ಜಿಲ್ಲೆಯಲ್ಲಿ ಅಕ್ಕ ಸಂಜೀವಿನಿ ಅಂಗಡಿ ಪ್ರಾರಂಭ

ಜಿಲ್ಲೆಯಲ್ಲಿ ಅಕ್ಕ ಸಂಜೀವಿನಿ ಅಂಗಡಿ ಪ್ರಾರಂಭ

0Shares

ಉಡುಪಿ, ಮೇ 23 : ಜಿಲ್ಲೆಯ ಸಂಜೀವಿನಿ ಯೋಜನೆ ವಿನೂತನ ಕಾರ್ಯಕ್ರಮಗಳಿಂದ ಪರಿಚಿತವಾಗಿದ್ದು, ಇಲ್ಲಿ ನಡೆಯುವ ಕಾರ್ಯಕ್ರಮಗಳು, ಚಟುವಟಿಕೆಗಳು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ. ವಿವಿಧ ನವೀನ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡುವುದರೊಂದಿಗೆ ರಾಜ್ಯಕ್ಕೆ ಮಾದರಿಯಾಗಿದೆ.

ಜಿಲ್ಲೆಯಲ್ಲಿ ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರು ತಯಾರಿಸುತ್ತಿರುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಅವರು ಉದ್ಯಮಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಂಜೀವಿನಿ ಮಾರಾಟ ಮಳಿಗೆಯನ್ನು ಸಂಜೀವಿನಿ ಮಹಿಳೆಯರಿಂದ ಸ್ಥಾಪಿಸಿ ಅದನ್ನು ನಿರ್ವಹಣೆ ಮಾಡಿ ಈ ಮಹಿಳೆಯರು ಉದ್ಯಮಿಗಳಾಗುವುದರ ಜೊತೆಗೆ ಇತರ ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಮಾರಾಟ ಮಳಿಗೆಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದ್ದು, ಮೊದಲ ಹಂತದಲ್ಲಿ ಕಾಪು ತಾಲೂಕಿನ ಶಿರ್ವ ಹಾಗೂ ಕಟಪಾಡಿ ಗ್ರಾಮ ಪಂಚಾಯತ್ ಅನ್ನು ಮಾದರಿಯಾಗಿ ಗುರುತಿಸಿ, ಈ ಎರಡು ಗ್ರಾಮ ಪಂಚಾಯತ್ನಲ್ಲಿ ಮಳಿಗೆಗಳನ್ನು ನಿರ್ಮಿಸಿ ಅಕ್ಕ ಸಂಜೀವಿನಿ ಅಂಗಡಿ ಎಂಬ ಹೆಸರಿನೊಂದಿಗೆ, ಸಾರ್ವಜನಿಕರಿಗೆ ಸಂಜೀವಿನಿ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಪರಿಚಯಿಸಲು ನಿರ್ಧರಿಸಲಾಗಿದ್ದು, ಗುರುವಾರ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶಿರ್ವ ಹಾಗೂ ಕಟಪಾಡಿಯಲ್ಲಿ ನೂತನವಾಗಿ ನಿರ್ಮಿಸಿದ ಅಕ್ಕ ಸಂಜೀವಿನಿ ಅಂಗಡಿಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಇಂದು ಮನೆ ಕೆಲಸಗಳಿಗಷ್ಟೇ ಮಾತ್ರ ಸೀಮಿತವಾಗಿಲ್ಲದೆ ಉದ್ಯಮಿಗಳಾಗಿ ಹೊರ ಹೋಮ್ಮತ್ತಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆಯರು ಪ್ರತಿನಿದಿಸುವುದರೊಂದಿಗೆ ಪುರುಷ ಪ್ರಧಾನ ಸಮಾಜ ಬದಲು ಮಹಿಳಾ ಪ್ರಧಾನ ಸಮಾಜ ನಿರ್ಮಾಣವಾಗುತ್ತಿದೆ. ಮಹಿಳೆಯರು ಮನೆಗಷ್ಟೇ ನಾಯಕರಲ್ಲ ಸಮುದಾಯದ ನಾಯಕರಾಗಿ ಸಂಜೀವಿನಿ ಯೋಜನೆಯಿಂದ ಗುರುತಿಸಿ ಕೊಳ್ಳುತ್ತಿದ್ದಾರೆ. ಇದೆ ಮಾದರಿಯಲ್ಲಿ ಬೇರೆ ಬೇರೆ ಸ್ಥಳದಲ್ಲಿ ಅಕ್ಕ ಸಂಜೀವಿನಿ ಅಂಗಡಿ ಪ್ರಾರಂಭಗೊಳ್ಳಲಿ ಎಂದು ಮಹಿಳಾ ಉದ್ಯಮಿದಾರರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಿರ್ವ ಹಾಗೂ ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶ್ರೀನಿವಾಸ್ ರಾವ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಯವರು, ಜಿಲ್ಲಾ ಹಾಗೂ ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿಗಳು, ಸಂಜೀವಿನಿ ಯೋಜನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now