
ಜೀವನ ಎಂಬ ಪಯಣದಲ್ಲಿ ಸವಾಲುಗಳನ್ನು ಎದುರಿಸಲೇಬೇಕು. ಜನನ ಮತ್ತು ಮರಣದ ನಡುವೆ ಈ ಭೂಮಿಯಲ್ಲಿ ನಾವು ಏನನ್ನು ಸಾಧಿಸುತ್ತೇವೆಯೋ ಅದು ಮಾತ್ರ ಈ ಭೂಮಿಯಲ್ಲಿ ಮತ್ತು ಇಲ್ಲಿರುವವರ ಮನಸ್ಸಿನಲ್ಲಿ ಉಳಿಯುತ್ತದೆ. ನಾಲ್ಕು ದಿನದ ಈ ಜೀವನ ಎಂಬ ಪಯಣದಲ್ಲಿ ನಾವು ಒಳ್ಳೆಯದನ್ನು ಮಾಡಿದರೂ, ಕೆಟ್ಟದ್ದನ್ನು ಮಾಡಿದರೂ, ಜನರು ಮಾತನಾಡುವ ರೀತಿ ಬೇರೆ ಬೇರೆಯಾದರೂ ಅದು ಒಂದೇ.. ಯಾಕೆಂದರೆ ಕೇಳಿಸಿಕೊಳ್ಳುವ ವ್ಯಕ್ತಿ ಅಲ್ಲಿರೋದಿಲ್ಲ ಅಷ್ಟೇ. ಮರಣ ಎಂಬ ಶಬ್ದಕ್ಕಿಂತ, ಆ ಮರಣ ಎಂಬ ಘಟನೆ ನಡೆದಾಗ ಆಗುವ ನೋವು ಅತ್ಯಂತ ಕಠಿಣ. ಅದರಲ್ಲೂ ಕೆಲವೊಂದು ಮರಣಗಳು ಮರೆಯಲಾರದಷ್ಟು ಮನಸ್ಸಿಗೆ ನೋವು ಕೊಡುತ್ತದೆ. ಅಂತಹ ನೋವು ಕೇವಲ ನಮ್ಮ ಕುಟುಂಬ ಸದಸ್ಯರಲ್ಲದೆ, ಪ್ರೀತಿ, ನಂಬಿಕೆ, ವಿಶ್ವಾಸ, ಸಾಮಾಜಿಕ ಚಟುವಟಿಕೆ, ಸಾಮಾಜಿಕ ಬದ್ಧತೆಯಿಂದ ಕೂಡಿದ ಪರಿಚಯದ ವ್ಯಕ್ತಿಗಳು ನಿಧನರಾಗುವಾಗ ಆ ಕುಟುಂಬ ಸದಸ್ಯರಿಗಾಗುವಷ್ಟು ನೋವು ದುಃಖ ನಮಗೂ ಆಗುತ್ತದೆ. ಕಳೆದ ಒಂದೆರಡು ವರ್ಷಗಳಲ್ಲಿ ಅಪಘಾತ ಮತ್ತು ಹೃದಯಾಘಾತಕ್ಕೆ ಹಲವಾರು ಯುವ ಜನತೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಪ್ರತಿಯೊಂದು ಮರಣದ ಹಿಂದೆ ಯಾವುದಾದರೂ ಒಂದು ನೆವನ ಇರುತ್ತದೆ. ಆದರೆ ಸೃಷ್ಟಿಕರ್ತ ಮಾತ್ರ ನಮ್ಮ ಹಣೆ ಬರಹದಲ್ಲಿ ನಮ್ಮ ಕಾಲಚಕ್ರ ಎಷ್ಟು ಎಂಬುದನ್ನು ಮೊದಲೇ ಬರೆದಿದ್ದಾರೆ. ಅದೆಲ್ಲವನ್ನು ನಾವು ಎದುರಿಸಬೇಕಷ್ಟೇ.
ಇಂದು ಬೆಳ್ಳಂಬೆಳಗ್ಗೆ ಸ್ನೇಹಿತ ರೋಶನ್ ಡಿಸೋಜರವರ ಮೂಲಕ ಉದ್ಯಾವರ ಪಿತ್ರೋಡಿಯ ನಿವಾಸಿ ಶ್ರೀಮತಿ ಗ್ಲ್ಯಾಡಿಸ್ ಮೆಂಡೋನ್ಸಾ ನಿಧನರಾಗಿರುವ ಮಾಹಿತಿ ದೊರಕಿತು. ಗ್ಲ್ಯಾಡಿಸ್ ಮೆಂಡೋನ್ಸಾ ಅತ್ಯಂತ ಸರಳ ವ್ಯಕ್ತಿತ್ವದವರು. ಸದಾ ನಗುಮುಖದಿಂದಿರುವ ಇವರ ಬಳಿ ಮಾತನಾಡುವಾಗ ಬಹಳಷ್ಟು ಖುಷಿಯಾಗುತ್ತೆ. ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೆವಿಯರ್ ದೇವಾಲಯದ ವಿವಿಧ ಸಂಘ ಸಂಸ್ಥೆಗಳಲ್ಲಿ ವಿಶೇಷವಾಗಿ ಸ್ತ್ರೀ ಸಂಘಟನೆ ಮತ್ತು ಕಥೋಲಿಕ್ ಸಭಾ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹೆಚ್ಚು ಕಮ್ಮಿ ಹತ್ತು ವರ್ಷದ ಹಿಂದೆ ಪರಿಸರ ಸಂರಕ್ಷಣಾ ಸಮಿತಿಯ ಮೂಲಕವಾಗಿ ಸಾಮಾಜಿಕವಾಗಿಯೂ ತೊಡಗಿಸಿಕೊಂಡ ಇವರು, ಒಂದು ಬಾರಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಚರ್ಚ್ ವ್ಯಾಪ್ತಿಯ ಪ್ರತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಇವರು, ಕಾಂಗ್ರೆಸ್ ಬೆಂಬಲಿತ ಕಾರ್ಯಕ್ರಮಗಳಲ್ಲೂ ಸಕ್ರಿಯರಾಗಿದ್ದರು. ಕಳೆದ ಎರಡು ಎರಡು ಮೂರು ವರ್ಷಗಳ ಹಿಂದೆ ಆರಂಭವಾದ ಅಸೌಖ್ಯ ಪ್ರತಿ ದಿನ ಇವರನ್ನು ಕೊಲ್ಲುತ್ತಿತ್ತು. ಆದರೆ ಯಾವುದೇ ಒಂದು ದಿನವೂ ಅವರು ಅಸೌಖ್ಯ ಎಂಬುದನ್ನು ಯಾರ ಮುಂದೆ ತೋರ್ಪಡಿಸದೆ, ತಾನು ಆರೋಗ್ಯವಾಗಿದ್ದೇನೆ ಎಂಬುದನ್ನು ತನ್ನ ಹಸನ್ಮುಖಿ ಮುಖಭಾವನೆಯೊಂದಿಗೆ ತೋರ್ಪಡಿಸಿಕೊಳ್ಳುತ್ತಿದ್ದರು. ಯಾವತ್ತೂ ಅವರ ಅನಾರೋಗ್ಯದ ಬಗ್ಗೆ ಇತರ ಬಳಿ ಹೇಳಿದ್ದು ಇಲ್ಲ, ಅವರ ನೋವನ್ನು ಹಂಚಿಕೊಂಡದ್ದು ಇಲ್ಲ.. ಎಲ್ಲವನ್ನು ಅವರು ಸಹಿಸಿಕೊಳ್ಳುತ್ತಿದ್ದರು. ಆದರೆ ದುರಾದೃಷ್ಟವಶಾತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ನಿನ್ನೆ ಪತಿ ಮತ್ತು ಹಿರಿಯ ಮಗಳೊಂದಿಗೆ ಮನೆಗೆ ತಲುಪಿದ ಇವರು, ಇಂದು ಬೆಳಗ್ಗೆ ಮತ್ತೆ ಏಳಲೇ ಇಲ್ಲ. ಬದುಕಿಸುವ ಪ್ರಯತ್ನವೂ ಪೂರ್ಣವಾಗಲೇ ಇಲ್ಲ.. ಗ್ಲ್ಯಾಡಿಸ್ ಮೆಂಡೋನ್ಸಾ ಮರಳಿ ಬಾರದ ಊರಿಗೆ ಹೊರಟೆ ಬಿಟ್ಟರು.. ಅವರು ಮಾತನಾಡುವ ರೀತಿ, ಮುಖ ತುಂಬಾ ನಗಡುವ ರೀತಿ ಇನ್ನೂ ಕೂಡ ಕಣ್ಣ ಮುಂದೆ ಇದೆ.. ಮರಣ ಪ್ರತಿಯೊಬ್ಬರಿಗೂ ಖಂಡಿತ ಇದೆ.. ಅದು ಸತ್ಯವೂ ಕೂಡ. ಆದರೆ ಎದುರಿಸುವುದು ಅಷ್ಟು ಸುಲಭ ಅಲ್ಲವೇ ಅಲ್ಲ.
ಪತಿ ವಲೇರಿಯನ್ ಮೆಂಡೋನ್ಸಾ. ಪತ್ನಿ ಅಷ್ಟೇ ಸರಳ. ಪತ್ನಿ ಬಳಿ ಸಾಮಾಜಿಕ ಕಳಕಳಿ ಇದ್ದರೆ, ಇವರ ಬಳಿ ಲೇಖನ, ಕವಿತೆ ಬರೆಯುವ ಪ್ರತಿಭೆ ಇದೆ. ಪತ್ನಿ ಕಷ್ಟದಲ್ಲಿದ್ದಾರೆ, ಅನಾರೋಗ್ಯವನ್ನು ಎದುರಿಸುತ್ತಿದ್ದಾಳೆ ಎಂಬುದನ್ನು ಗೊತ್ತಿದ್ದರೂ ತನ್ನ ನೋವನ್ನು ಎಲ್ಲವನ್ನು ನುಂಗಿಕೊಂಡು, ಪತ್ನಿಯನ್ನು ಉಳಿಸಿದ್ದಕ್ಕೋಸ್ಕರ ಇಬ್ಬರು ಪುತ್ರಿಯರೊಂದಿಗೆ ಬಹಳಷ್ಟು ಪ್ರಯತ್ನ ಪಟ್ಟರು. ಅದರದೇ ದೇವರ ಇಚ್ಛೆ ಬೇರೆ.
(ಎ. 8) ಇಂದು ನಿಧನರಾಗಿರುವ ಗ್ಲ್ಯಾಡಿಸ್ ಮೆಂಡೋನ್ಸಾ ರವರ ಅಂತ್ಯಕ್ರಿಯೆ ವಿಧಿ ವಿಧಾನಗಳು ಏಪ್ರಿಲ್ 9 ಬುಧವಾರ ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೆ ಅವರ ನಿವಾಸದಲ್ಲಿ ಅಂತಿಮ ನಮನ ಸಲ್ಲಿಸಲು ಸಾರ್ವಜನಿಕ ವೀಕ್ಷಣೆಗೆ ಅವಕಾಶವಿದೆ. ಸಂಜೆ ನಾಲ್ಕು ಗಂಟೆಯ ಬಳಿಕ ಅಂತ್ಯಕ್ರಿಯೆ ಪೂಜಾ ವಿಧಿ ವಿಧಾನಗಳು ಆರಂಭವಾಗಲಿದೆ. ಸಂಜೆ 4:30ಕ್ಕೆ ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಅಗಲಿದ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ. ಪತಿ ಮತ್ತು ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿ ದೇವರು ನೀಡಲಿ. ಗ್ಲ್ಯಾಡಿಸ್ ಮೆಂಡೋನ್ಸಾ ರವರ ನಗುಮುಖ, ಸಾಮಾಜಿಕ ಸೇವೆ ಸದಾ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚಳಿಯಾಗಿ ಉಳಿಯಲಿದೆ..
ದೇವರ ಕರೆಗೆ ತಲೆಬಾಗಿದ್ದೀರಿ.. ನಿಮ್ಮ ಪ್ರೀತಿ ನಾವು ಸದಾ ಮರೆಯಲಾರೆವು.. ಮತ್ತೊಂದು ಜನ್ಮವಿದ್ದರೆ ಮತ್ತೆ ಹುಟ್ಟಿ ಬನ್ನಿ..
✍️ಸ್ಟೀವನ್ ಕುಲಾಸೊ ಉದ್ಯಾವರ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























