
ಮಂಗಳೂರು: ಶ್ರಿ ಮಹಾಲಕ್ಷಿ ಮಂದಿರದ 15ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಶ್ರಿ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಪಿಲಾರಿನಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಮೀನಾಕ್ಷಿ ಸೀತಾರಾಮ ಶೆಟ್ಟಿ, ಮೇಗಿನ ಮನೆ ಪಿಲಾರು ಇವರು ದೀಪ ಬೆಳಗಿಸಿ ಉಧ್ಘಾಟಿಸಿದರು. ಶ್ರಿ ಮೋಹನದಾಸ ಪರಮಹಂಸ ಸ್ವಾಮೀಜಿ ಅಶೀರ್ವಚನ ನೀಡಿದರು. ಮಾನವ ಜೀವನ ದೊಡ್ಡದು, ಅದನ್ನು ಹಾಳು ಮಾಡಿಕೊಳ್ಳಬೇಡಿ. ಇದ್ದಷ್ಟು ದಿನ ಪರೋಪಕಾರ ಮಾಡಿ ಜೀವನದಲ್ಲಿ ಸಾರ್ಥಕತೆಯನ್ನು ಹೊಂದಿ, ಎಂಬ ಸಂದೇಶ ನೀಡಿದರು.
ಮಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು. ಟಿ. ಖಾದರ್ ಮಾತನಾಡಿ, ಮಾನವೀಯತೆ ಹಾಗೂ ಸಮಾಜಕ್ಕಾಗಿ ಮಾಡಿದ ಸೇವೆ ಅನಂತಕಾಲ ಚಿರಸ್ಥಾಯಿಯಾಗಿ ಉಳಿಯುತ್ತದೆ. ಎಲ್ಲರ ಹೃದಯದಲ್ಲಿ ಇರುವ ಚೈತನ್ಯ ಒಂದೇ. ಅದ್ದರಿಂದ ಜಾತಿ, ಮತ, ಧರ್ಮಗಳನ್ನು ಮೀರಿ ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿಯಾಗಿ ಸಮಾಜದಲ್ಲಿ ಪ್ರಗತಿಪರ ಪರಿವರ್ತನೆಯನ್ನು ಪ್ರೇರೇಪಿಸುವ ಕೆಲಸವನ್ನು ನಾವಿಂದು ಮಾಡಬೇಕಾಗಿದೆ, ಎಂದರು.

ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಧನಲಕ್ಷಿ ಗಟ್ಟಿ, ಮಕ್ಕಳಿಗೆ ತಾಯಿಯಂದಿರು ಸಂಸ್ಕಾರ ಕಲಿಸಬೇಕಾಗಿದೆ. ಧಾರ್ಮಿಕ ಸಭೆಗಳಿಗೆ ಮಕ್ಕಳನ್ನು ಕರೆದೊಯ್ದು ನಮ್ಮ ಸಂಸ್ಕೃತಿಯ ಪರಿಚಯ ಮಾಡಬೇಕಾಗಿದೆ, ಎಂದರು.
ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ಸಹ ಪ್ರಾಧ್ಯಾಪಕಿ ಡಾ. ಭಾರತಿ ಪಿಲಾರ್, ಎಲ್ಲರೂ ಒಟ್ಟು ಸೇರಿ ಭಜನೆ ಮಾಡಿದಾಗ ಅದು ಮನಸ್ಸಿಗೆ ಶಾಂತಿ ನೆಮ್ಮದಿ ನೀಡುತ್ತದೆ ಹಾಗೂ ಸಾಮರಸ್ಯದ ವಾತಾವರಣ ನಿರ್ಮಾಣ ಮಾಡುತ್ತದೆ. ಎಲ್ಲಾ ಧರ್ಮಗಳ ಮೂಲ ಮಾನವೀಯತೆ. ಹಾಗಾಗಿ, ಮಾನವೀಯತೆಯ ಗುಣಗಳನ್ನು ಮೈಗೂಡಿಸಿ, ಸ್ವಸ್ಥ ಸಮಾಜ ನಿರ್ಮಾಣ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪುರಸಭೆಯ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್ ಕುಂಪಲ, ಮೆಸ್ಕಾಂನ ನಿತೇಶ್ ಹೊಸಗದ್ದೆ, ಪುರುಷೋತ್ತಮ ಖಂಚಿಲ, ಬೊಲ್ಮಗುತ್ತು ಆನಂದ ಶೆಟ್ಟಿ, ಕೆ.ಪಿ.ಸುರೇಶ್, ಪುರುಷೋತ್ತಮ ಕುಲಾಲ್, ಶಾಂತಪಾಲ್, ಸೂರಜ ಪೂಜಾರಿ, ಸುನಿಲ್ ಕುಂಪಲ, ಪುರುಷೋತ್ತಮ ಶೆಟ್ಟಿ, ದೇಲಂತಬೆಟ್ಟು, ದೀಪಕ್ ಪಿಲಾರ್, ರಾಜ ನಾಯಕ್, ಪರ್ವಿನ್ ಸಾಜಿದ್ ಅತಿಥಿಗಳಾಗಿ ಭಾಗವಹಿಸಿದ್ದರು.
ಚಂದ್ರಶೇಖರ ಮಜಲ್ ಸ್ವಾಗತಿಸಿದರು, ಶ್ರೀ ಮಹಾಲಕ್ಷ್ಮಿ ಮಂದಿರದ ಗೌರವಾಧ್ಯಕ್ಷ ದಿವಾಕರ್ ಬಗಂಬಿಲ ವಂದಿಸಿದರು. ಮಂದಿರದ ಅಧ್ಯಕ್ಷ ರಮೇಶ್ ಗಟ್ಟಿ ಉಪಸ್ಥ್ತಿತರಿದ್ದರು. ಮಂದಿರದ ಮಹಿಳಾ ಗೌರವಾಧ್ಯಕ್ಷೆ ಸವಿತಾ ದಿವಾಕರ್, ಮಹಿಳಾ ಅಧ್ಯಕ್ಷೆ ಶೋಭ ಪ್ರವೀಣ್ ಗಟ್ಟಿ ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























