ಕಲೆ ಮೂಲಕ ಸಂದೇಶ ಉತ್ತಮ ನೀಡಬಹುದು: ಚಂದ್ರಶೇಖರ ಕೆ. ಶೆಟ್ಟಿ

ಕಲೆ ಮೂಲಕ ಸಂದೇಶ ಉತ್ತಮ ನೀಡಬಹುದು: ಚಂದ್ರಶೇಖರ ಕೆ. ಶೆಟ್ಟಿ

0Shares

ಮಂಗಳೂರು, ಮೇ ೨೦: ಕಲೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಲು ಸಾಧ್ಯವಿದೆ. ಹಾಗಾಗಿ ಅವುಗಳನ್ನು ವಿರೂಪಗೊಳಿಸುವ ಕೆಲಸ ಮಾಡಬಾರದು ಎಂದು ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಕೆ. ಶೆಟ್ಟಿ ಅವರು ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ 202೪-2೫ನೇ ಶೈಕ್ಷಣಿಕ ಸಾಲಿನ ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಕಲಾವಿದರು ಅವಿದ್ಯಾವಂತರಾಗಿದ್ದರೂ ತಮ್ಮ ಬದುಕಿನಲ್ಲಿ ನೈತಿಕ ಪ್ರಜ್ಞೆಯನ್ನು ಹೊಂದಿದ್ದರು. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮನಸ್ಸನ್ನು ವಿರೂಪಗೊಳಿಸುವ ಕೆಲಸ ಮಾಡುತ್ತಿರುವುದು ವಿಪರ್ಯಾಸ. ಅದರ ಬದಲಾಗಿ ಇಂತಹ ಕೆಲಸಕ್ಕೆ ಕೈ ಹಾಕದೇ ಉತ್ತಮ ಸಂದೇಶ ನೀಡುವ ಕೆಲಸವಾಗಬೇಕಿದೆ ಎಂದು ಸಲಹೆ ನೀಡಿದರು.

ಬದುಕಿನಲ್ಲಿ ಆಡಂಬರಕ್ಕೆ ಹೆಚ್ಚು ಮಹತ್ವ ನೀಡದೇ, ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿ. ಆಗ ಬದುಕಿನಲ್ಲಿ ಎಷ್ಟು ಎತ್ತರಕ್ಕೆ ಬೇಕಾದರು ಬೆಳೆಯಲು ಸಾಧ್ಯವಿದೆ. ಉತ್ತಮ ಶಿಕ್ಷಣಕ್ಕಾಗಿ ಹೆಚ್ಚು ಸಮಯ ವಿನಿಯೋಗಿಸುವಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಭುತ ಕಾಲದ ಅನುಭವದ ಜೊತೆಗೆ ಪ್ರಜ್ವಲ ಭವಿಷ್ಯದ ಕಡೆಗೆ ಸಾಗಬೇಕಿದೆ. ತಂತ್ರಜ್ಞಾನದ ಬೆಳೆವಣಿಗೆಯಿಂದಾಗಿ ಕಲಾ ಪ್ರಕಾರಗಳಿಗೆ ಹೆಚ್ಚಿನ ಮಹತ್ವ ಬಂದಿದೆ. ಆ ನಿಟ್ಟಿನಲ್ಲಿ ಎಲ್ಲರೂ ಗಮನ ನೀಡಬೇಕಿದೆ. ಸಂಕಷ್ಟದ ಸಮಯದಲ್ಲಿ ಧೈರ್ಯದಿಂದ ಮುಂದೆ ಸಾಗಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್‌., ಪ್ರತಿಭೆ ಯಾರ ಸ್ವತ್ತೂ ಅಲ್ಲ, ಅವಕಾಶ ಸಿಕ್ಕರೆ ಅದು ಎಲ್ಲಿಯೂ ಅನಾವರಣಗೊಳ್ಳುತ್ತದೆ.

ಪ್ರತಿಯೊಬ್ಬ ವಿದ್ಯಾರ್ಥಿಯೂ ಸಂಸ್ಥೆಯ ಪ್ರಾಚೀನತೆ ಮತ್ತು ಪರಂಪರೆಯನ್ನು ಮೆಲುಕು ಹಾಕುವ ಮೂಲಕ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಬೇಕಿದೆ. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಆಶಿಸಿದರು.

ವಿದ್ಯಾರ್ಥಿ ಸಂಘದ ಸಹ ನಿರ್ದೇಶಕ ಪ್ರೊ. ಜಯವಂತ ನಾಯಕ್‌, ಲಲಿತ ಕಲಾ ಸಂಘದ ಸಹ ನಿರ್ದೇಶಕಿ ಡಾ. ನಾಗರತ್ನ ಕೆ.ಎ., ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾತ್ವಿಕ್‌, ಕಾರ್ಯದರ್ಶಿ ಕೀರ್ತನ್‌, ಸಹ ಕಾರ್ಯದರ್ಶಿ ನಂದಿತಾ ಎಸ್‌., ಲಲಿತ ಕಲಾ ಸಂಘದ ಕಾರ್ಯದರ್ಶಿ ಪೂಜಾ ಶೆಟ್ಟಿ, ಸಹ ಕಾರ್ಯದರ್ಶಿ ಅನನ್ಯ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now