ಪ್ರತಿಭೆಗಳ ಅನಾವರಣಕ್ಕೆ ಶಿಬಿರಗಳು ಸಹಕಾರಿ : ಶಾಸಕ ಸುನೀಲ್ ಕುಮಾರ್

ಪ್ರತಿಭೆಗಳ ಅನಾವರಣಕ್ಕೆ ಶಿಬಿರಗಳು ಸಹಕಾರಿ : ಶಾಸಕ ಸುನೀಲ್ ಕುಮಾರ್

0Shares

ಉಡುಪಿ, ಏಪ್ರಿಲ್ 17 : ಶಿಬಿರಗಳಲ್ಲಿ ಪಾಲ್ಗೊಳ್ಳುವಿಕೆ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಹಕಾರಿಯಾಗಿದ್ದು, ಮಕ್ಕಳು ರಜಾ ದಿನಗಳಲ್ಲಿ ಮೊಬೈಲ್ ಹಾಗೂ ಟಿ.ವಿಯ ಬಳಕೆಯಲ್ಲಿ ಕಾಲಹರಣ ಮಾಡದೇ, ಹತ್ತು ದಿನದ ಶಿಬಿರದ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು

ಅವರು ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಕ್ಷ ರಂಗಾಯಣ ಕಾರ್ಕಳ ಇವರ ಸಹಯೋಗದಲ್ಲಿ ಕಾರ್ಕಳದ ಯಕ್ಷ ರಂಗಾಯಣದ ಸಭಾಂಗಣದಲ್ಲಿ ನಡೆದ ಬಾಲಲೀಲೆ ಮಕ್ಕಳ ರಂಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನಕ್ಕೆ ಹೊಸ ಪೀಳಿಗೆಯನ್ನು ತಯಾರು ಮಾಡುವುದರ ಜೊತೆಯಲ್ಲಿ ಯಕ್ಷಗಾನದ ವಿವಿಧ ರೀತಿಯ ಆಯಾಮಗಳಿಗೆ ಹೊಸ ಸ್ಪರ್ಶವನ್ನು ನೀಡುವ ಕಾರ್ಯವು ರಂಗಾಯಣದ ಮೂಲಕ ಇನ್ನಷ್ಟು ನಡೆಯಬೇಕು ಎಂದರು.

ಖ್ಯಾತ ಅರ್ಕಿಟೆಕ್ಟ್ ಪ್ರಮಲ್ ಕುಮಾರ್ ಮಾತನಾಡಿ, ಯುವಪೀಳಿಗೆಯು ದೊರೆತ ಅವಕಾಶಗಳ ಸದುಪಯೋಗ ಪಡೆದುಕೊಂಡು ಬದುಕಿನಲ್ಲಿ ಏಳಿಗೆಯನ್ನು ಹೊಂದುವುದರೊಂದಿಗೆ ದೇಶವನ್ನು ಕಟ್ಟುವಂತಹ ಭವ್ಯವಾದ ಕನಸುಗಳು, ಯೋಜನೆಗಳು ಯುವ ಮನಸ್ಸುಗಳಲ್ಲಿ ಮೂಡಿಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ, ಶೈಕ್ಷಣಿಕೆ ಚಟುವಟಿಕೆಯ ಹೊರತಾಗಿ ಚಿತ್ರಕಲೆ, ಸಾಹಿತ್ಯ, ಸಂಗೀತ ಹಾಗೂ ಇನ್ನೀತರ ಸಾಂಸ್ಕೃತಿಕ ಚಟುವಟಿಕೆಯ ಭಾಗವಹಿಸುವಿಕೆಯಲ್ಲಿ ಮಕ್ಕಳಿಗೆ ಪೋಷಕರು ಪ್ರೋತ್ಸಾಹ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ,ವಸಂತ್ ನಿರೂಪಿಸಿ, ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now