ಶಿಕ್ಷಣದ ಜೊತೆಗೆ ನೈತಿಕ ಸಂಸ್ಕಾರ ಬೆಳೆಸಿಕೊಳ್ಳಿ: ಶಾಸಕ ವೇದವ್ಯಾಸ ಕಾಮತ್‌

ಶಿಕ್ಷಣದ ಜೊತೆಗೆ ನೈತಿಕ ಸಂಸ್ಕಾರ ಬೆಳೆಸಿಕೊಳ್ಳಿ: ಶಾಸಕ ವೇದವ್ಯಾಸ ಕಾಮತ್‌

0Shares

ಮಂಗಳೂರು: ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಕೇವಲ ಶಿಕ್ಷಣಕ್ಕೆ ಮಾತ್ರ ಒತ್ತು ಕೊಡದೇ ಬದುಕಿನ ಸೈತಿಕ ಸಂಸ್ಕಾರವನ್ನು ಕಲಿಯುವ ನಿಟ್ಟಿನಲ್ಲಿ ಹೆಚ್ಚು ಗಮನ ಕೊಡಬೇಕಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದು ೧೨೦ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಭವಿಷ್ಯದ ಅವಕಾಶಕ್ಕಾಗಿ ಇಂದು ಕಾಲೇಜಿನ ವೇದಿಕೆಯನ್ನು ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳಿ. ಎಲ್ಲಾ ವಿಚಾರಗಳು ಕೇವಲ ಪಠ್ಯಪುಸ್ತಕದಲ್ಲಿ ಮಾತ್ರವೇ ಸಿಗುವುದಿಲ್ಲ. ಅದಕ್ಕಾಗಿ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ಬದುಕಿಲ್ಲೂ ಉತ್ತೀರ್ಣವಾಗುವಂತೆ ನೋಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಗುರು ಹಿರಿಯರನ್ನು ಮನಃಪೂರ್ವಕವಾಗಿ ಗೌರವಿಸುವ ಮೂಲಕ ಬದುಕಿನಲ್ಲಿ ಉತ್ತಮ ಮಾರ್ಗದಲ್ಲಿ ನಡೆಯುವ ಸಂಸ್ಕಾರ ರೂಢಿಸಿಕೊಳ್ಳಿ. ನಮ್ಮ ನೆಲ, ಜಲ, ಸಂಸ್ಕೃತಿಗೆ ಯಾವುದೇ ರೀತಿಯ ಧಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕು. ದೃಷ್ಟಿಕೋನದಲ್ಲಿ ಚಂಚಲ ಸ್ವಭಾವ ಬೆಳೆಸಿಕೊಳ್ಳದೇ ದೃಡಸಂಕಲ್ಪದೊಂದಿಗೆ ಏಕಾಗ್ರತೆಯಿಂದ ಸಾಧನೆ ಕಡೆಗೆ ಮುಖ ಮಾಡಬೇಕಿದೆ. ಸಾಮಾಜಿಕ ಮಾಧ್ಯಮವನ್ನೇ ಚಟವಾಗಿಸಿಕೊಳ್ಳದೇ ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ವಿಶ್ವವಿದ್ಯಾನಿಲಯ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರ್ನಲ್‌ ಶರತ್‌ ಭಂಡಾರಿ, ಇಂದಿನ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಕಡಿಮೆಯಾಗುತ್ತಿದ್ದು, ಪದವಿ ಸಿಕ್ಷಣ ಪಡೆಯುವ ಹಂತದಲ್ಲೇ ಬದುಕಿನಲ್ಲಿ ಒಂದಷ್ಟು ಶಿಸ್ತು ರೂಢಿಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಹಾದಿಯನ್ನು ಹಿಡಿಯಬೇಕು. ಪರಿಸರ ಕಾಳಜಿ, ಆಹಾರ ಸಂರಕ್ಷಣೆ, ದೇಶ ಸೇವೆಯಂತಹ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿದ್ಯಾರ್ಥಿ ಜೀವನದ ನೆನಪುಗಳನ್ನು ಸಾಮಾಜಿಕ ಅರಣ್ಯ ಜಿಲ್ಲಾ ಪಂಚಾಯತ್‌ನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್‌ ಕುಮಾರ್‌ ಪೈ, ತಮ್ಮ ಕಾಲೇಜು ದಿನಗಳನ್ನು ಹಾಗೂ ತರಗತಿಗಳಲ್ಲಿ ಪಾಠ ಪ್ರವಚನ ಮಾಡಿದ ಅಧ್ಯಾಪಕರನ್ನು ನೆನಪಿಸಿಕೊಂಡರು. ಒಬ್ಬ ಉಪನ್ಯಾಸಕ ಮನಸ್ಸು ಮಾಡಿದರೆ ಎಂತಹ ಸಾಧಕನನ್ನೂ ತಯಾರು ಮಾಡುವ ಸಾಮರ್ಥ ಹೊಂದಿರುತ್ತಾನೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಕಲಿಕೆಯೂ ಸಾಗಬೇಕು. ಆಗ ಮಾತ್ರ ಬದುಕಿನಲ್ಲಿ ನಿಗದಿತ ಗುರಿ ತಲುಪಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಹಳೆ ವಿದ್ಯಾರ್ಥಿಗಳ ಸಹಾಯ ಹಾಗೂ ಸಹಕಾರವನ್ನು ನೆನದು, ವಿದ್ಯಾರ್ಥಿಗಳು ತಾವು ಕಲಿತ ಕಾಲೇಜಿನ ಏಳ್ಗೆಗೆ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ೨೦೨೪-೨೫ನೇ ಶೈಕ್ಷಣಿಕ ಸಾಲಿನಲ್ಲಿ ಎನ್‌ಎಸ್‌ಎಸ್‌ ಮತ್ತು ಎನ್‌ಸಿಸಿಯಲ್ಲಿ ಉತ್ತಮ ಸಾಧನೆ ಮಾಡಿದ ಸೀನಿಯರ್‌ ಕೆಡೆಟ್‌ ಕ್ಯಾಪ್ಟನ್‌ ಧನ್‌ಪತ್‌ ಕುಮಾರ್, ಕೆಡೆಟ್‌ ಕ್ಯಾಪ್ಟನ್‌ ಪಂಚಮಿ ಪಿ.ಎಚ್., ಕೆಡೆಟ್‌ ಮೋನಿಷಾ, ಕೆಡೆಟ್‌ ಶ್ರೀನಿವಾಸ್‌ ಪಿ., ಸ್ವಾತಿ ನಾಯಕ್‌ ಇವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿ ಸಂಘದ ಸಹ ನಿರ್ದೇಶಕ ಪ್ರೊ. ಜಯವಂತ ನಾಯಕ್‌, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾತ್ವಿಕ್‌, ಕಾರ್ಯದರ್ಶಿ ಕೀರ್ತನ್‌, ಸಹ ಕಾರ್ಯದರ್ಶಿ ನಂದಿತಾ ಎಸ್., ಲಲಿತ ಕಲಾ ಸಂಘದ ಕಾರ್ಯದರ್ಶಿ ಪೂಜಾ ಶೆಟ್ಟಿ, ಲಲಿತ ಕಲಾ ಸಂಘದ ಸಹ ಕಾರ್ಯದರ್ಶಿ ಅನನ್ಯ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು, ಹಳೆ ವಿದ್ಯಾರ್ಥಿಗಳು, ಪೂರ್ವತಮ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಹಾಜರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now