ವೇದದ ಸಾರವನ್ನು ಜಗತ್ತಿಗೆ ಸಾರಿದವರು ಶಂಕರಾಚಾರ್ಯರು : ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

ವೇದದ ಸಾರವನ್ನು ಜಗತ್ತಿಗೆ ಸಾರಿದವರು ಶಂಕರಾಚಾರ್ಯರು : ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

0Shares

ಉಡುಪಿ, : ಸಮಾಜದ ಏಳಿಗೆಗಾಗಿ ಹಾಗೂ ಧರ್ಮದ ರಕ್ಷಣೆಗಾಗಿ ದೇಶದಾದ್ಯಂತ ಸಂಚರಿಸಿ, ವೇದದ ಸಾರವನ್ನು ಜಗತ್ತಿಗೆ ಸಾರಿರುವ ಶಂಕರಾಚಾರ್ಯರ ಜೀವನ ಸಾಧನೆ ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಶಂಕರಾಚಾರ್ಯಯ ಭಾವಚಿತ್ರಕ್ಕೆ ಪುಸ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.

ಅದ್ವೈತ ಮತದ ಪ್ರತಿಪಾದಕ ಆದಿ ಶಂಕರಾಚಾರ್ಯರು. ನಂಬಿಕೆ ಮತ್ತು ಸಮಗ್ರತೆ ಕ್ಷೀಣಿಸುತ್ತಿದ್ದ ಸಂದರ್ಭದಲ್ಲಿ ಭಾರತದ ಆಧ್ಯಾತ್ಮಿಕ ಪರಂಪರೆಗೆ ರಕ್ಷಣೆ ನೀಡಿದ ಇವರು, ಮನುಷ್ಯ ತನ್ನನ್ನು ತಾನು ಅರಿತುಕೊಂಡು, ಸಮಾಜ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಹೊಂದಾಣಿಕೆ ಜೀವನ ನಡೆಸುವುದರೊಂದಿಗೆ ಸಮಾಜದ ಅಭಿವೃದ್ಧಿ ಸಾಧಿಸಬಹುದಾದ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ಶಂಕರಾಚಾರ್ಯರು ನಡೆದು ಬಂದ ಹಾದಿಯನ್ನು ನಾವೆಲ್ಲರೂ ಅನುಸರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶ್ರೀನಿವಾಸ ರಾವ್ ಮಾತನಾಡಿ, ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಪ್ರತಿಪಾದನೆ ಮಾಡಿದಂತಹ ಆಧ್ಯಾತ್ಮಿಕ ಗುರು ಶಂಕರಾಚಾರ್ಯರು. ಅತ್ಯಂತ ಕಡಿಮೆ ಜೀವತಾವಧಿಯಲ್ಲಿ ಜೀವಿಸಿದರೂ ಸಹ ಮಹಾನ್ ಸಾಧನೆ ಮಾಡಿದ ಇವರು, ಎಲ್ಲಾ ಜಾತಿ, ಧರ್ಮದವರು ಒಂದಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ. ಮಹನೀಯರುಗಳು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸುವುದರ ಜೊತೆಗೆ ಅವರ ಜೀವನಸಾಧನೆಗಳನ್ನು ನಾವೆಲ್ಲರೂ ಮುಂದುವರೆಸಿಕೊಂಡು ನಡೆದಾಗ ಜಯಂತಿ ಕಾರ್ಯಕ್ರಮಗಳು ಅರ್ಥಪೂರ್ಣವಾಗುತ್ತವೆ ಎಂದರು.

ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ ಎಸ್ ಶಾಸ್ತ್ರೀ ಉಪನ್ಯಾಸ ನೀಡಿ ಮಾತನಾಡುತ್ತಾ, ಕೇರಳದ ಕಾಲಟಿ ಯಲ್ಲಿ ಜನಿಸಿದ ಶಂಕರರು, ಸನಾತನ ಹಿಂದೂ ಧರ್ಮದ ಉಳಿವು ಮತ್ತು ಬೆಳವಣಿಗೆಗೆ ಇವರ ಕೊಡುಗೆ ಅಪಾರವಾದುದು. ಕೇವಲ ಮೂವತ್ತೆರೆಡು ವರ್ಷ ಜೀವಿಸಿದ ಶಂಕರರು, ಇಡೀ ದೇಶದ ಕ್ಷೇಮವನ್ನು ಹಾಗೂ ಅನೇಕ ಅನುಯಾಯಿಗಳು, ಶಿಷ್ಯರನ್ನು ಸಂಪಾದಿಸಿದ್ದಾರೆ ಎಂದರು.

ಬಾಲ್ಯದಲ್ಲಿಯೇ ನಾಲ್ಕು ವೇದಗಳಲ್ಲಿ ಪರಿಣಿತರಾಗಿದ್ದ ಶಂಕರರು, ತಮ್ಮ ಹದಿನಾರನೇ ವರ್ಷದಲ್ಲಿ ಶಾಸ್ತ್ರ ರಚನೆ ಮಾಡುವುದರೊಂದಿಗೆ, ಪ್ರಪ್ರಥಮವಾಗಿ ವೇದಗಳಲ್ಲಿನ ಉಪನಿಷತ್ತುಗಳಿಗೆ ಬ್ರಹ್ಮಸೂತ್ರಗಳನ್ನು ವ್ಯಾಖ್ಯಾನ ಮಾಡಿದ್ದರು. ಜನಸಾಮಾನ್ಯರಿಗೆ ಭಕ್ತಿ, ಜ್ಞಾನ ಮತ್ತು ಕರ್ಮ ಸಿದ್ಧಾಂತವನ್ನು ಬೋಧಿಸುವುದರ ಮೂಲಕ ಶ್ಲೋಕಗಳು ಹಾಗೂ ಉಪನಿಷತ್ತುಗಳನ್ನು ಅಂದಿನ ಕಾಲದ ಸುಲಭ ಭಾಷೆಯಾದ ಸಂಸ್ಕೃತದಲ್ಲಿ ಬೋಧಿಸಿದ್ದಾರೆ ಎಂದರು.

ಅದ್ವೈತ ಸಿದ್ಧಾಂತವನ್ನು ದೇಶದಾದ್ಯಂತ ಪ್ರಚಾರ ಮಾಡುವ ಸಂದರ್ಭದಲ್ಲಿ ಮೂರು ಬಾರಿ ಇಡೀ ಭಾರತ ದೇಶದಲ್ಲಿ ಸಂಚಾರ ಮಾಡುವುದರೊಂದಿಗೆ ಅನೇಕ ಮಠಗಳನ್ನು ಸ್ಥಾಪಿಸಿದ್ದಾರೆ. ಅವುಗಳಲ್ಲಿ ಶೃಂಗೇರಿಯ ಶಾರದ ಪೀಠ, ಓರಿಸ್ಸಾದ ಪುರಿಯ ಗೋವರ್ಧನ ಪೀಠ, ಗುಜರಾತ್ನ ಕಾಳಿಕಾ ಪೀಠ ಹಾಗೂ ಉತ್ತರಾಖಂಡ್ನ ಜ್ಯೋತಿರ್ ಪೀಠ ಪ್ರಮುಖವಾದುದು. ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆಗಳನ್ನು ದೂರಮಾಡಿ, ಸದ್ಭುದಿಯನ್ನು ಬೋಧಿಸಿದ್ದಾರೆ. ಕ್ರಿಯೆಯ ಕೊನೆಯ ಗುರಿ ಫಲಪ್ರಾಪ್ತಿಯಾಗಿದೆ. ಜ್ಞಾನವೊಂದೇ ಮೋಕ್ಷದ ಮಾರ್ಗ ಎಂದು ಉಪದೇಶ ಮಾಡಿದ್ದಾರೆ ಎಂದ ಅವರು, ರಾಷ್ಟ್ರದ ಏಕೀಕರಣ ಮಾಡುವಲ್ಲಿ ಪ್ರಪ್ರಥಮ ಪ್ರಯತ್ನ ಮಾಡಿದವರು ಶಂಕರಾಚಾರ್ಯರು ಎಂದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಮಂಜುನಾಥ್ ಶೆಟ್ಟಿಗಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಂಕರ ತತ್ವ ಪ್ರಸಾರ ಅನುಯಾಯಿಗಳು, ವಿವಿಧ ಸಮುದಾಯದ ಮುಖಂಡರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ತೇಜೇಶ್ ಬಂಗೇರ ನಿರೂಪಿಸಿದರೆ, ವಿಶ್ವನಾಥ ಶ್ಯಾನುಭೋಗ್ ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now