
ಉಡುಪಿ, ಜೂನ್ 05 : ಜಿಲ್ಲೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತದಲ್ಲಿ ಸಾವಿರ ಗಂಡುಮಕ್ಕಳಿಗೆ 978 ಹೆಣ್ಣು ಮಕ್ಕಳ ಜನನವಿದ್ದು, ಸರಾಸರಿ ಅನುಪಾತದಲ್ಲಿ ಉಡುಪಿ ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಹೆಣ್ಣು ಮಕ್ಕಳ ಪ್ರಮಾಣ ಇನ್ನೂ ಹೆಚ್ಚಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ತಿಳಿಸಿದರು.
ಅವರು ಬುಧವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆಯ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
2023-24 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 5845 ಗಂಡು ಮಕ್ಕಳ ಜನನ, 5827 ಹೆಣ್ಣು ಮಕ್ಕಳ ಜನನವಾಗಿ 1000 ಗಂಡು ಮಕ್ಕಳಿಗೆ 968 ಹೆಣ್ಣು ಮಕ್ಕಳ ಜನನವಾಗಿದೆ. 2024-25 ನೇ ಸಾಲಿನಲ್ಲಿ ಈ ಪ್ರಮಾಣವು 978 ಇದ್ದು, ರಾಜ್ಯದಲ್ಲಿಯೇ ಲಿಂಗಾನುಪಾತದಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದೆ. ದಾವಣಗೆರೆ, ರಾಮನಗರ. ಶಿವಮೊಗ್ಗ ಕ್ರಮವಾಗಿ ನಂತರದ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಅನುಪಾತವು ಇನ್ನೂ ಸಹ ಸಮಾನುಪಾತ ಆಗಬೇಕು ಎಂದರು.
ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆಯಡಿ ಜಿಲ್ಲೆಯಾದ್ಯಂತ ಮಾಹಿತಿ ಶಿಕ್ಷಣ ಚಟುವಟಿಕೆಗಳನ್ನು ನಡೆಸಬೇಕು. ಹೆಚ್ಚು ಲಿಂಗಾನುಪಾತ ಇರುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚು ಹೆಚ್ಚು ಅರಿವು ಕಾರ್ಯಕ್ರಮಗಳು ಮಾಡಬೇಕೆಂದರು.
ಪ್ರತಿಯೊಂದು ಸ್ಕ್ಯಾನಿಂಗ್ ಸೆಂಟರ್ಗಳು ಸರಕಾರದ ಮಾರ್ಗ ಸೂಚಿ ಅನ್ವಯ ದಾಖಲೆಗಳನ್ನು ನಿರ್ವಹಣೆ ಮಾಡಬೇಕು. ಒಂದೊಮ್ಮೆ ಇದನ್ನು ಉಲ್ಲಂಘಿಸಿದಲ್ಲಿ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದ ಅವರು, ಕಮಿಟಿಯ ಸದಸ್ಯರುಗಳು ಆಗಿಂದಾಗ್ಗೆ ಸ್ಕ್ಯಾನಿಂಗ್ ಸೆಂಟರ್ಗಳಿಗೆ ಅನಿರೀಕ್ಷಿತ ಭೇಟಿ ನೀಡಬೇಕು ಎಂದರು.
ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಹಚ್ಚುವುದು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಭ್ರೂಣಲಿಂಗ ಪತ್ತೆಯಿಂದ ಹೆಣ್ಣು ಮತ್ತು ಗಂಡು ಮಕ್ಕಳ ಅನುಪಾತದಲ್ಲಿ ಹೆಚ್ಚಿನ ವ್ಯತ್ಯಾಸವಾಗಿ ಸಮಾಜದಲ್ಲಿ ಅಸಮತೋಲನ ಉಂಟಾಗಿ ಮಹಿಳೆಯರ ಮೇಲೆ ಅಪರಾಧಿಕ ಪ್ರಕರಣಗಳೂ ಸಹ ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ. ಇದಕ್ಕೆ ಆಸ್ಪದ ನೀಡಬಾರದು ಎಂದರು.
ಭ್ರೂಣಲಿಂಗ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧ. ವೈದ್ಯಾಧಿಕಾರಿಗಳು ಹಾಗೂ ಸ್ಕಾ್ಯನಿಂಗ್ ಸೆಂಟರ್ಗಳ ಮಾಲೀಕರುಗಳಿಗೆ ಹತ್ತು ಸಾವಿರ ರೂ. ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಇದೇ ಅಪರಾಧ ಪುನರಾವರ್ತನೆಯಾದಲ್ಲಿ ಐವತ್ತು ಸಾವಿರ ರೂ. ದಂಡದೊಂದಿಗೆ 5 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀರಾಮರಾವ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್, ಡಿ.ಎಸ್.ಓ ಡಾ. ನಾಗರತ್ನ, ಜಿಲ್ಲಾ ಏಡ್ಸ್ ರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಸರ್ಜನ್ ಡಾ. ಹೆಚ್.ಅಶೋಕ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಕೆ.ಎಂ.ಸಿ.ಯ ತಜ್ಞ ವೈದ್ಯರುಗಳು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























