
ಮಂಗಳೂರು ಇಎಸ್ಐ ಆಸ್ಪತ್ರೆ ಅಭಿವೃದ್ಧಿಗೆ ಸಂಸದರ ನಿರಂತರ ಪ್ರಯತ್ನ
ಕೇಂದ್ರದ ನಿರ್ದೇಶನದಂತೆ ’ರಾಜ್ಯ ಇಎಸ್ಐ ಸೊಸೈಟಿ’ ರಚಿಸಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಗೆ ಕ್ಯಾ. ಚೌಟ ಆಗ್ರಹ ಮುಂಬಯಿ (ಆರ್‌ಬಿಐ), ಫೆ .12: ಮಂಗಳೂರುನ ಕಾರ್ಮಿಕ ರಾಜ್ಯ ವಿಮಾ(ಇಎಸ್ಐ) ಆಸ್ಪತ್ರೆಯ ಸುಧಾರಣೆಗೆ ರಾಜ್ಯ ಸರ್ಕಾರ ಶೀಘ್ರ ’ರಾಜ್ಯ ಇಎಸ್ಐ ಸೊಸೈಟಿ’ಯನ್ನು ರಚಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಸಚಿವರಿಗೆ ಪತ್ರ ಬರೆದಿರುವ ಸಂಸದರು, “ರಾಜ್ಯ ಇಎಸ್ಐ ಸೊಸೈಟಿ ರಚನೆಯಿಂದ ಇಎಸ್ಐ ಆಸ್ಪತ್ರೆಗಳಲ್ಲಿ ಮೂಲಸೌಕರ್ಯದ ತ್ವರಿತ ಸುಧಾರಣೆ, ವೈದ್ಯಕೀಯ ಉಪಕರಣಗಳ ಖರೀದಿ, ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅನುಕೂಲವಾಗುವುದು ಮಾತ್ರವಲ್ಲದೇ ಅನುಭವಿ ತಜ್ಞ ವೈದ್ಯರು ಮತ್ತು ನುರಿತ ಸಿಬ್ಬಂದಿ ನೇಮಕ ಮಾಡಲು ಇದು ಸಹಾಯಕವಾಗಲಿದೆ” ಎಂದು ತಿಳಿಸಿದ್ದಾರೆ.
ಕ್ಯಾ. ಚೌಟ ಅವರು ಮಂಗಳೂರು ಇಎಸ್ಐ ಆಸ್ಪತ್ರೆಯ ಸಮಸ್ಯೆಗಳ ಕುರಿತು ಚರ್ಚಿಸಲು ಇತ್ತೀಚೆಗೆ ದೆಹಲಿಯಲ್ಲಿ ನೌಕರರ ರಾಜ್ಯ ವಿಮಾ ನಿಗಮದ (ಇSIಅ) ಮಹಾನಿರ್ದೇಶಕ ಅಶೋಕ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ವೇಳೆ ಇಎಸ್ಐಸಿಗೆ ಸಂಬಂಧಿಸಿದ ರಾಜ್ಯದ ಎಲ್ಲಾ ಕಾರ್ಯ-ಚಟುವಟಿಕೆ ಸುಗಮಗೊಳಿಸಲು ಮತ್ತು ಕೇಂದ್ರದಿಂದ ಅನುದಾನ ಬಿಡುಗಡೆಯನ್ನು ಸಮರ್ಥವಾಗಿ ನಿರ್ವಹಿಸಲು ರಾಜ್ಯ ಸರ್ಕಾರವು ಪ್ರತ್ಯೇಕ ಸೊಸೈಟಿ ರಚಿಸಬೇಕು. ಅದು ರಾಜ್ಯದಲ್ಲಿನ ಎಲ್ಲಾ ಇಎಸ್ಐಸಿಗೆ ಸಂಬಂಧಿಸಿದ ವಿಷಯಗಳಿಗೆ ಮತ್ತು ಕೇಂದ್ರದ ಫಂಡ್ ವಿತರಣೆಗೆ ಆಡಳಿತ ಮಂಡಳಿಯಾಗಿದ್ದು, ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕಾರ್ಮಿಕ ಕಾರ್ಯದರ್ಶಿಗಳು ಈ ಸೊಸೈಟಿಯ ಮುಖ್ಯಸ್ಥರಾಗಿರುತ್ತಾರೆ ಎಂದು ಡಿಜಿ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಶೀಘ್ರವಾಗಿ “ರಾಜ್ಯ ಇಎಸ್ಐ ಸೊಸೈಟಿ ” ರಚನೆ ಸಂಬಂಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸಂಸದರು ಕಾರ್ಮಿಕ ಸಚಿವರನ್ನು ಒತ್ತಾಯಿಸಿದ್ದಾರೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮತ್ತು ಕಾರ್ಮಿಕ ಕಾರ್ಯದರ್ಶಿಗಳನ್ನು ಸಂಪರ್ಕಿಸಿ ’ರಾಜ್ಯ ಇಎಸ್ಐ ಸೊಸೈಟಿ ರಚನೆ’ ಕುರಿತು ಈಗಾಗಲೇ ಮನವಿ ಸಲ್ಲಿಸಿದೆ. ಈ ಸೊಸೈಟಿ ರಚನೆಯಿಂದ ಜಿಲ್ಲೆಯ ಶ್ರಮಿಕ ವರ್ಗಕ್ಕೆ ಅನುಕೂಲ ಕಲ್ಪಿಸಲು ಹಾಗೂ ಇಎಸ್ಐ ಆಸ್ಪತ್ರೆಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಅಭಿವೃದ್ದಿಗೆ ದೊಡ್ಡ ರೀತಿಯಲ್ಲಿ ಸಹಕಾರಿಯಾಗಲಿದೆ. ಆದ್ದರಿಂದ, ಸೊಸೈಟಿ ರಚನೆ ಕುರಿತು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲು ಮತ್ತು ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ರಾಜ್ಯ ಇಎಸ್ಐ ಸೊಸೈಟಿ ರಚಿಸಲು ಮುಖ್ಯ ಕಾರ್ಯದರ್ಶಿ / ಕಾರ್ಮಿಕ ಕಾರ್ಯದರ್ಶಿಗಳಿಗೆ ತಾವು ನಿರ್ದೇಶನ ನೀಡಬೇಕು” ಎಂದು ಪ್ರತ್ರದಲ್ಲಿ ಕ್ಯಾ. ಚೌಟ ಆಗ್ರಹಿಸಿದ್ದಾರೆ.
ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದ ಸಂಸದ ಕ್ಯಾ. ಚೌಟ
ಜನವರಿ ಮೊದಲ ವಾರದಲ್ಲಿ ಸಂಸದ ಕ್ಯಾ.ಚೌಟ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದಾಗ ಕಾರ್ಮಿಕರಿಗೆ ವೈದ್ಯಕೀಯ ಸೇವೆಗಳು ಸಮರ್ಪಕವಾಗಿ ಸಿಗದಿರುವ ವಿಚಾರ ಹಾಗೂ ಅಲ್ಲಿನ ಅವ್ಯವಸ್ಥೆ ಬೆಳಕಿಗೆ ಬಂದಿತ್ತು. 100 ಹಾಸಿಗೆಗಳ ಸಾಮರ್ಥ್ಯವಿರುವ ಈ ಆಸ್ಪತ್ರೆಯಲ್ಲಿ, ಬರೀ 70 ಮಾತ್ರ ಉಪಯೋಗಕ್ಕೆ ಯೋಗ್ಯವಾಗಿತ್ತು. ಇಲ್ಲಿ 28 ವೈದ್ಯರು ಸೇವೆಗೆ ಅಗತ್ಯವಿದ್ದು, 5 ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರಮಿಕ ವರ್ಗಕ್ಕೆ ಕೇವಲ ಜನರಲ್ ಟ್ರೀಟ್ ಮೆಂಟ್ ದೊರಕುತ್ತಿದ್ದು ತೀರಾ ಅಗತ್ಯವಾಗಿರುವ ಪ್ರಸೂತಿ, ಮಕ್ಕಳ, ಆರ್ಥೋ ಇತ್ಯಾದಿ ತಜ್ಞ ವೈದ್ಯರ ಹಾಗೂ ನುರಿತ ಸಿಬ್ಬಂದಿ ವರ್ಗದ ಕೊರತೆ ಕಂಡು ಬಂದ ಹಿನ್ನಲೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಇತ್ತೀಚೆಗೆ ದೆಹಲಿಯಲ್ಲಿ ಇSIಅ ಡಿಜಿ ಅವರನ್ನು ಸಂಸದರು ಭೇಟಿಯಾಗಿ ಗಮನಕ್ಕೆ ತಂದಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























