ಬಸವಣ್ಣನ ತತ್ವ ಆದರ್ಶಗಳು ಆಚರಣೆಗೆ ಸೀಮಿತವಾಗಬಾರದು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬಸವಣ್ಣನ ತತ್ವ ಆದರ್ಶಗಳು ಆಚರಣೆಗೆ ಸೀಮಿತವಾಗಬಾರದು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

0Shares

ಬೆಳಗಾವಿ: ಜಗತ್ತಿನ ಶ್ರೇಷ್ಠ ದಾರ್ಶನಿಕ ಬಸವಣ್ಣನವರ ತತ್ವ ಆದರ್ಶಗಳು ಕೇವಲ ಆಚರಣೆಗೆ ಮೀಸಲಾಗದೆ, ನಾವೆಲ್ಲರೂ ಅನುಕರಣೆ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಶ್ರೀ ಬಸವೇಶ್ವರ ಉದ್ಯಾನವನದಲ್ಲಿ ಬುಧವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವಣ್ಣ ಬಗ್ಗೆ ಮಾತನಾಡಲು ಹೋದರೆ ಒಂದು ದಿನ ಸಾಕಾಗುವುದಿಲ್ಲ, ದಿನಗಟ್ಟಲೇ ಮಾತನಾಡಬಹುದು. ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾದರಿ ಎಂದರು.

ಜಾತಿ ರಹಿತ ಸಮಾಜವನ್ನು ಬಯಸಿದ ವ್ಯಕ್ತಿ, ಮೇಲು ಕೀಳು ಎಲ್ಲವನ್ನು ಕಿತ್ತೊಗೆದು, ಸಾಮಾಜಿಕ ಪರಿಕಲ್ಪನೆಯನ್ನು ಇಟ್ಟುಕೊಂಡ ವ್ಯಕ್ತಿ. ಆದರೆ, ನಾವಿಂದು ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಹೋಗುವ ಬದಲಿಗೆ ಜಾತಿ ಜಾತಿ ಎಂದು ಜಾತಿ ಹಿಂದೆ ಬಿದ್ದಿದ್ದೇವೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಇಂದು ಧರ್ಮ-ಧರ್ಮ ಹಾಗೂ ಜಾತಿ- ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಸಂದರ್ಭದಲ್ಲಿ ಬಸವಣ್ಣನ ವಿಚಾರಧಾರೆಯಿಂದ ಇಂತವುಗಳನ್ನು ತಡೆಯಲು ಸಾಧ್ಯ. ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು ಎಂದು ಸಚಿವರು ಹೇಳಿದರು.

ಬಸವಾದಿ ಶರಣರು ಸಮಾಜವನ್ನು ಸುಧಾರಣೆ ಮಾಡುವ ಸಲುವಾಗಿ ಜೀವನವನ್ನೇ ಮುಡಿಪಾಗಿಟ್ಟರು. ಆದರೆ, ಇಂದು ಸ್ವಾರ್ಥ, ಸುಳ್ಳು, ಮೋಸ ಮಾಡುವಂತ ಪ್ರತಿವೃತ್ತಿಯೇ ಜಾಸ್ತಿಯಾಗುತ್ತಿದೆ. ಎಂದೆಂದಿಗೂ ಶಾಶ್ವತವಾಗಿ ಉಳಿಯುವಂತಹ ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು 12ನೇ ಶತಮಾನದಲ್ಲೇ ಸಾರಿದ ಮಹಾನ್ ವ್ಯಕ್ತಿ ಬಸವೇಶ್ವರರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ರಾಜಕಾರಣದಲ್ಲಿ ಸೋಲೋದು ಗೆಲ್ಲೋದು ಸಾಮಾನ್ಯ, ಬಸವಣ್ಣನ ತತ್ವ ಆದರ್ಶಗಳನ್ನು ಪಾಲಿಸುವಂತೆಯೇ ನಾನು ನನ್ನ ಮಗ ಮೃಣಾಲ್ ಹೆಬ್ಬಾಳಕರ್‌ಗೆ ಹೇಳಿಕೊಟ್ಟಿದ್ದೇನೆ. ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯೋಣ ಎಂದು ಹೇಳಿದರು.

ಈ ವೇಳೆ ರತ್ನಪ್ರಭಾ ಬೆಲ್ಲದ, ಬಸವರಾಜ ಜಗಜಂಪಿ, ಡಾ.ಎಚ್.ಬಿ.ರಾಜಶೇಖರ, ವಿಜಯಕುಮಾರ ಹೊನಕೇರಿ, ಆರ್.ಪಿ.ಪಾಟೀಲ, ಮುರಘೇಂದ್ರಗೌಡ ಪಾಟೀಲ, ಮೃಣಾಲ್ ಹೆಬ್ಬಾಳಕರ್, ವಿದ್ಯಾವತಿ ಭಜಂತ್ರಿ, ಅನಂತ ಬ್ಯಾಕೊಡ್, ಉದಯಕುಮಾರ್ ತಳವಾರ, ಸೋಮಲಿಂಗ ಮಾವಿನಕಟ್ಟಿ, ಮಲಗೌಡ ಪಾಟೀಲ ಹಾಗೂ ಅನೇಕರು ಉಪಸ್ಥಿತರಿದ್ದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now