣನ ಕಥಾಮೃತವನ್ನು ತಾಳಮದ್ದಳೆಯ ಮೂಲಕ ತಮ್ಮ ಪ್ರಗಲ್ಭ ಪಾಂಡಿತ್ಯದಿಂದ ವಿಶಿಷ್ಠ ಜ್ಞಾನವನ್ನು ನಮಗೆಲ್ಲಾ ಅರ್ಥಪೂರ್ಣವಾಗಿ ವಿವರಿಸಿ, ನಮ್ಮ ಜ್ಞಾನಭಂಡಾರವನ್ನು ವೃದ್ಧಿಗೊಳಿಸಿದ ಎಲ್ಲಾ ಕಲಾವಿದರಿಗೂ ನಾವು ಅತ್ಯಂತ ಕೃತಜ್ಞರಾಗಿದ್ದೇವೆ. ಎಂದರು.

ಹಿರಿಯ ಅರ್ಥಧಾರಿಗಳಾದ ಸುಣ್ಣಂಬಳ ವಿಶ್ವೇಶ್ವರ ಭಟ್ಟ ಮತ್ತು ವಾಸುದೇವ ರಂಗಾ ಭಟ್ಟರವರು ತಮ್ಮನ್ನು ಊರಿನಿಂದ ಕರೆಸಿ, ಅತ್ಯಂತ ಸುವ್ಯವಸ್ಥಿತವಾಗಿ ಈ ಏಳು ದಿನಗಳ ಕಾರ್ಯಕ್ರಮವು ಸುಲಲಿತವಾಗಿ ನಡೆಯುವಂತೆ ಎಲ್ಲಾ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಒದಗಿಸಿ, ಶತಮಾನೋತ್ಸವಾಚರಣೆ ಅರ್ಥಪೂರ್ವವಾಗಿ ಆಚರಿಸಿದ ಸಂಸ್ಥೆ ಅಭಿನಂದನೀಯವೆಂದು ಹೇಳುತ್ತಾ ಸಂಸ್ಥೆಯ ಅಧ್ಯಕ್ಷರು ಹಾಗೂ ಸಂಬಂಧ ಪಟ್ಟ ಎಲ್ಲವರಿಗೂ ತಮ್ಮ ತಂಡದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ನಂತರ ಅಧ್ಯಕ್ಷರು ಹಾಗೂ ವೇದಿಕೆಯಲ್ಲಿದ್ದ ಗಣ್ಯರು ತಾಳಮದ್ದಳೆ ಸಪ್ತಾಹದ ಪ್ರಾಯೋಜಕರಾದ ಯು. ಆರ್. ಭಟ್, ಉಷಾ ಭಟ್ ದಂಪತಿಯನ್ನು ಶಾಲು ಹೊದಿಸಿ, ಫಲವಸ್ತುಗಳನ್ನಿತ್ತು ಸನ್ಮಾನಿಸಿದರು. ಹರಿದಾಸ್ ಭಟ್ ಧನ್ಯವಾದ ಸಮರ್ಪಿಸಿದರು. ಸಪ್ತಾಹದ ಕಾಲದಲ್ಲಿ ಪ್ರತಿದಿನವೂ ನೆರೆದಿದ್ದ ಕಲಾಸಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























