ಸಾಧಕರ ಆದರ್ಶಗಳು ನಮಗೆ ದಾರಿ ದೀಪವಾಗಲಿ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

ಸಾಧಕರ ಆದರ್ಶಗಳು ನಮಗೆ ದಾರಿ ದೀಪವಾಗಲಿ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

0Shares

ಉಡುಪಿ : ಸಮಸ್ತರು ರಂಗ ಸಂಶೋಧನಾ ಕೇಂದ್ರ ಬೆಂಗಳೂರು ವತಿಯಿಂದ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಸಂಸ್ಥೆಯ ಸಹಕಾರದಲ್ಲಿ ಖ್ಯಾತ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ೨ನೇ ವರ್ಷದ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಭಾನುವಾರ ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಗೋಪಾಲಕೃಷ್ಣ ನಾಯರಿ ಅವರು ಯಾವುದೇ ಪ್ರಶಸ್ತಿ, ಪುರಸ್ಕಾರದ ಹಂಗಿಲ್ಲದೆ ಕೇವಲ ರಂಗಭೂಮಿ, ನಾಟಕ ಬಗ್ಗೆ ಚಿಂತನೆ ನಡೆಸಿ ಕಾರ್ಯೋನ್ಮುಖರಾಗಿದ್ದ ಮಹಾನ್ ಸಾಧಕರಾಗಿದ್ದರು. ಸಾಧಕರಿಗೆ ಸಾವಿಲ್ಲ. ಅವರ ಆದರ್ಶಗಳು ನಮಗೆ ದಾರಿದೀಪವಾಗಬೇಕು. ಅವರು ಹಾಕಿಕೊಟ್ಟ ದಾರಿಯನ್ನು ನಾವು ಮರೆಯಬಾರದು. ಅವರ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಸಂಸ್ಥೆಯ ರಾಜಶೇಖರ್ ಹೆಬ್ಬಾರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಗೋಪಾಲಕೃಷ್ಣ ನಾಯರಿ ಅವರ ರಂಗಭೂಮಿ, ಯಕ್ಷಗಾನ, ನೃತ್ಯ ಮೊದಲಾದ ಸಾಂಸ್ಕೃತಿಕ ರಂಗದ ಬಗ್ಗೆ ಇದ್ದ ತತ್ಪರತೆ, ಸಮರ್ಪಣಾ ಭಾವನೆಯನ್ನು ಪ್ರಸ್ತಾಪಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಗೋಪಾಲಕೃಷ್ಣ ದೇವರು ಭಟ್ಟ ಅವರಿಗೆ ೨೦೨೫ ರ ’ಶ್ರೀ ಗೋಪಾಲಕೃಷ್ಣ ನಾಯರಿ ರಂಗ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಬ್ರಹ್ಮಾವರ ತಾಲೂಕು ಅಧ್ಯಕ್ಷ ವೈಕುಂಠ ಹೇರ್ಳೆ ಸಂಸ್ಮರಣಾ ನುಡಿಗಳನ್ನಾಡಿದರು. ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ನ ಸಂತೋಷ್ ಯಾಜಿ ಮಣ್ಣಿಗೆ ಅವರು ಅಭಿನಂದನಾ ನುಡಿಗಳನ್ನಾಡಿದರು.
ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟಿನ ವಿಶೇಷ ಸರಕಾರಿ ಅಭಿಯೋಜಕ ಬದರಿನಾಥ್ ಕೆ., ಗೋಪಾಲಕೃಷ್ಣ ನಾಯರಿ ಅವರ ಸಹೋದರ ಕೆ.ರಾಧಾಕೃಷ್ಣ ನಾಯರಿ, ನಿವೃತ್ತ ಬ್ಯಾಂಕ್ ಅಧಿಕಾರಿ ಶಿವಕುಮಾರ್, ರಂಗಕರ್ಮಿ ರಾಮಚಂದ್ರ ದತ್ತ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ನಿವೃತ್ತ ಶಿಕ್ಷಕ ಗಣಪತಿ ನಾಯಕ್ ಸ್ವಾಗತಿಸಿದರು. ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now