ಹಾರುವ ಓತಿ ( Draco Dussumieri )

ಹಾರುವ ಓತಿ ( Draco Dussumieri )

0Shares

2021 ರ ಜನವರಿ…

ನನ್ನ ತೋಟದಲ್ಲಿ ಹತ್ತು ವರ್ಷಗಳಲ್ಲಿ ಸುಮಾರು ಏಳೆಂಟು ಬಾರಿ ಅದನ್ನು ಗಮನಿಸಿದ್ದೆ. ಒಂದೇ ಒಂದು ಸಲ ಪಕ್ಕದ ತೋಟದ ಅಡಿಕೆ ಮರದ ಮೇಲಿನಿಂದ ರೊಯ್ಯನೆ ಎಲೆಯಂತೆ ಹಾರುತ್ತಾ ಬಂದು ನಮ್ಮ ತೋಟದ ಪೆಲ್ಟೋಪಾರಂ ಮರದ ಕಾಂಡವನ್ನು ಅಪ್ಪಿ ಕೂತಿತ್ತು.

ಎಷ್ಟು ಕಣ್ಣು ಅಗಲ ಮಾಡಿ ನೋಡಿದರೂ ಮರದ ಕಾಂಡದ ಮತ್ತು ಅದರ ಬಣ್ಣ ಒಂದೇ ಇದ್ದುದರಿಂದ ಕಾಣಿಸಲೇ ಇಲ್ಲ…

ಈವತ್ತು ಬಸಳೆ ಚಪ್ಪರಕ್ಕೆ ರೆಡಿ ಮಾಡುತ್ತಿರಬೇಕಾದರೆ ಕಾಣಿಸಿತು. ಮರ ಹತ್ತಿ ತಲೆಗೆ ಸುತ್ತಿದ ಮುಂಡಾಸಿನಿಂದ ಮೆತ್ತಗೆ ಹಿಡಿದವನು ನಮ್ಮ ಮಾಲಿ ಮಹೇಶ.

ನಂತರ ಅದರನ್ನು ಒಂದು ಜಾರಿನಲ್ಲಿ ಹಾಕಿ ಕುಮಟಾ ವಲಯ ಅರಣ್ಯಾಧಕಾರಿಗಳಿಗೆ ಪೋನ್ ಮಾಡಿದೆ.
ಅವರು ಅದು ಆ ಪ್ರದೇಶದಲ್ಲಿ ಸಾಮಾನ್ಯವಾಗಿ ಇದ್ದು, ಸಾಂತಗಲ್ ನಲ್ಲಿ ಇರುವ ಚೆಕ್ ಪೋಸ್ಟ್ ಸಿಬ್ಬಂದಿಗಳಿಗೆ ನೀಡಿ, ಅವರು ಅದನ್ನು ಸುರಕ್ಷಿತವಾಗಿ ಅರಣ್ಯದೊಳಗೆ ಬಿಡುತ್ತಾರೆ ಅಂದರು.

ಆ ಭಾಗದಲ್ಲಿ ಅದು ಯಾವಾಗಲೂ ಕಾಣಿಸುತ್ತಿರುತ್ತದೆ ಮತ್ತು ಯಾವಾಗ ಬೇಕಾದರೂ ಹಿಡಿಯಬಹುದಾ ಸಾರ್ ಅಂದೆ.
ಹೌದು ಎಂದರು..

ಅವರು ಹೇಳಿದ್ದು ಸುಳ್ಳಾಗಿತ್ತು. ನಿಜವಾಗಿಯೂ ಅದು ಕೊಟ್ಟಿಗೆಹಾರದ ಪೂರ್ಣಚಂದ್ರ ತೇಜಸ್ವಿ ಜೀವವೈವಿಧ್ಯ ಕೇಂದ್ರಕ್ಕೆ ಕೊಡಬೇಕಾದ ಅಮೂಲ್ಯವಾದ ಜೀವಿ ಆಗಿತ್ತು.

ಹಾಗೆಯೇ ಬಹಳಷ್ಟು ಜನ ಫೇಸ್ಬುಕ್ ಮಿತ್ರರು ನಾವು ಅದನ್ನು ತುಂಬಾ ಸಲ ನೋಡಿದ್ದೇವೆ ಸುಲಭವಾಗಿ ಹಿಡಿಯಬಹುದು ಎಂದು ಹೇಳಿದರು. ಆದರೆ ಇದುವರೆಗೂ ಕರ್ನಾಟಕದಲ್ಲಂತೂ ಯಾರಿಗೂ ಅದು ಹಿಡಿಯಲು ಸಿಗಲೇ ಇಲ್ಲ.

ಹಿಡಿದಿದ್ದ ಅದನ್ನು ಒಂದು ಪ್ಲಾಸ್ಟಿಕ್ ಜಾರ್ ನೊಳಗೆ ಹಾಕಿದೆ. ಒಂದತ್ತು ನಿಮಿಷ ಅಲ್ಲಾಡದೇ ಕೂತಿದ್ದ ಅದು ಬಳಿಕ ಪುಲ್ ಆ್ಯಕ್ಟಿವ್ ಆಗಿ ಜಾರಿನೊಳಗೆ ಹಾಕಿದ ಮೂರು ಸಣ್ಣ ಇರುವೆಗಳನ್ಬು ಗುಳುಂ ಮಾಡಿತ್ತು.

ಹೇಮಾ ವೆಂಕಟ್ ರವರು ನವೀನ್ ಸೂರಿಂಜೆ ಗೆ ಹೇಳಿ BTV ಯಲ್ಲಿ ಬರುವ ಹಾಗೆ ಮಾಡಿದರು..

ಹಾರುವ ಓತಿ ( Draco Dussumieri ) ಮರದಿಂದ ಮರಕ್ಕೆ ಹಾರಬಲ್ಲ ಸರಿಸೃಪಗಳ ಪಂಗಡಕ್ಕೆ ಸೇರಿದ ಪ್ರಾಣಿಯಾಗಿದ್ಧು ಭಾರತದ ಪಶ್ಚಿಮಘಟ್ಟಗಳಲ್ಲಿ ಮತ್ತು ದ. ಏಷ್ಯಾದ ಕಾಡು ಪ್ರದೇಶಗಳಲ್ಲಿ ಕಾಣಸಿಗುತ್ತದೆ.

ವಿನಾಶದ ಅಂಚಿನ ಜೀವಿಗಳ ಅಂತರ ರಾಷ್ಟ್ರೀಯ ಪಟ್ಟಿಯಲ್ಲಿ ಇವುಗಳನ್ನು ಇನ್ನೂ ಸೇರಿಸಲಾಗಿಲ್ಲ.

ಮುಂಗಾಲಿನಿಂದ ಹಿಂಗಾಲಿನವರೆಗೆ ಪೊರೆಯಂತಹ ರೆಕ್ಕೆ ಚಾಚಿಕೊಂಡಿರುತ್ತದೆ. ಪುಟ್ಟಕಾಲುಗಳು ಹಾಗು ಉದ್ದನೆಯ ಬಾಲ ಹೊಂದಿರುತ್ತದೆ. ಮರದಿಂದ ಮರಕ್ಕೆ ಹಾರಲು ತನ್ನ ಕಾಲುಗಳನ್ನು ಚಾಚುವುದರ ಮೂಲಕ ರೆಕ್ಕೆಯನ್ನು ಬಿಡಿಸಿಕೊಳ್ಳುತ್ತದೆ.
ಹಕ್ಕಿಯಂತೆ ರೆಕ್ಕೆ ಬಡಿಯುವುದಿಲ್ಲ. ಅದಕ್ಕೆ ಎತ್ತರಕ್ಕೆ ಹಾರಲು ಆಗುವುದಿಲ್ಲ. ಸರಸರನೆ ದೊಡ್ಡ ಮರವನ್ನೇರಿ ಅಲ್ಲಿಂದ ವಿಮಾನದ ರೀತಿಯಲ್ಲಿ ಕೆಳಮುಖವಾಗಿ ತೇಲಿ ಇನ್ನೊಂದು ಮರದ ಮೇಲೆ ಕೂರುತ್ತದೆ.

ಯಾವ ಮರದ ಮೇಲೆ ಕೂರುತ್ತದೋ ಆ ಮರದ ಬಣ್ಣವನ್ನೇ ಹೊಂದುತ್ತದೆ. ಮಾಮೂಲು ಓತಿಯ ಹಾಗೆ ಇದು ಕೂಡಾ ಬಣ್ಣವನ್ನು ಬದಲಾಯಿಸುತ್ತಾ ಇರುತ್ತದೆ.

– ಲೋಕೇಶ್ ಪೂಜಾರಿ, Kolalgiri

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now